ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಅನುದಾನವನ್ನೇ ಬಿಡುಗಡೆ ಮಾಡಿಲ್ಲ: ಯತೀಂದ್ರ ಸಿದ್ದರಾಮಯ್ಯ
Update: 2022-12-20 09:45 GMT
ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ. 20: ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ವರುಣ ಕ್ಷೇತ್ರವೂ ಸೇರಿದಂತೆ ಯಾವುದೇ ಕ್ಷೇತ್ರಕ್ಕೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಕ್ಷೇತ್ರದಲ್ಲಿ ನೂರು ವರ್ಷ ಹಳೆದಾದ ಚರ್ಚ್, ಅಲ್ಪಸಂಖ್ಯಾತ ಸಮುದಾಯ ಭವನ ಹಳೆಯದಾಗಿದೆ. ಅವುಗಳ ದುರಸ್ತಿಗೆ ಅನುದಾನದ ಅಗತ್ಯವಿದೆ' ಎಂದು ಪ್ರತಿಪಾದಿಸಿದರು.
ಬಳಿಕ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘2018-19ರಲ್ಲಿ ಐದು ಕೋಟಿ ರೂ. ಬಿಡುಗಡೆ ಆಗಿತ್ತು. ಆ ಬಳಿಕ ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಕೆಲವು ಕಡಿತ ಆಗಿವೆ. ನಿರ್ದಿಷ್ಟವಾಗಿ ಯಾವ ಸಮುದಾಯ ಭವನ, ಚರ್ಚ್ ಎಂದು ಮಾಹಿತಿ ನೀಡಿದರೆ ಹಣ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.