ಮಂಡ್ಯ ಜನರಿಗೆ ಮಂಕುಬೂದಿ ಎರಚಲು ಅಮಿತ್ ಶಾ ವಿಫಲ ಪ್ರಯತ್ನ: ಜೆಡಿಎಸ್ ವಾಗ್ದಾಳಿ

''ಅಪಪ್ರಚಾರದ ಜಾಗಟೆಗೆ ಡ್ರಮ್ಮು ಬಾರಿಸುವ ಕೆಲಸ''

Update: 2022-12-31 05:44 GMT

ಬೆಂಗಳೂರು, ಡಿ.31: ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ಅವರು ಮಂಡ್ಯ ಜನರಿಗೆ ಮಂಕುಬೂದಿ ಎರಚಲು ವಿಫಲ ಪ್ರಯತ್ನ ನಡೆಸಿದ್ದಾರೆ. ಅವರ ಪಕ್ಷದ ಕೆಲ ನಾಯಕರು ಹೊಡೆಯುತ್ತಿರುವ ಅಪಪ್ರಚಾರದ ಜಾಗಟೆಗೆ ಡ್ರಮ್ಮು ಬಾರಿಸುವ ಕೆಲಸ ಮಾಡಿದ್ದಾರೆ' ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್ (@JanataDal_S) 'ಮಂಡ್ಯದವರನ್ನು ಮೋಸ ಮಾಡಲು ಆಗುವುದಿಲ್ಲ ಅಮಿತ್ ಶಾ ಜೀ' ಎಂದು ಹೇಳಿದೆ. 

''ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಮಂಡ್ಯದಲ್ಲಿ ಎಟಿಎಂ ಬಗ್ಗೆ ಮಾತನಾಡಿದ್ದಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಎಂದರೆ ಹೀಗೆಯೇ. ಸುಳ್ಳು ಹೇಳುವುದಕ್ಕೆ ಸಂಕೋಚ ಬೇಡವೇ? ಕರ್ನಾಟಕ ಮಾತ್ರವಲ್ಲ, ಇಡೀ ಭಾರತವೇ ಭಾರತೀಯ ಜನತಾ ಪಕ್ಷದ ಎಟಿಎಂ ಆಗಿದೆ. ಇದು ಸುಳ್ಳಾ?'' ಎಂದು ಪ್ರಶ್ನೆ ಮಾಡಿದೆ. 

''ಯಾರಿಗೆ ಯಾವುದು ಎಟಿಎಂ? ಎನ್ನುವುದು ಕರ್ನಾಟಕಕ್ಕೆ ಗೊತ್ತು. 40% ಕಮೀಷನ್ ಯಾರ ಎಟಿಎಂಗೆ ಹೋಯಿತು? ಪಿಎಸ್ ಐ ಹಗರಣ ಯಾರ ಎಟಿಎಂ? ಕೋವಿಡ್ ಸಾವುಗಳ ಮೇಲೆ ದೋಚಿದ ಹಣ ಯಾವ ಹುಂಡಿಗೆ ಹೋಯಿತು? ಅಪರೇಷನ್ ಕಮಲಕ್ಕೆ ಯಾವ ಎಟಿಎಂನಿಂದ ಬಂತು?'' ಎಂದು ಕಿಡಿಕಾರಿದೆ. 

''ಇವತ್ತು ದೇವರಾಯನ ದುರ್ಗದ ಐಬಿಯಲ್ಲಿ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೂ 40% ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಅಮಿತ್ ಶಾ ಸಾಹೇಬರು ಇದಕ್ಕೆ ಉತ್ತರ ಕೊಡುತ್ತಾರೆಯೇ?'' ಎಂದು ಪ್ರಶ್ನೆ ಮಾಡಿದೆ. 

Similar News