ಅಂಬೇಡ್ಕರ್‌ರನ್ನು ಕಾಂಗ್ರೆಸ್ ರಾಕ್ಷಸ ಎಂದು ಕರೆದಿದೆ: ಬೀದರ್‌ನಲ್ಲಿ ಪ್ರಧಾನಿ ಮೋದಿ ಹೇಳಿಕೆ
"91 ಬಾರಿ ಕಾಂಗ್ರೆಸ್ ನವರು ನನಗೆ ಬೈದಿದ್ದಾರೆ"
ಬೀದರ್: ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದವರು ನನ್ನನ್ನು ಬೈಯ್ಯಲು ಶುರು ಮಾಡಿದ್ದಾರೆ. 91 ಬಾರಿ ಕಾಂಗ್ರೆಸ್ ನವರು ನನಗೆ ಬೈದಿದ್ದಾರೆ. ಅದರಲ್ಲೇ ಅವರು ಸಮಯ ವ್ಯರ್ಥ ಮಾಡ್ತಿದ್ದಾರೆ ಎಂದು ಬಿಜೆಪಿ ಪರ ಪ್ರಚಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಬೀದರ್ ಜೆಲ್ಲೆಯ ಹುಮ್ನಾಬಾದ್ ತಾಲೂಕಿನ ಚಿನಕೇರಾ ಕ್ರಾಸ್ ಬಳಿ ಬಿಜೆಪಿ ಬೃಹತ್ ಸಮಾವೇಶ ವೇದಿಕೆಯಲ್ಲಿ ಮಾತನಾಡಿದ ಅವರು, ಒಳ್ಳೆಯ ಕೆಲಸ ಮಾಡುವವರನ್ನು ನಿಂದಿಸುವುದು ಕಾಂಗ್ರೆಸ್ ಚಾಳಿ. ಮೊದಲು 'ಚೌಕೀದಾರ್ ಚೋರ್' ಎಂದರು. ಡಾ.ಅಂಬೇಡ್ಕರ್ ಅವರನ್ನು ಕೂಡ ಕಾಂಗ್ರೆಸ್ ನವರು ನಿಂದಿಸಿದ್ದಾರೆ. ಬಾಬಾ ಸಾಹೇಬ್ ಅವರನ್ನು ರಾಕ್ಷಸ, ರಾಷ್ಟ್ರದ್ರೋಹಿ ಎಂದು ಕಾಂಗ್ರೆಸ್ ನವರು ಕರೆದಿದ್ದಾರೆ, ಸಾವರ್ಕರ್ ರನ್ನೂ ಕಾಂಗ್ರೆಸ್ ನಿಂದಿಸಿದೆ ಎಂದು ಹೇಳಿದ್ದಾರೆ.
ವೀರ ಸಾವರ್ಕರ್ ಅವರನ್ನೂ ಕಾಂಗ್ರೆಸ್ ನಾಯಕರು ನಿಂದಿಸುತ್ತಿದ್ದಾರೆ. ಅಂಬೇಡ್ಕರ್ ರನ್ನೂ ನಿಂದಿಸುತ್ತಿದ್ದಾರೆ. ಮಹಾನ್ ಪುರುಷರನ್ನು ಅವಮಾನಿಸುವುದು ಅವರ ಕೆಲಸ. ಅವರು ನಿಂದಿಸುತ್ತಾ ಇರಲಿ. ನಾನು ಜನತಾ ಜನಾರ್ಧನನ ಸೇವೆಯಲ್ಲಿ ನಿರತನಾಗಿರುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಕರ್ನಾಟಕ ಕಾಂಗ್ರೆಸ್ ನ ಎಟಿಎಂ ಆಗಬಾರದು, ಅದಕ್ಕಾಗಿ ಇಲ್ಲಿಗೆ ಡಬಲ್ ಇಂಜಿನ್ ಸರ್ಕಾರ ಬೇಕು, ಈ ಬಾರಿಯ ಮತದಾನ ಕರ್ನಾಟಕವನ್ನು ನಂಬರ್ ಒನ್ ಮಾಡಲು ಮತ್ತು ಅಮೃತ ಕಾಲಕ್ಕೆ ಕೊಡುಗೆ ನೀಡಲು ಎಂಬುದು ನೆನಪಲ್ಲಿಟ್ಟು ಮತದಾನ ಮಾಡಿ ಎಂದು ಅವರು ಹೇಳಿದ್ದಾರೆ.
ಜಲ್ ಜೀವನ್ ಮಿಷನ್ ಯೋಜನೆಯಡಿ ದೇಶದಲ್ಲಿ 9 ಕೋಟಿ ಕುಟುಂಬಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ನಮ್ಮ ಸರ್ಕಾರದಡಿಯಲ್ಲಿ ಒಂಬತ್ತು ಲಕ್ಷ ಮನೆಗಳ ನಿರ್ಮಾಣ ಮಾಡಲಾಗಿದ್ದು, ಬೀದರ್ ಜಿಲ್ಲೆಯೊಂದರಲ್ಲೇ ಮೂವತ್ತು ಸಾವಿರ ಮನೆಗಳ ನಿರ್ಮಾಣವಾಗಿವೆ. ಇದು ಡಬಲ್ ಎಂಜಿನ್ ಸರ್ಕಾರದಿಂದ ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.