ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಸ್ಥಗಿತ; ಸಮಾಜ ಕಲ್ಯಾಣ ಇಲಾಖೆ ಸ್ಪಷ್ಟೀಕರಣ

Update: 2022-12-19 17:02 GMT

ಬೆಂಗಳೂರು, ಡಿ.19: ರಾಜ್ಯದಲ್ಲಿ ಒಂಭತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಜಾರಿ ಮಾಡುತ್ತಿದ್ದು, ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಅನುಷ್ಟಾನ ಮಾಡಲಾಗುತ್ತಿದೆ. ಹೊರತು, ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಕಾರ್ಯಕ್ರಮ ಕೇಂದ್ರ ಸರಕಾರದಿಂದ ಸ್ಥಗಿತವಾಗಿರುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯು ಸ್ಪಷ್ಟಪಡಿಸಿದೆ. 

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ 9 ಮತ್ತು 10ನೆ ತರಗತಿಗೆ ಸಂಬಂಧಿಸಿ 2022ರ ಮಾರ್ಚ್‍ನಲ್ಲಿ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇದರ ಅನ್ವಯ 9 ಮತ್ತು 10ನೇ ತರಗತಿಯಲ್ಲಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದರಗಳನ್ನು ಡೇ ಸ್ಕಾಲರ್‍ಗೆ 3500 ರೂ. ಹಾಸ್ಟೇಲರ್ ಗೆ  7000 ರೂ.ಗಳನ್ನು ನೀಡಲಾಗುತ್ತಿದೆ.

1ರಿಂದ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುತ್ತಿದೆ. ಕಾರ್ಯಕ್ರಮವು ಸಂಪೂರ್ಣ ರಾಜ್ಯ ವಲಯ ಕಾರ್ಯಕ್ರಮವಾಗಿದ್ದು, ರಾಜ್ಯವಲಯದಲ್ಲಿ ಬಿಡುಗಡೆಯಾಗುವ ಅನುದಾನದಲ್ಲಿ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುತ್ತಿದೆ.

1ರಿಂದ 5ನೆ ತರಗತಿಯಲ್ಲಿರುವ ಬಾಲಕರಿಗೆ ಮತ್ತು ಬಾಲಕಿಯರಿಗೆ 1000 ರೂ. 6 ಮತ್ತು 7ನೆ ತರಗತಿಯಲ್ಲಿರುವ ಬಾಲಕರಿಗೆ 1150 ರೂ. ಬಾಲಕಿಯರಿಗೆ 1250 ರೂ., ಮತ್ತು 8ನೆ ತರಗತಿಯಲ್ಲಿರುವ ಬಾಲಕರಿಗೆ 1250 ರೂ. ಬಾಲಕಿಯರಿಗೆ 1350 ರೂ. ಮಂಜೂರು ಮಾಡಲಾಗುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ. 

Similar News