ಸಿದ್ದೇಶ್ವರ ಸ್ವಾಮೀಜಿಗಳ ಸಂದೇಶಗಳು ಇಲ್ಲಿವೆ...

Update: 2023-01-03 11:00 GMT

ಬೆಂಗಳೂರು, ಜ.3: ಆಧ್ಯಾತ್ಮಿಕ ಚಿಂತಕರು ಹಾಗೂ ಖ್ಯಾತ ಪ್ರವಚನಕಾರರಾಗಿದ್ದ ಸಿದ್ದೇಶ್ವರ ಸ್ವಾಮೀಜಿಗಳು ಹಿತ ನುಡಿಗಳು ಮತ್ತು ಸಂದೇಶಗಳು ಇಲ್ಲಿವೆ.

“ನೀವು ಶೂನ್ಯದಂತೆ ಮೌನವಾಗಿದ್ದರೆ ನಿಮಗೆ ಬೆಲೆ ಬರತೈತಿ. ಬೆಲೆ ಹೆಚ್ಚಾಗ್ತದ. 1 ಸಂಖ್ಯೆ ಮುಂದ ಎಷ್ಟು ಶೂನ್ಯ ಇರತಾವ ಅಷ್ಟ ಆ ಸಂಖ್ಯೆಯ ಬೆಲೆ ಹೆಚ್ಚಾಗ್ತದ. ಅಕಸ್ಮಾತ್ ಶೂನ್ಯ ತೆಗೆದಬಿಟ್ಟರ ಸಂಖ್ಯೆಗೆ ಬೆಲೆ ಎಲ್ಲ ಬರತಹ ಹೇಳಿ! ಆದರ ಆ ಶೂನ್ಯ ಯಾವಾಗಲೂ ಗರ್ವ ಪಡೋದಿಲ್ಲ. ಮೌನವಾಗಿ ಕುಳಿತಿರದ. ಹಂಗ ಎಲ್ಲರೂ ಕುಳಿತಾರ ಅಂತ ನಮಗೆ ಬೆಲೆ ಬಂದಾದ. ನಮ್ಮಷ್ಟಕ್ಕೆ ನಾವು ಸ್ವತಂತ್ರರಲ್ಲ. ಜಗತ್ತಿನ ಮೇಲೆ ಅವಲಂಬಿತರಾಗಿದ್ದೇವೆ. ಸಣ್ಣೋರ ಅದಾರ ಅಂತ ದೊಡ್ಡವರು ಕುಂತಾರ. ಇಲ್ಲಿ ಯಾರೂ ದೊಡ್ಡವರಲ್ಲ. ಯಾರೂ ಸಣ್ಣವರಲ್ಲ. ಎಲ್ಲರೂ ಕೂಡಿ ಬದುಕಬೇಕು. ಸಣ್ಣೋರ, ದೊಡ್ಡವರು ಅಂತ ತಿರಸ್ಕರಿಸಬಾರದು. ಎಲ್ಲರೂ ಬೇಕಾಗ್ತಾರ.”

“ಸೂರ್ಯನ ಕಿರಣಗಳು ಕೊಳಕು ಇರುವ ಜಾಗಕ್ಕೂ ಹೋಗುತ್ತದೆ. ಆದರೆ ಅದು ಕೊಳಕಾಗುವುದಿಲ್ಲ. ನಾವು ಬದುಕಿನಲ್ಲಿ ಸೂರ್ಯನ ಕಿರಣಗಳಂತೆ ಆಗಬೇಕು. ಯಾವ ಜಾಗಕ್ಕೆ ಹೋದರೂ ಯಾರ ಜೊತೆ ಇದ್ದರೂ ನಾವು ನಾವಾಗಿರಬೇಕು. ಕೊಳಕಾಗಬಾರದು.”

“ಲೋಕದ ವಸ್ತುಗಳನ್ನು ಇಂದ್ರಿಯಗಳ ಮೂಲಕಕ ಅನುಭವಿಸಿ ಆನಂದಿಸುವವರು ಲೌಕಿಕರು. ಅಲೌಕಿಕವಾದ ಸತ್ಯ ವಸ್ತುವನ್ನು ಅರಿತು ಅಂತರಂಗದಲ್ಲಿ ಅನುಭವಿಸಿ ಆನಂದಿಸುವವರು ಅಲೌಕಿಕರು.”

“ಸತ್ಯದ ಶೋಕನಾದ ಸಾಧಕನು ಮೊಟ್ಟಮೊದಲು ಮಾಡಬೇಕಾದ ಮಹತ್ತರ ಕಾರ್ಯವೆಂದರೆ ತನ್ನ ಹೃದಯದಲ್ಲಿ ಪ್ರೇಮದ ಜ್ಯೋತಿಯನ್ನು ಹೊತ್ತಿಸುವುದು.”

“ಕುದಿಯುವವರು ಕುದಿಯಲಿ, ಉರಿಯುವವರು ಉರಿಯಲಿ, ನಿನ್ನ ಪಾಡಿಗೆ ನೀನಿರು...! ಕುದಿಯುವವರು ಆವಿಯಾಗುತ್ತಾರೆ, ಉರಿಯುವವರು ಬೂದಿಯಾಗುತ್ತಾರೆ.”

