ತುಮಕೂರು ನಗರ ಪಾಲಿಕೆಯ 250 ಪೌರ ಕಾರ್ಮಿಕರ ಸೇವೆ ಖಾಯಂ: ಹೈಕೋರ್ಟ್ ಆದೇಶ

Update: 2022-12-12 17:21 GMT

ಬೆಂಗಳೂರು, ಡಿ.12: ತುಮಕೂರು ನಗರ ಪಾಲಿಕೆಯಲ್ಲಿ ದಿನಗೂಲಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ 250 ಪೌರಕಾರ್ಮಿಕರ ಸೇವೆ ಕಾಯಂಗೊಳಿಸಲು ಹೈಕೋರ್ಟ್ ಆದೇಶ ನೀಡಿದೆ. ಆ ಮೂಲಕ ಕಳೆದ ಎರಡು ದಶಕಗಳ ಕಾನೂನು ಸಮರಕ್ಕೆ ಅಂತಿಮ ತೆರೆ ಎಳೆದಿದೆ.

ತುಮಕೂರು ನಗರ ಪಾಲಿಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ಮುಂದಿನ ತುಮಕೂರು ನಗರ ಪಾಲಿಕೆಯು (ಹಿಂದಿನ ನಗರಸಭೆ) ಕೇಸ್‍ನಲ್ಲಿ ವ್ಯಾಜ್ಯದಾರರಾದ 250 ಪೌರಕಾರ್ಮಿಕರ ಸೇವೆಯನ್ನು ಅವರು ಕೆಲಸಕ್ಕೆ ಸೇರಿದ ದಿನಾಂಕದಿಂದ ಪೂರ್ವಾನ್ವಯ ಆಗುವಂತೆ ಕಾಯಂಗೊಳಿಸಬೇಕು. ಅಲ್ಲದೆ, ಎಲ್ಲ ಶಾಸನಬದ್ಧ ಸೌಲಭ್ಯ ಕಲ್ಪಿಸಬೇಕು ಎಂದು ಹೈಕೋರ್ಟ್ ನ್ಯಾಯಪೀಠ ಆದೇಶ ನೀಡಿದೆ. 

ಗುತ್ತಿಗೆದಾರರು ಬದಲಾದರೂ ಪೌರಕಾರ್ಮಿಕರು ಬದಲಾಗಿಲ್ಲ. ಅವರ ಹಿತಾಸಕ್ತಿ ಹಾಗೂ ಹಕ್ಕುಗಳನ್ನು ನ್ಯಾಯಾಲಯ ರಕ್ಷಣೆ ಮಾಡಬೇಕಿದೆ. ಕಡಿಮೆ ಸಂಬಳ ನೀಡುವ ಕುತಂತ್ರದಿಂದ ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಕೊಳ್ಳಲಾಗಿದೆ ಎಂದು ಪಾಲಿಕೆಯ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. 

ಸೇವೆ ಕಾಯಂಗೊಳಿಸಲು ಕೋರಿ ತುಮಕೂರು ನಗರಸಭೆ ಪೌರಕಾರ್ಮಿಕರ ಸಂಘ ಸಲ್ಲಿಸಿದ್ದ ಮನವಿಯನ್ನು ಸರಕಾರ 2002ರ ನವೆಂಬರ್‍ನಲ್ಲಿ ಕೈಗಾರಿಕಾ ನ್ಯಾಯಾಧಿಕರಣಕ್ಕೆ ಶಿಫಾರಸು ಮಾಡಿತ್ತು. ಪ್ರಾರಂಭದಲ್ಲಿ ಪೌರಕಾರ್ಮಿಕರು ಸೇವೆ ಕಾಯಂಗೆ ಅರ್ಹರಲ್ಲ ಎಂದು ನ್ಯಾಯಾಧಿಕರಣ 2006ರ ಜು. 4ರಂದು ಆದೇಶಿಸಿತ್ತು. 

ಈ ಆದೇಶ ಸಲ್ಲಿಸಿದ್ದ ಪೌರಕಾರ್ಮಿಕರ ಸಂಘದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ 2006ರಲ್ಲಿ ವಜಾಗೊಳಿಸಿತ್ತು. ಆದರೆ, ಸಂಘದ ಮೇಲ್ಮನವಿಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ನ್ಯಾಯಾಧಿಕರಣಕ್ಕೆ ಹಿಂದಿರುಗಿಸಿತ್ತು. ಇದರಿಂದ ಮತ್ತೆ ಹೊಸದಾಗಿ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ 2018ರ ಸೆ. 26ರಂದು ದಿನಗೂಲಿ ನೌಕರರ ಸೇವೆ ಕಾಯಂಗೊಳಿಸದೇ ಕೆಲಸಮಾಡಿಸಿಕೊಳ್ಳುತ್ತಿರುವುದು, ಸಮಾನ ಕೆಲಸಕ್ಕೆ ಸಮಾನ ವೇತನ ಪಾವತಿಸದಿರುವುದು, ಪೌರಕಾರ್ಮಿಕರಿಗೆ ಪ್ರತಿ ವರ್ಷ ಸಮವಸ್ತ್ರ, ಪಾದ ರಕ್ಷೆ, ಸುರಕ್ಷಿತ ಕವಚ ನೀಡದಿರುವುದು ನಿಯಮಬಾಹಿರವಾಗಿದೆ. 

ಹೀಗಾಗಿ, ಅವರನ್ನು ನೌಕರಿಗೆ ಸೇರಿದ ದಿನದಿಂದ ಪೂರ್ವಾನ್ವಯವಾಗುವಂತೆ ಕಾಯಂಗೊಳಿಸಬೇಕು ಎಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ 2018ರಲ್ಲಿ ತುಮಕೂರು ಪಾಲಿಕೆ ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯನ್ನು ಇದೀಗ ವಜಾಗೊಳಿಸಿರುವ ಹೈಕೋರ್ಟ್, ನ್ಯಾಯಾಧೀಕರಣದ ಆದೇಶ ಜಾರಿಗೆ ಪಾಲಿಕೆಗೆ 3 ತಿಂಗಳು ಗಡುವು ನೀಡಿದೆ. 

Similar News