ಪ್ರಚೋದನಕಾರಿ ಹೇಳಿಕೆ: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ ವಿರುದ್ಧ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಿಂದ ದೂರು

Update: 2022-12-28 14:34 GMT

ಶಿವಮೊಗ್ಗ, ಡಿ.28: ಪ್ರಚೋದನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ವಿರುದ್ಧ ಬುಧವಾರ ಸಂಜೆ ಇಲ್ಲಿನ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ.   

ರವಿವಾರ ಶಿವಮೊಗ್ಗದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಠಾಕೂರ್, ಹಿಂದೂ ಕಾರ್ಯಕರ್ತರ ಹತ್ಯೆಯ ಬಗ್ಗೆ ಮಾತನಾಡುತ್ತಾ, "ತಮ್ಮ ಮನೆಗಳಲ್ಲಿ ಕನಿಷ್ಠ ಚಾಕುಗಳನ್ನು ಇಟ್ಟುಕೊಳ್ಳಿ. ಏಕೆಂದರೆ ಪ್ರತಿಯೊಬ್ಬರೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ'' ಎಂದು ಹೇಳಿದ್ದರು. ಈ ಹೇಳಿಕೆ ವಿವಾದ ಸೃಷ್ಟಿಸಿತ್ತು.

ಈ ಪ್ರಚೋದನಕಾರಿ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,  ಈ ವಿಡಿಯೋ ಆಧರಿಸಿ   ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಸಾಮಾಜಿಕ ಜಾಲತಾಣ ಟ್ವಟರ್ ನಲ್ಲಿ ತಹಸೀನ್ ಪೂನಾವಾಲಾ ಎಂಬವರು ಶಿವಮೊಗ್ಗ ಎಸ್‌ಪಿ ಮಿಥುನ್‌ಕುಮಾರ್ ಅವರಿಗೆ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಕೋಟೆ ಪೊಲೀಸರು ಇಂದು (ಬುಧವಾರ) ಹನ್ನೊಂದು ಗಂಟೆಯೊಳಗೆ ಬಂದು ದೂರು ನೀಡುವಂತೆ ನೋಟಿಸ್ ನೀಡಿದ್ದರು ಎಂದು ತಿಳಿದು ಬಂದಿದೆ.

'ಎಐಸಿಸಿ ಮುಖಂಡರಾಗಿರುವ ತೆಹಸೀನ್ ಪೂನಾವಾಲಾ ಅವರಿಗೆ ಸಮಯದ ಅಭಾವದಿಂದ  ಶಿವಮೊಗ್ಗಕ್ಕೆ ಬರಲು ಸಾಧ್ಯವಾಗಿಲ್ಲ. ಹಾಗಾಗಿ ಅವರ ಪರವಾಗಿ ತೆಹಸೀನ್ ಪೂನಾವಾಲಾ ಪರವಾಗಿ ಜಿಲ್ಲಾ ಕಾಂಗ್ರೆಸ್‌ನಿಂದ ದೂರು ಸಲ್ಲಿಸಲಾಗಿದೆ' ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದರು. 

Similar News