ಕಬ್ಬು ತೂಕದಲ್ಲಿ ಭಾರೀ ಮೋಸ: ಸರಕಾರದ ವಿರುದ್ಧ ಬಿಜೆಪಿ ಸದಸ್ಯ ಲಕ್ಷ್ಮಣ್ ಸವದಿ ಅಸಮಾಧಾನ

Update: 2022-12-20 15:26 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.20: ಸದನದಲ್ಲಿ ಸರಕಾರದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಲಕ್ಷ್ಮಣ್ ಸವದಿ, ಕಬ್ಬು ತೂಕದಲ್ಲಿ ಕಾರ್ಖಾನೆ ಮಾಲಕರು ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಂಗಳವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಪ್ರತಿ ಬಾರಿ ಬೆಳೆಗಾರರು ಕಬ್ಬು ಕಟಾವು ಮಾಡಿಕಾರ್ಖಾನೆಗೆ ತೆಗೆದುಕೊಂಡ ಸಂದರ್ಭದಲ್ಲಿ ಟನ್‍ಗಟ್ಟಲೇ ಕಬ್ಬು ತೂಕದಲ್ಲಿ ಮೋಸ ಆಗುತ್ತದೆ.ಅದರಲ್ಲೂ ಇತ್ತೀಚಿಗೆ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, 20 ಟನ್‍ಕಬ್ಬು ತೂಕವಿದ್ದರೂ, ಮಾಲಕರು ಕೇವಲ 18 ಟನ್ ಮಾತ್ರ ಇದೆ ಎಂದಿದ್ದಾರೆ ಎಂದು ಉಲ್ಲೇಖಿಸಿದರು.

ಕಾರ್ಖಾನೆ ಮಾಲಕರು ಬೆಳೆಗಾರರ ರಕ್ತ ಹೀರುತ್ತಾರೆ. ಸುಲಭವಾಗಿ ಮೋಸ ಮಾಡುತ್ತಾರೆ. ಅವರಿಗೆ ನಾನು ಕೈಮುಗಿದು ಕೇಳಿಕೊಳ್ಳುತ್ತಾನೆ, ತೂಕದಲ್ಲಿ ಮೋಸ ಮಾಡಿದರೆ, ಯಾರು ಅಭಿವೃದ್ಧಿ ಹೊಂದಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ತೂಕದ ವಿಚಾರವನ್ನೆ ಇಟ್ಟು ಕೊಂಡು ಇತ್ತೀಚಿಗೆ ಕಬ್ಬು ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದೇವೆ.ಆದರೆ, ಒಂದು ಪ್ರಕರಣವೂ ತೂಕದಲ್ಲಿ ವಂಚನೆ ಆಗಿರುವುದು ಬೆಳಕಿಗೆ ಬಂದಿಲ್ಲ. ಆದರೂ, ಮುಂದೆಯೂ ಇದೇ ಮಾದರಿಯಲ್ಲಿ ದಾಳಿ ಮುಂದುವರಿಸಲಾಗುವುದು ಎಂದು ಸಮಾಜಾಯಿಷಿ ನೀಡಿದರು.

ಬಳಿಕ ಪ್ರತಿಕ್ರಿಯಿಸಿದ ಬೃಹತ್‍ ಕೈಗಾರಿಕಾ ಸಚಿವ ಮುರುಗೇಶ್‍ ಆರ್.ನಿರಾಣಿ, ಕಬ್ಬು ತೂಕದಲ್ಲಿ ಯಾವುದೇ ಮೋಸ ಆಗುತ್ತಿಲ್ಲ. ಏಕೆಂದರೆ ಬೆಳೆಗಾರರು ಖಾಸಗಿ ಕಡೆಯೂ ತೂಕ ಮಾಡಿಸಿಕೊಂಡೇ ಕಾರ್ಖಾನೆಗಳಿಗೆ ತಲುಪುತ್ತಾರೆ. ಹಾಗಾಗಿ, ಟನ್‍ಗಟ್ಟಲೇ ಮೋಸ ಆಗುವುದಿಲ್ಲ. ಆದರೆ, ಕಬ್ಬು ಬೆಳೆಯಲ್ಲಿ ಆಗಾಗ ಅಲ್ಪತೂಕ ಮಾತ್ರ ಕಡಿಮೆಯಾಗುವುದು ಸಹಜ ಎಂದು ಹೇಳಿದರು.

ಇದಕ್ಕೆ ಒಪ್ಪದ ಲಕ್ಷ್ಮಣ ಸವದಿ, ಕಬ್ಬು ಮಾಲಕರು ತೂಕದಲ್ಲಿ ಮೋಸ ಮಾಡುವುದೇ ಇಲ್ಲ ಎನ್ನುವ ಸಚಿವರ ಉತ್ತರ ಒಪ್ಪಲು ಸಾಧ್ಯವೇ ಇಲ್ಲ. ಈ ಬಗ್ಗೆ ಅರ್ಧಗಂಟೆಯ ಚರ್ಚೆ ನಡೆದರೆ ಇನ್ನಷ್ಟು ಮಾಹಿತಿ ಸದನಕ್ಕೆ ನೀಡುತ್ತೇನೆ ಎಂದು ಗಮನ ಸೆಳೆದರು.

Similar News