ಆನಂದ್ ಮಾಮನಿ, ಮುಲಾಯಂ ಸಿಂಗ್, ಜಬ್ಬಾರ್ ಖಾನ್ ಹೊನ್ನಳ್ಳಿ ಸೇರಿದಂತೆ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ

Update: 2022-12-19 10:31 GMT

ಬೆಳಗಾವಿ, (ಸುವರ್ಣ ವಿಧಾನಸೌಧ)ಡಿ. 19: ವಿಧಾನ ಮಂಡಲ ಉಭಯ ಸದನಗಳ ಚಳಿಗಾಲದ ಅಧಿವೇಶನ ವಿದ್ಯುಕ್ತವಾಗಿ ಆರಂಭಗೊಂಡಿದೆ. ಮೊದಲ ದಿನ ಸಂಪ್ರದಾಯದಂತೆ ವಿಧಾನಸಭೆಯ ಉಪಸಭಾಧ್ಯಕ್ಷ ಚಂದ್ರಶೇಖರ್ ಮಾಮನಿ, ಉತ್ತರ ಪ್ರದೇಶ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್, ರಾಜ್ಯಸಭೆ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದೀಖಿ, ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ ಸೇರಿದಂತೆ ಅಗಲಿದ ಗಣ್ಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ವಿಧಾನಸಭೆ ಕಲಾಪ ವಂದೇ ಮಾತರಂ ಗೀತೆಯೊಂದಿಗೆ ಆರಂಭವಾಯಿತು. ಕಾರ್ಯಕಲಾಪ ಪಟ್ಟಿಯಂತೆ ಸಂತಾಪ ಸೂಚನೆ ಕೈಗೆತ್ತಿಕೊಂಡ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಉಪಸಭಾಧ್ಯಕ್ಷ ಆನಂದ್ ಮಾಮನಿ, ಮುಲಾಯಂ ಸಿಂಗ್ ಯಾದವ್, ರಾಜ್ಯಸಭಾ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದೀಖಿ, ಮಾಜಿ ಶಾಸಕರಾದ ಝಬ್ಬಾರ್ ಖಾನ್ ಹೊನ್ನಳ್ಳಿ, ಶ್ರೀಶೈಲಪ್ಪ ಬಿದರೂರು, ಯಕ್ಷಗಾಣ ಕಲಾವಿದ ಕುಂಬ್ಲೆ ಸುಂದರರಾವ್, ಎಸ್.ಎನ್.ಪಾಟೀಲ್ ಇವರ ನಿಧನವನ್ನು ಸದನದ ಗಮನಕ್ಕೆ ತಂದರು.

ಜನೋಪಯೋಗಿ ವ್ಯಕ್ತಿ: ಸ್ಪೀಕರ್ ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಪಸ್ಪೀಕರ್ ಆನಂದ್ ಮಾಮನಿ ಹಾಗೂ ನಮ್ಮ ಕುಟುಂಬದ ನಡುವೆ ಹಲವು ವರ್ಷಗಳ ಸಂಬಂಧ-ಒಡನಾಟ ಇದೆ. ನಾನು ಹಾಗೂ ಮಾಮನಿ ಜೊತೆಗೆ ಬಿಜೆಪಿ ಸೇರ್ಪಡೆ ಆಗಿದ್ದೆವು.ಅವರು ಮಾದರಿ ಶಾಸಕಾಗಿದ್ದರು ಎಂದು ಶ್ಲಾಘಿಸಿದರು.

ಮಾಮನಿ ಅವರಿಗೆ ಅನಾರೋಗ್ಯ ಇದ್ದಾಗಲೂ ಅದನ್ನು ಅವರು ಯಾರಲ್ಲೂ ಹೇಳಿಕೊಂಡಿರಲಿಲ್ಲ. ಅವರು ಅನಾರೋಗ್ಯಕ್ಕೆ ಒಳಗಾದಾಗ ಅವರನ್ನು ಸೂಕ್ತ ಚಿಕಿತ್ಸೆ ನೀಡಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದೆವು ಎಂದು ಸ್ಮರಿಸಿದ ಅವರು, ಮಾಮನಿಯವರೊಬ್ಬ ಜನಪ್ರಿಯ ಮತ್ತು ಜನೋಪಯೋಗಿ ವ್ಯಕ್ತಿಯಾಗಿದ್ದರು ಎಂದು ನೆನಪು ಮಾಡಿಕೊಂಡÀರು.

ವಿರೋಧಿಗಳು ಗೌರವಿಸುವ ಗುಣ: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಲಾಯಂ ಸಿಂಗ್ ಯಾದವ್ ಕರ್ನಾಟಕ ರಾಜ್ಯದಲ್ಲೂ ಸಮಾಜವಾದಿ ಪಕ್ಷ ಕಟ್ಟುವ ಪ್ರಯತ್ನ ನಡೆಸಿದ್ದರು. ಬಂಗಾರಪ್ಪರ ಮೂಲಕ ಈ ಪ್ರಯತ್ನ ನಡೆದಿತ್ತು. ತಮ್ಮ ವಿರೋಧಿ ಸಿದ್ಧಾಂತದವರನ್ನು ಅತ್ಯಂತ ಗೌರವದದಿಂದ ಕಾಣುತ್ತಿದ್ದ ಅಪರೂಪದ ವ್ಯಕ್ತಿ ಎಂದು ಗುಣಗಾನ ಮಾಡಿದರು.

