ರಾಜ್ಯದಲ್ಲಿ ಹೊಸದಾಗಿ RTO ಕಚೇರಿ ಆರಂಭಿಸುವುದಿಲ್ಲ: ಸಾರಿಗೆ ಸಚಿವ ಬಿ.ಶ್ರೀರಾಮುಲು

Update: 2022-12-21 11:11 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 21:‘ರಾಜ್ಯದಲ್ಲಿ ಸಾರಿಗೆ ಇಲಾಖೆಯಲ್ಲಿ ಇನ್ನು ಮುಂದೆ ಹೊಸದಾಗಿ ಆರ್‍ಟಿಓ ಕಚೇರಿಗಳನ್ನು ಆರಂಭಿಸುವುದಿಲ್ಲ’ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟಪಡಿಸಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಸುಕುಮಾರಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಲಾಖೆಯಲ್ಲಿ 30ಕ್ಕೂ ಹೆಚ್ಚು ಸೇವೆಗಳನ್ನು ಆನ್‍ಲೈನ್‍ನಲ್ಲಿ ಒದಗಿಸಲಾಗುತ್ತಿದೆ. ಜತೆಗೆ ಗ್ರಾಮ ಒನ್ ಮತ್ತು ಜನಸೇವಕ ಯೋಜನೆಗಳಿಂದಲೂ ಸಾರಿಗೆ ಇಲಾಖೆಯ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸಲಾಗುತ್ತಿದೆ. ಹೀಗಾಗಿ ಯಾವುದೇ ಹೊಸ ಆರ್‍ಟಿಓ ಕಚೇರಿಗಳನ್ನು ಆರಂಭಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದರು.

ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂದಾಪುರದಲ್ಲಿ ಆರ್‍ಟಿಓ ಕಚೇರಿ ಆರಂಭಿಸುವ ಅವಶ್ಯಕತೆಯೂ ಇಲ್ಲ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸುಕುಮಾರ ಶೆಟ್ಟಿ, ಉಡುಪಿ ಜಿಲ್ಲೆಯಲ್ಲಿ ಒಂದೇ ಪ್ರಾದೇಶಿಕ ಸಾರಿಗೆ ಕಚೇರಿ(ಆರ್‍ಟಿಓ) ಇರುವುದರಿಂದ ದೂರ ಬೈಂದೂರು ಮತ್ತು ಕುಂದಾಪುರ ತಾಲೂಕುಗಳ ಜನತೆಗೆ ತೊಂದರೆ ಆಗುತ್ತಿದೆ. ಹೀಗಾಗಿ ಕುಂದಾಪುರ ತಾಲೂಕಿನಲ್ಲಿ ನೂತನ ಆರ್‍ಟಿಓ ಕಚೇರಿ ಆರಂಭಿಸಬೇಕು ಎಂದು ಆಗ್ರಹಿಸಿದರು.

Similar News