ಕೆಇಎ ನಿರ್ದೇಶಕರಿಗೆ ಹೈಕೋರ್ಟ್ ನಿಂದ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ

ಕ್ರೀಡಾ ಕೋಟಾದ ರ‍್ಯಾಂಕಿಂಗ್ ಹೊಸದಾಗಿ ನಿಗದಿಪಡಿಸದ ಹಿನ್ನೆಲೆ

Update: 2022-12-31 14:24 GMT

ಬೆಂಗಳೂರು, ಡಿ.31: ನ್ಯಾಯಾಲಯದ ಆದೇಶವಿದ್ದರೂ ಎಂಬಿಬಿಎಸ್ ಕೋರ್ಸ್‍ಗಳ ಪ್ರವೇಶಕ್ಕೆ ರಾಜ್ಯದ ಕ್ರೀಡಾ ಕೋಟಾದ ರ್ಯಾಂಕಿಂಗ್ ಅನ್ನು ಹೊಸದಾಗಿ ನಿಗದಿಪಡಿಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯಕಾರಿ ನಿರ್ದೇಶಕಿ ಎಸ್.ರಮ್ಯಾ ಮತ್ತು ರಾಜ್ಯ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್ ಅವರಿಗೆ ಹೈಕೋರ್ಟ್ ನ್ಯಾಯಾಂಗ ನಿಂದನೆಯ ತುರ್ತು ನೋಟಿಸ್ ಜಾರಿಗೊಳಿಸಿದೆ.

ಈಜು ಡೈವಿಂಗ್ ಚಾಂಪಿಯನ್ ವಿದ್ಯಾರ್ಥಿನಿ ಅದಿತಿ ದಿನೇಶ್ ರಾವ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ನೋಟಿಸ್ ಜಾರಿ ಮಾಡಿದೆ. 

ಎಂಬಿಬಿಎಸ್ ಸೀಟು ಸಿಗದೆ ಬಿಡಿಎಸ್ ಕೋರ್ಸ್ ಸೇರಿದ್ದ ಅಭ್ಯರ್ಥಿ ಅದಿತಿ, ಮೂವರು ಚೆಸ್ ಆಟಗಾರರಾದ ಸಾತ್ವಿಕ್ ಶಿವಾನಂದ್, ಎಸ್.ಆರ್.ಪ್ರತಿಮಾ ಮತ್ತು ಖುಷಿ ಎಂ.ಹೊಂಬಾಳ್ ಅವರಿಗೆ ಕ್ರೀಡಾಕೋಟಾದಲ್ಲಿ ಪ್ರವೇಶ ನೀಡಿರುವ ಕ್ರಮವನ್ನು ಪ್ರಶ್ನಿಸಿದ್ದರು.

ಅರ್ಜಿಯನ್ನು 2022ರ ಡಿ.13ರಂದು ಭಾಗಶಃ ಮಾನ್ಯ ಮಾಡಿದ್ದ ಹೈಕೋರ್ಟ್, ಕ್ರೀಡಾ ಕೋಟಾದಡಿ ಪ್ರವೇಶ ಪಡೆಯಬೇಕಾದರೆ ಅಭ್ಯರ್ಥಿಗಳು ಅಂತಾರಾಷ್ಟ್ರೀಯ ಸ್ಪರ್ಧೆಗಳು/ಚಾಂಪಿಯನ್‍ಶಿಪ್‍ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಪದಕ/ಕಪ್ ಜಯಿಸಿರಬೇಕು. ಅದರಂತೆ, ಅದಿತಿ ಭಾರತೀಯ ಈಜು ಫೆಡರೇಷನ್ ಆಯೋಜಿಸಿದ್ದ ಚಾಂಪಿಯನ್‍ಶಿಪ್‍ಗಳಲ್ಲಿ 4 ಚಿನ್ನ, 3 ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿದ್ದಾರೆ.

ಪ್ರತಿವಾದಿ ಮೂವರು ಚೆಸ್ ಆಟಗಾರರು ಪದಕಗಳನ್ನು ಗೆದ್ದ ಬಗ್ಗೆ ಯಾವುದೇ ದಾಖಲೆ ಇಲ್ಲ. ಹೀಗಾಗಿ, ಹೊಸದಾಗಿ ರ್ಯಾಂಕಿಂಗ್ ನಿಗದಿಪಡಿಸುವಂತೆ ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕೆಇಎಗೆ ಆದೇಶಿಸಿತ್ತು. ಆದರೆ ಈವೆರಗೂ ಹೊಸದಾಗಿ ರ್ಯಾಂಕಿಂಗ್ ನಿಗದಿಪಡಿಸದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವ ಅದಿತಿ, ಉದ್ದೇಶಪೂರ್ವಕವಾಗಿಯೇ ಹೈಕೋರ್ಟ್ ನ್ಯಾಯಾಲಯದ ಆದೇಶವನ್ನು ಕೆಇಎ ಮತ್ತು ರಾಜ್ಯ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಪಾಲಿಸಿಲ್ಲ ಎಂದು ಆರೋಪಿದ್ದರು.

ಇದೇ ವೇಳೆ ಕ್ರೀಡಾ ಕೋಟಾದಡಿ ಎಂಬಿಬಿಎಸ್ ವೈದ್ಯಕೀಯ ಕೋರ್ಸ್ ಪ್ರವೇಶದಿಂದ ವಂಚಿತರಾದ ಈಜುಪಟು ಸಿರಿ ಶ್ರೀಕಾಂತ್ ಮತ್ತು ಸ್ಕೇಟಿಂಗ್ ಪಟು ಅನುಷ್ ಗೌಡ ಹೈಕೋರ್ಟ್‍ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಹೊಸದಾಗಿ ರ್ಯಾಂಕಿಂಗ್ ಪಟ್ಟಿ ನಿಗದಿಪಡಿಸುವ ವೇಳೆ ತಮ್ಮ ಹೆಸರು ಪರಿಗಣಿಸುವಂತೆ ಕೆಇಎ ಮತ್ತು ರಾಜ್ಯ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ನಿರ್ದೇಶಿಸುವಂತೆ ಮಧ್ಯಂತರ ಮನವಿ ಮಾಡಿದ್ದರು. ಆದರೆ, ಪ್ರತಿವಾದಿಗಳ ವಾದ ಆಲಿಸದೆ ಮಧ್ಯಂತರ ಮನವಿ ಪುರಸ್ಕರಿಸಲಾಗದು ಎಂದು ತಿಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಜನವರಿ ಮೊದಲ ವಾರಕ್ಕೆ ಮುಂದೂಡಿತು. 

Similar News