ದೀರ್ಘ ಅವಧಿ ರಾಜಕಾರಣದ್ದ ಮುಲಾಯಂ: ಯುಪಿ ಸಿಎಂ ಮುಲಾಯಂ ಸಿಂಗ್ ಯಾದವ್, ದೀರ್ಘಕಾಲ ರಾಜಕಾರಣ ಮಾಡಿದ ಕೆಲವೇ ಕೆಲವು ರಾಜಕಾರಣಿಗಳ ಪೈಕಿ ಯಾದವ್ ಅವರು ಒಬ್ಬರು. ಜನಪ್ರಿಯ ರಾಜಕಾರಣಿಯಾಗಿದ್ದರು. ಸಾಮಾಜಿಕ ನ್ಯಾಯದ ಪರವಾಗಿದ್ದರು ಎಂದು ಸ್ಮರಿಸಿದರು.

ಹತ್ತು ಬಾರಿ ಶಾಸಕರು, ಒಮ್ಮೆ ವಿಧಾನ ಪರಿಷತ್ ಸದಸ್ಯರು ಹಾಗೂ ಏಳು ಬಾರಿ ಲೋಕಸಭೆ ಸದಸ್ಯರಾಗಿ ಸುಮಾರು 55 ವರ್ಷಗಳ ದೀರ್ಘಕಾಲ ರಾಜಕಾರಣದಲ್ಲಿದ್ದ ಮುಲಾಯಂ, ದೇಶದ ರಾಜಕಾರಣದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದರು ಎಂದು ಹೇಳಿದರು.

ಮಾಜಿ ಸಿಎಂ ಯಡಿಯೂರಪ್ಪ, ವಿಧಾನಸಭೆ ಉಪನಾಯಕ ಯು.ಟಿ.ಖಾದರ್, ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪೂರ್, ಸಚಿವೆ ಶಶಿಕಲಾ ಜೊಲ್ಲೆ, ಸೋಮಶೇಖರ್ ರೆಡ್ಡಿ ಸೇರಿದಂತೆ ಇನ್ನಿತರ ಸದಸ್ಯರು ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದರು. ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನಚರಣೆ ಮಾಡಲಾಯಿತು. ಬಳಿಕ ಸದನವನ್ನು ನಾಳೆ(ಡಿ.20)ಕ್ಕೆ ಮುಂದೂಡಲಾಯಿತು.

'ಮಾಜಿ ಶಾಸಕ ಶ್ರೀಶೈಲಪ್ಪ ಬಿದನೂರು ಟಿಕೆಟ್ ಕೋರಿ 2ಲಕ್ಷ ರೂ. ಹಣವನ್ನು ನೀಡಿ ಅರ್ಜಿ ಸಲ್ಲಿಸಿ ಅಕಾಲಿಕ ನಿಧನರಾಗಿದ್ದು, ವಿಧಿಯ ಆಟ ಹೀಗೆ ಎಂದು ಹೇಳಲು ಸಾಧ್ಯವಿಲ್ಲ. ಅವರು ಸಾಯುವ ಎರಡು ದಿನ ಮೊದಲು ನನ್ನನ್ನು ಭೇಟಿ ಮಾಡಿದ್ದರು. ರಾಜಕಾರಣವನ್ನು ನಾವು ಬಿಟ್ಟರು, ಅದು ನಮ್ಮನ್ನು ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿ'.

-ಸಿದ್ದರಾಮಯ್ಯ ವಿಪಕ್ಷ ನಾಯಕ

ಉಪಸಭಾಧ್ಯಕ್ಷ ಆನಂದ ಮಾಮನಿ, ಹತ್ತಿ ವ್ಯಾಪಾರದಿಂದ ವಿಧಾನಸಭೆಗೆ ಅವರು ಬಂದಿದ್ದರು.ಅವರ ನಡೆದ ಬಂದ ಹಾದಿ ಸ್ಪೂರ್ತಿದಾಯಕ.ಅವರು ಕ್ಷೇತ್ರದ ಜನರೊಂದಿಗೆ ಭಾವನಾತ್ಮಕ ಕಳಾಜಿ ಹೊಂದಿದ್ದರು. ಹಾಗೆ, ಜಬ್ಬಾರ್ ಅವರು ಶಾಂತಿ ಮತ್ತು ಸಜ್ಜನರಾಗಿದ್ದರು.

-ಕೋಟಾ ಶ್ರೀನಿವಾಸ ಪೂಜಾರಿ, ಸಮಾಜಕಲ್ಯಾಣ ಸಚಿವ

Similar News