ಚೆಕ್ ಬೌನ್ಸ್ ಪ್ರಕರಣ | ಶಾಸಕ ಕೆ.ವೈ.ನಂಜೇಗೌಡ ತಪ್ಪಿತಸ್ಥ; 49.65 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್
Update: 2022-12-17 20:24 IST

ಬೆಂಗಳೂರು, ಡಿ.17: ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ತಪ್ಪಿತಸ್ಥ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಜತೆಗೆ ಶಾಸಕರಿಗೆ ಈ ಕೇಸ್‌ನಲ್ಲಿ 49.65 ಲಕ್ಷ ರೂ.ದಂಡವನ್ನು ವಿಧಿಸಿದೆ.
ಜಿ.ರಾಮಚಂದ್ರ ಅವರು ನೀಡಿದ ದೂರಿನ ಆಧಾರದಲ್ಲಿ ಚೆಕ್ ಬೌನ್ಸ್ ಕೇಸ್‌ನ್ನು ವಿಚಾರಣೆಗೆ ಕೈಗೆತ್ತಿಕೊಂಡ ವಿಶೇಷ ಕೋರ್ಟ್ ನ್ಯಾಯಪೀಠ, ಶಾಸಕರನ್ನು ತಪ್ಪಿತಸ್ಥ ಎಂದು ಆದೇಶ ಹೊರಡಿಸಿದೆ.
ಕೆ.ವೈ.ನಂಜೇಗೌಡ ಅವರು ಜಿ.ರಾಮಚಂದ್ರ ಎಂಬುವರಿಂದ 40 ಲಕ್ಷ ರೂ.ಸಾಲವನ್ನು ಪಡೆದಿದ್ದು, ಬಹುದಿನಗಳಾದರೂ ಸಾಲ ಮರುಪಾವತಿ ಮಾಡಿರಲಿಲ್ಲ. ಆದರೆ, ಸಾಲ ಮರುಪಾವತಿಗಾಗಿ ನಂಜೇಗೌಡ ಅವರು 40 ಲಕ್ಷ ರೂ.ಮೊತ್ತವನ್ನು ಒಳಗೊಂಡ ಚೆಕ್ ಅನ್ನು ನೀಡಿದ್ದರು.
ಆದರೆ, ಈ ಚೆಕ್ ಬೌನ್ಸ್ ಆಗಿದ್ದು, ದೂರು ನೀಡಿದ್ದರು. ಚೆಕ್ ಬೌನ್ಸ್ ಕೇಸ್‌ನಲ್ಲಿ ದಂಡ ಪಾವತಿಸದಿದ್ದರೆ 6 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯವು ಆದೇಶಿಸಿದೆ.