ಬಸ್ ಯಾತ್ರೆ ಇದೆ, ಯಾರೂ ಷರತ್ತು ಹಾಕುವಂತಿಲ್ಲ: ಡಿ.ಕೆ.ಶಿವಕುಮಾರ್

Update: 2022-12-18 12:46 GMT

ಹುಬ್ಬಳ್ಳಿ, ಡಿ.18: ಪಕ್ಷದಲ್ಲಿ ಯಾರು ಯಾವ ಷರತ್ತು ಹಾಕುವಂತಿಲ್ಲ. ಪಕ್ಷದ ತೀರ್ಮಾನವೇ ಅಂತಿಮ. ಪಕ್ಷದ ಅಧ್ಯಕ್ಷನಾದರೂ ನಾನೊಬ್ಬನೇ ಎಲ್ಲವನ್ನು ತೀರ್ಮಾನಿಸುವುದಿಲ್ಲ. ನಾನು ಪ್ರತಿಯೊಂದು ವಿಚಾರವನ್ನು ಸಿದ್ದರಾಮಯ್ಯ, ಹರಿಪ್ರಸಾದ್, ಕಾರ್ಯಧ್ಯಕ್ಷರು, ಜಿಲ್ಲಾ ನಾಯಕರ ಜತೆ ಚರ್ಚೆ ಮಾಡುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ರವಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡದಲ್ಲಿ ಕಾರ್ಯಕ್ರಮ ಮಾಡುವಾಗ ಎಚ್.ಕೆ.ಪಾಟೀಲ್ ಜತೆ, ಬಿಜಾಪುರದಲ್ಲಿ ಕಾರ್ಯಕ್ರಮ ಮಾಡುವಾಗ ಎಸ್.ಆರ್.ಪಾಟೀಲ್, ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಅಲ್ಲಿನ ಶಾಸಕರ ಜತೆ ಚರ್ಚೆ ಮಾಡುತ್ತಿದ್ದೇನೆ ಎಂದರು.

ಪಕ್ಷದ ವತಿಯಿಂದ ಬಸ್ ಯಾತ್ರೆ ಮಾಡಲಾಗುತ್ತಿದ್ದು, ಡಿ.30 ರಂದು ವಿಜಯಪುರದಲ್ಲಿ ಕೃಷ್ಣಾ ನೀರಿನ ಹಂಚಿಕೆ ವಿಚಾರವಾಗಿ ದೊಡ್ಡ ಸಭೆ ಹಮ್ಮಿಕೊಳ್ಳಲಿದ್ದೇವೆ. ಮುಂದಿನ ತಿಂಗಳು 2 ರಂದು ಮಹಾದಾಯಿ ವಿಚಾರವಾಗಿ ಹೋರಾಟ, ಜನಜಾಗೃತಿಯನ್ನು ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಜ.8ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ಅವರು ವಿವರಿಸಿದರು. 

ಬಸ್ ಯಾತ್ರೆ ಮೊದಲ ಹಂತದಲ್ಲಿ ಯಾವ ಜಿಲ್ಲೆಗಳಿಗೆ ಯಾವಾಗ ಪ್ರಯಾಣ ಮಾಡುತ್ತದೆ ಎಂಬುದರ ಕುರಿತು ಬೆಳಗಾವಿಯಲ್ಲಿ ನಡೆಯಲಿರುವ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ. ವೇಳಾಪಟ್ಟಿ ಬಹುತೇಕ ಅಂತಿಮವಾಗಿದ್ದು, ಇಂದು ಸಭೆಯಲ್ಲಿ ಪಾಲ್ಗೊಳ್ಳಲಿರುವ ನಾಯಕರ ಮುಂದೆ ಈ ವಿಚಾರ ಇಟ್ಟು ನಂತರ ಅಂತಿಮ ತೀರ್ಮಾನ ಘೋಷಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಅಧಿವೇಶನದ ನಡುವೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ನಾವು ನಮ್ಮ ನಾಯಕರನ್ನು ಭೇಟಿ ಮಾಡುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗದ ಎಲ್ಲ ನಾಯಕರನ್ನು ಆಹ್ವಾನಿಸಿದ್ದೇವೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸುರ್ಜೆವಾಲ ಭಾಗವಹಿಸಲಿದ್ದಾರೆ. ನಂತರ ಹುಬ್ಬಳ್ಳಿ ಮೂಲಕ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದೇನೆ ಎಂದು ಅವರು ತಿಳಿಸಿದರು.

