ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ ನಿಧನ

Update: 2023-01-02 18:12 GMT

ವಿಜಯಪುರ, ಜ.2: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ಪ್ರವಚನಕಾರರಾಗಿದ್ದ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಸೋಮವಾರ ನಿಧನರಾಗಿದ್ದಾರೆ. ಅವರಿಗೆ 82 ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಗಳಿಗೆ ಆಶ್ರಮದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು  ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

ಶ್ರೀಗಳ ಪಾರ್ಥಿವ ಶರೀರವನ್ನು ಜ್ಞಾನಯೋಗಾಶ್ರಮದ ಆವರಣದಲ್ಲಿಯೇ ಮಂಗಳವಾರ ಸಂಜೆವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಡಲಾಗುವುದು. ಶ್ರೀಗಳ ಕ್ರಿಯಾಸಮಾಧಿಯ ಕಾರ್ಯಗಳು, ಅಂತ್ಯ ಸಂಸ್ಕಾರವನ್ನು ಮಂಗಳವಾರ ಸಂಜೆ ನಡೆಸಲು ನಿಶ್ಚಯಿಸಲಾಗಿದೆ. 

ಅಂತಿಮ ದರ್ಶನವನ್ನು ಶಾಂತಿಯುತವಾಗಿ ನಡೆಸುವ ಹಿನ್ನೆಲೆಯಲ್ಲಿ ಸರಕಾರದಿಂದ ಮುಂಜಾಗೃತಾ ಕ್ರಮವಾಗಿ ಸಕಲ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.    

ಹಲವು ದಿನಗಳಿಂದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳು ಅನಾರೋಗ್ಯದಿಂದ ಮಲಗಿದ್ದರೂ, ತಾವು ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದರು. ಮಠದ ಸಿಬ್ಬಂದಿ ಮತ್ತು ಸರಕಾರದಿಂದ ತಜ್ಞ ವೈದ್ಯರನ್ನು ನಿಯೋಜಿಸಿ ಮಠದಲ್ಲಿಯೇ ಬಂದು ಚಿಕಿತ್ಸೆ ನೀಡುವಂತೆ ವ್ಯವಸ್ಥೆ ಮಾಡಲಾಗಿತ್ತು. 

ಆದರೆ, ಊಟ ಮಾಡುವುದಕ್ಕೆ ಹಾಗೂ ವೈದ್ಯರು ಸೂಚಿಸುತ್ತಿದ್ದ ಔಷಧಗಳನ್ನು ಸೇವನೆ ಮಾಡಲು ಶ್ರೀಗಳು ಸುತಾರಾಂ ಒಪ್ಪಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನನಗೆ ದೇವರಿಂದ ಕರೆ ಬಂದಿದೆ. ಹೀಗಾಗಿ ನನಗೆ ಮುಕ್ತಿ ಬೇಕಾಗಿದ್ದು, ಚಿಕಿತ್ಸೆ ನೀಡಬೇಡಿ ಎಂದು ತಿಳಿಸಿದ್ದರು. ಹೀಗಾಗಿ, ಶ್ರೀಗಳ ಹಾಸಿಗೆ ಸುತ್ತಲೂ ವೈದ್ಯರಿದ್ದರೂ ಚಿಕಿತ್ಸೆ ನೀಡಲಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು.

ಅನಿವಾರ್ಯವಾಗಿ ಆಕ್ಸಿಜನ್, ಗ್ಲುಕೋಸ್ ಮತ್ತು ಇತರೆ ಚಿಕಿತ್ಸೆಗಳನ್ನು ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. 

ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಮಂಗಳವಾರ ಜ್ಞಾನಯೋಗಾಶ್ರಮದ ಆವರಣದಲ್ಲಿಯೇ ನೆರವೇರಿಸಲಾಗುತ್ತದೆ ಎಂದು ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಶಿಷ್ಟಾಚಾರ) ಸೋಮವಾರ ಆದೇಶ ಹೊರಡಿಸಿದೆ.

ಗಣ್ಯರ ಕಂಬನಿ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ನಿಧನ ಹೊಂದಿನ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವರು ಕಂಬನಿ ಮೀಡಿದಿದ್ದಾರೆ.   

Similar News