“ಅಡವಿಯಲ್ಲಿ ದನಗಳನ್ನು ಕಾಯುವ ದನಗಾಹಿ ಕೂಡ ನಿಸರ್ಗದ ಮಡಿಲಲ್ಲಿ ಹಾಡುತ್ತ ಆಡುತ್ತ ಆನಂದವಾಗಿರುತ್ತಾನೆ. ದನಗಳು ಕೂಡ ಅಷ್ಟೇ ಆನಂದವಾಗಿರುತ್ತವೆ. ಇನ್ನು ಅರಮನೆಯಂಥ ಮನೆಯಲ್ಲಿದ್ದೂ ಸಿರಿವಂತರು ಆನಂದವಾಗಿರದಿದ್ದರೆ ಆ ದನಗಾಯಿ ಮತ್ತು ದನಗಳೇ ಸಿರಿವಂತರಿಗಿಂತ ಭಾಗ್ಯವಂತರೆಂದು ಹೇಳಬಹುದಲ್ಲವೇ? ಇದರರ್ಥ ನಮ್ಮಲ್ಲಿ ಸಂಪತ್ತು ಇರಬಾರದೆಂದಲ್ಲ. ಸಂಪತ್ತು ಸಾಕಷ್ಟಿರಲಿ ಜೊತೆಗೆ ಸಂತೃಪ್ತಿ ಇರಲಿ.”

“ಮಾನವನ ದುರಾಸೆಯಿಂದಾಗಿ ಇಂದು ನಿಸರ್ಗ ಸ್ವರ್ಗವೂ ನರಕವಾಗುತ್ತಿದೆ. ನೀರಿನಿಂದ ಹಿಡಿದು ಎಲ್ಲವೂ ಮಾರಾಟವಾಗುತ್ತಿದೆ. ನಾಳೆ ಗಾಳಿಯೂ ಮಾರಾಟವಾಗಬಹುದು. ಇದಕ್ಕೆಲ್ಲ ಒಂದೇ ಪರಿಹಾರವೆಂದರೆ ಮನುಷ್ಯನು ಬರೀ ಸಂಪತ್ತನ್ನು ಗಳಿಸಬಾರದು ಜೊತೆಗೆ ಸಂತೃಪ್ತಿಯನ್ನು ಗಳಿಸಬೇಕು.”

“ಮನಸ್ಸಿದ್ದರೆ ದಾರಿ ಖಂಡಿತ ದೊರಕುತ್ತದೆ. ಇಲ್ಲವಾದರೆ ಅದೇ ಮನಸ್ಸು ಕಾರಣ ಹುಡುಕುತ್ತದೆ.”

“ಯಾರ ನೋವಿಗೆ ಯಾರು ಹೊಣೆಗಾರರು, ನಿನ್ನ ಕಣ್ಣೀರಿಗೆ ಯಾರು ಮಗುವರು?”

“ನಿನಗೆ ನೀನೆ ಮಿತ್ರ, ನಿನಗೆ ನೀನೆ ಶತ್ರು, ನಿನ್ನಿಂದಲೇ ಶಾಂತಿ, ನಿನ್ನಿಂದಲೇ ಕ್ರಾಂತಿ.”

“ಸತ್ಯವೂ ಇಲ್ಲ, ಅಸತ್ಯವೂ ಇಲ್ಲ. ಸಹಜವೂ ಇಲ್ಲ, ಅಸಹಜವೂ ಇಲ್ಲ. ನಾನೂ ಇಲ್ಲ. ನೀನೂ ಇಲ್ಲ. ಇಲ್ಲ, ಇಲ್ಲ ಎಂಬುದು ತಾನಿಲ್ಲ. ಗುಹೇಶ್ವರನೆಂಬುದು ತಾ ಬಯಲು.”

“ಈ ಜಗತ್ತು ದೇವ ನಿರ್ಮಿತಿಯೇ ವಿನಃ ಮಾನವ ನಿರ್ಮಿತವಲ್ಲ. ಇದು ಕ್ಷುಲ್ಲಕವಲ್ಲ, ತುಚ್ಛವಲ್ಲ, ದುಃಖಮಯವೂ ಅಲ್ಲ, ಬದುಕಲು ಬಂದರೆ ಇದೇ ಜಗತ್ತು ಸ್ವರ್ಗವಾಗುತ್ತದೆ. ದೇವನಿರ್ಮಿತವಾದ ಈ ಜಗತ್ತಿನಲ್ಲಿ ಪವಿತ್ರ ಅಪವಿತ್ರ ಎಂದಿಲ್ಲ. ಇಲ್ಲ ಹಗಲು ಎಷ್ಟು ಪವಿತ್ರವೋ ರಾತ್ರಿಯೂ ಅಷ್ಟೇ ಪವಿತ್ರ. ರಾತ್ರಿಯಿರುವುದಿಂದಲೇ ತಾನೆ ಚರಾಚರ ಜಗವೆಲ್ಲವೂ ವಿಶ್ರಾಂತಿಯನ್ನು ನಿದ್ರಾನಂದವನ್ನು ಪಡೆಯುವುದು. ಜನನವೂ ಪವಿತ್ರ, ಮರಣವೂ ಪವಿತ್ರ. ಮರಣವಿದ್ದರೇ ಜನನಕ್ಕೆ ಅವಕಾಶ. ಅರಳಿದ ಹೂ ಬಾಡದೇ ಇದ್ದರೆ ಮತ್ತೊಂದು ಹೂ ಅರಳುವುದಾರೂ ಹೇಗೆ?”

Full View

Similar News