ದಲಿತ ಯುವಕನಿಗೆ ದೌರ್ಜನ್ಯ, ಆತ್ಮಹತ್ಯೆ ಪ್ರಕರಣ: ನ್ಯಾಯಕ್ಕಾಗಿ ಆಗ್ರಹಿಸಿ ಕೋಲಾರದಲ್ಲಿ ಡಿಸಿ ಕಚೇರಿಗೆ ಬೈಕ್ ರ್‍ಯಾಲಿ

Update: 2022-12-12 17:07 GMT

ಕೋಲಾರ .ಡಿಸೆಂಬರ್ 12 : ಬೈಕ್ ಹಿಂದಿಕ್ಕಿದ ಎಂಬ ಕಾರಣಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಸವರ್ಣೀಯರು ಥಳಿಸಿದ್ದರಿಂದ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಬಂಧಿಸಿದಂತೆ ವಿವಿಧ ಜನಪರ ಸಂಘಟನೆಗಳಿಂದ ಇಂದು ಮುಳಬಾಗಿಲು ತಾಲೂಕಿನ ಪೆತ್ತಾಂಡ್ಲಹಳ್ಳಿ ಗ್ರಾಮದಿಂದ ಕೋಲಾರ ಜಿಲ್ಲಾಡಳಿತ ಭವನದವರೆಗೆ  ಬೈಕ್ ಜಾಥಾ ನಡೆಸಲಾಯಿತು. 

ಸೋಮವಾರ ಬೆಳಿಗ್ಗೆ 10 ಗಂಟೆಗೆ ಮುಳಬಾಗಿಲಿನ ಪೆತ್ತಾಂಡ್ಲಹಳ್ಳಿ ಗ್ರಾಮದಲ್ಲಿ ಜಮಾವಣೆಗೊಂಡ ವಿವಿಧ ಸಂಘಟನೆಗಳ ಮುಖಂಡರು ಅಂಬೇಡ್ಕರ್ ಹಾಗೂ ಮೃತ ಯುವಕ ಉದಯ ಕಿರಣ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬೈಕ್ ರ್‍ಯಾಲಿ ಪ್ರಾರಂಭಿಸಿ ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಕೋಲಾರ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದರು. 

ಬಳಿಕ ಜಿಲ್ಲಾಡಳಿತ ಭವನದ ಮುಂದೆ ಧರಣಿ ನಡೆಸಿದ ಹೋರಾಟಗಾರರು, ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಯಬೇಕು,  ಮೃತ ಉದಯಕಿರಣ್ ಕುಟುಂಬಕ್ಕೆ 2 ಎಕರೆ ಭೂಮಿಯನ್ನು ನೀಡಬೇಕು ಮತ್ತು ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರೀ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.  

ಇದೇ ವೇಳೆ ಮೃತನ ತಾಯಿ ಮತ್ತು ತಂದೆ ಮಗನ ಸಾವಿಗೆ ಕಾರಣವಾದವರಿಗೆ ಕಠಿಣ ಶಿಕ್ಷೆ ವಿಧಿಸಲು ಕೋರಿ ಕಣ್ಣೀರು ಹಾಕಿದರು. 'ಕಣ್ಣಮುಂದೆಯೇ ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದ ದೃಶ್ಯ ಕಂಡು ಪ್ರಶ್ನೆ ಮಾಡಿದರೂ ಪೆತ್ತಾಂಡ್ಲಹಳ್ಳಿ ಗ್ರಾಮದ ಜನ ಮನುಷ್ಯತ್ವವನ್ನು ತೋರಿಲ್ಲ,  ಈ ಅವಮಾನದಿಂದ ನೊಂದು ಉದಯ ಆತ್ಮಹತ್ಯೆಗೆ ಶರಣಾಗಿದ್ದಾನೆ ಈ ಪರಿಸ್ಥಿತಿ ಯಾರಿಗೂ ಬರಬಾರದು' ಎಂದು ಉದಯ ಕಿರಣ್ ಸೋದರ ಮಾವ ನಾಗರಾಜ್ ಇದೇ ವೇಳೆ ಭಾವುಕರಾಗಿ ನುಡಿದರು. 

ಹೋರಾಟದಲ್ಲಿ ಭಾಗವಹಿಸಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ  ಮಾತನಾಡಿ, ಜಿಲ್ಲಾಡಳಿತ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಕುರಿತು ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಫಲವಾಗಿದೆ. ಅಸ್ಪೃಶ್ಯತೆ ಆಚರಣೆ ಸಾಬೀತು ಮಾಡಲು ಸಾಮಾನ್ಯ ಜನರು ದಾಖಲೆ ನೀಡಲು ಸಾಧ್ಯವಿಲ್ಲ, ಮತ್ತೊಂದೆಡೆ ಜನ ಪ್ರತಿನಿಧಿಗಳು ಸಹ ನಿರ್ಲಕ್ಷ್ಯ ಭಾವನೆ ತೋರಿದ್ದಾರೆ ಎಂದು  ಕಿಡಿಕಾರಿದ್ದಾರೆ .

ಇನ್ನು ಈ ಹೋರಾಟದ ಮುಖ್ಯ ಸಂಘಟಕ ಎಸ್. ಎಫ್. ಐ. ರಾಜ್ಯ ಪ್ರಧಾನ ಕಾರ್ಯದರ್ಶಿ ವಾಸುದೇವರೆಡ್ಡಿ ಮಾತನಾಡಿ,  ಜಾತಿ ಅಸ್ಪೃಶ್ಯತೆ ಹೋಗಲಾಡಿಸಬೇಕಾದ ಜವಾಬ್ದಾರಿ ನಾಗರೀಕ ಸಮಾಜದ ಎಲ್ಲಾ ಪ್ರಜ್ಞಾವಂತರು ಹಾಗೂ ಆಡಳಿತ ವ್ಯವಸ್ಥೆ ಮಾಡಬೇಕು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು.  ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ರಾಜ್ಯಮಟ್ಟಕ್ಕೆ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮೃತ ಉದಯಕಿರಣ್ ತಾಯಿ ರೆಡ್ಡಮ್ಮ, ತಂದೆ ವೆಂಕಟೇಶಪ್ಪ,  ದಲಿತ ಮುಖಂಡರಾದ ಮೆಕಾನಿಕ್ ಶ್ರೀನಿವಾಸ್,  ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ,  ಜನಾಧಿಕಾರ ಸಂಘಟನೆಯ ಕಾರ್ಯದರ್ಶಿ ಹೂವರಸನಹಳ್ಳಿ ರಾಜಪ್ಪ, ಕಲಾವಿದ ಗುಜ್ಜಮಾರನಹಳ್ಳಿ ಜಗದೀಶ್, ಪಿಚ್ಚಳ್ಳಿ ಮಂಜುನಾಥ್, ಇನ್ನು ಮುಂತಾದವರು ಇದ್ದರು. 

Full View

Similar News