ರಾಜ್ಯದಲ್ಲಿ 15ಕ್ಕೂ ಅಧಿಕ ಪಕ್ಷಗಳೊಂದಿಗೆ ಮೈತ್ರಿ: ಜನತಾ ಪಕ್ಷದ ರಾಜ್ಯಾಧ್ಯಕ್ಷೆ ಬಿ.ಟಿ.ಲಲಿತಾ ನಾಯ್ಕ್

ವಿಧಾನಸಭಾ ಚುನಾವಣೆ

Update: 2023-01-03 13:03 GMT

ಬೆಂಗಳೂರು, ಜ.3: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ 15ಕ್ಕೂ ಅಧಿಕ ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿಯಲು ಚಿಂತನೆ ನಡೆಸಲಾಗಿದ್ದು, ಈ ಸಂಬಂಧ ಹಂತ ಹಂತವಾಗಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಜನತಾ ಪಕ್ಷದ ರಾಜ್ಯಾಧ್ಯಕ್ಷೆ ಬಿ.ಟಿ.ಲಲಿತಾ ನಾಯ್ಕ್ ತಿಳಿಸಿದ್ದಾರೆ.

ಮಂಗಳವಾರ ಇಲ್ಲಿನ ಶೇಷಾದ್ರಿಪುರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಏರ್ಪಡಿಸಿದ್ದ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳೊಂದಿಗೆ ಸಾಧಕ-ಬಾಧಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಪಕ್ಷಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿವೆ. ಹೀಗಾಗಿ, ನಾವೇ ಖುದ್ದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಮಯ ಬಂದಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸಕ್ರಿಯವಾಗಿರುವ ಜನಪರ ಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸಲಿದ್ದೇವೆ. ಸದ್ಯ 15ಕ್ಕೂ ಅಧಿಕ ಪಕ್ಷಗಳೊಂದಿಗೆ ಸರಣಿ ಸಭೆಗಳನ್ನು ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ಮೈತ್ರಿ ಪ್ರಕಟ ಮಾಡಲಿದ್ದೇವೆ ಎಂದು ಲಲಿತಾ ನಾಯ್ಕ್ ಹೇಳಿದರು.

ಐದು ಜಿಲ್ಲೆಗಳಿಗೆ ಸೀಮಿತಗೊಳಿಸಿ ಹಂತ ಹಂತವಾಗಿ ಆ ಭಾಗದ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದ್ದು, ಪ್ರತಿಯೊಬ್ಬರು ಈ ನಿರ್ಧಾರವನ್ನು ಬೆಂಬಲಿಸಿ, ಚುನಾವಣೆಯಲ್ಲಿ ಕೆಲಸ ಮಾಡಿ, ತಮ್ಮ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಹೀಗಾಗಿ, ರಾಜಕೀಯ ಪಕ್ಷಗಳ ಪ್ರಮುಖ ನಾಯಕರೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಮಹಿಳಾ ಸಂಘಟನೆ, ರೈತರು, ದಲಿತ ಒಕ್ಕೂಟ, ಸ್ವಯಂ ಕೃಷಿ ಪಕ್ಷ ಸೇರಿದಂತೆ ಅನೇಕ ಪಕ್ಷಗಳ ಮುಖಂಡರೊಡನೆ ಸಭೆ ನಡೆಸಿ, ಚುನಾವಣಾ ಕಾರ್ಯ ಕಲಾಪಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ(ಆರ್‍ಪಿಐ) ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಜನತಾ ಪಕ್ಷದ ಮಹಾಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್, ಬಿಎಸ್ಪಿ ನಾಯಕ ಗುರುಮೂರ್ತಿ, ಐಎಂಪಿ ಪಕ್ಷದ ಗೋಪಿ ಬಳ್ಳಾರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Similar News