ಪಕ್ಷದ ಟಿಕೆಟ್ ಯಾರಿಗೆ ನೀಡುತ್ತೀರಿ, ಮಾನದಂಡವೇನು ಎಂದು ಕೇಳಿದ ಪ್ರಶ್ನೆಗೆ, ‘ಯಾರು ಚುನಾವಣೆಯಲ್ಲಿ ಗೆಲ್ಲುತ್ತಾರೋ ಅವರೆಲ್ಲರಿಗೂ ಟಿಕೆಟ್ ನೀಡುತ್ತೇವೆ. ಎಐಸಿಸಿ ಮುಖಂಡರು ಪ್ರತಿ ಕ್ಷೇತ್ರದಲ್ಲೂ ಟಿಕೆಟ್ ನೀಡಿಕೆ ಸಂಬಂಧ ಚರ್ಚೆ ಮಾಡುತ್ತಾರೆ. ಕಷ್ಟಕಾಲದಲ್ಲಿ ಯಾರು ಗೆದ್ದು ಕ್ಷೇತ್ರ ಉಳಿಸಿಕೊಂಡಿದ್ದಾರೋ ಅವರಿಗೆ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡುತ್ತೇವೆ ಎಂದರು.

ಕುಕ್ಕರ್ ಬ್ಲಾಸ್ಟ್ ವಿಚಾರವಾಗಿ ತಮ್ಮ ಹೇಳಿಕೆಗೆ ಬಿಜೆಪಿ ಪ್ರತಿಭಟನೆ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ಏನಾದರೂ ಪ್ರತಿಭಟನೆ ಮಾಡಲಿ, ನನ್ನ ಹೆಸರು ಪ್ರಚಾರ ಮಾಡಲಿ. ಭಯೋತ್ಪಾದನೆಯಿಂದ ನಾವು ನಮ್ಮ ನಾಯಕರುಗಳನ್ನು ಕಳೆದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷ ಪ್ರತಿ ಹಂತದಲ್ಲೂ ಭಯೋತ್ಪಾದನೆಯನ್ನು ವಿರೋಧ ಮಾಡಿಕೊಂಡು, ದಮನ ಮಾಡಿಕೊಂಡು ಬಂದಿದೆ ಎಂದರು.

ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಮುಖ ಆರೋಪಿಗೆ ಪ್ರಜ್ಞೆ ಬಂದಿಲ್ಲ. ಹೀಗಾಗಿ ಅವನ ವಿಚಾರಣೆ ಮಾಡಿಲ್ಲ. ಅವನ ತನಿಖೆ ನಂತರ ಮಾಹಿತಿ ಪಡೆಯಬೇಕು, ಆನಂತರ ಮಾಧ್ಯಮಗಳು ಈ ವಿಚಾರವಾಗಿ ಮಾಹಿತಿ ಪ್ರಕಟಿಸಬೇಕು ಎಂದು ಕೇಳಿಕೊಂಡಿದ್ದಾರೆ. ಪೊಲೀಸ್ ಆಯುಕ್ತರು ಹೇಳುವ ಮುನ್ನವೇ ಡಿಜಿ ಅವರು ಹೇಳಿಕೆ ನೀಡಿದ್ದಾರೆ. ಆತ ಭಯೋತ್ಪಾದಕನೆ ಇರಬಹುದು. ತನಿಖೆ ಮಾಡಿದ ನಂತರ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಅವರು ಆಗ್ರಹಿಸಿದರು.

Similar News