ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯ ಕಾಫಿನಾಡಿನ ನಂಟು

Update: 2023-01-03 16:33 GMT

ಚಿಕ್ಕಮಗಳೂರು, ಜ.3: ಸೋಮವಾರ ನಿಧನರಾಗಿರುವ ನಡೆದಾಡುವ ದೇವರು, ಶತಮಾನದ ಸಂತ ಎಂದೇ ಖ್ಯಾತರಾಗಿರುವ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಿಗೂ ಕಾಫಿನಾಡಿಗೂ ಅವಿನಾಭಾವ ಸಂಬಂಧ ಇದ್ದು, 2004ರಲ್ಲಿ  ಜಿಲ್ಲೆಗೆ ಭೇಟಿನೀಡಿದ್ದ ಅವರು ಇಲ್ಲಿನ ಪರಿಸರದ ಸೌಂದರ್ಯಕ್ಕೆ ಮನಸೋತ್ತಿದ್ದರು. ಇಲ್ಲಿನ ರಮಣೀಯ ಪರಿಸರದ ನಡುವೆ ಹೆಜ್ಜೆ ಹಾಕುವ ಮೂಲಕ ಜಿಲ್ಲೆಯಲ್ಲೂ ತಮ್ಮ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದೇಶ್ವರ ಶ್ರೀಗಳು ಸೋಮವಾರ ನಿಧನರಾಗಿದ್ದಾರೆ. ಈ ಹಿಂದೆ ಅವರು ಚಿಕ್ಕಮಗಳೂರಿಗೆ ಬಂದು ಪ್ರವಚನ ನೀಡಿದ್ದ ಸವಿಗಳಿಗೆಯನ್ನು ಜಿಲ್ಲೆಯ ಜನತೆ ಮೆಲುಕು ಹಾಕುತ್ತಾ ಅವರನ್ನು ಸ್ಮರಿಸಿದ್ದಾರೆ. ಶ್ರೀಗಳು ಅವರು ಉಳಿಸಿ ಹೋಗಿರುವ ಹೆಜ್ಜೆ ಗುರುತುಗಳನ್ನು ಜನತೆ ಇಂದು ನೆನೆದು ಬಾವುಕರಾಗಿದ್ದಾರೆ. ಸಿದ್ದೇಶ್ವರ ಸ್ವಾಮೀಜಿ ಅವರು 2004ರಲ್ಲಿ ಡಿಎಸ್‍ಎಜಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಒಂದು ತಿಂಗಳುಗಳ ಕಾಲ ಪ್ರವಚನದಲ್ಲಿ ಪಾಲ್ಗೊಂಡು ಭಕ್ತರಿಗೆ ಸಂದೇಶ ನೀಡಿದ್ದರು. ಸಾವಿರಾರು ಜನರ ಅವರ ಪ್ರವಚನವನ್ನು ಆಲಿಸಿದ್ದರು.

ಕಾರ್ಯಕ್ರಮದಲ್ಲಿ ಮಾನವೀಯ ಮೌಲ್ಯ ಮತ್ತು ಬದುಕಿನ ಬಗ್ಗೆ ಸುಧೀರ್ಘ ಪ್ರವಚನ ನೀಡಿದ್ದ ಅವರನನ್ನು ಜೂನಿಯರ್ ಕಾಲೇಜು ಅಧ್ಯಾಪಕ ಗಣಾಚಾರಿ ಅವರ ತಂಡ ಚಿಕ್ಕಮಗಳೂರಿಗೆ ಕರೆಸಿ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಸಿದ್ದೇಶ್ವರ ಸ್ವಾಮೀಜಿ ಅವರದ್ದು ಚಿಕ್ಕಮಗಳೂರಿನಲ್ಲಿ ಇದೇ ಮೊದಲ ಹಾಗೂ ಕೊನೆಯ ಕಾರ್ಯಕ್ರಮವಾಗಿದ್ದು, ಆ ಬಳಿಕ ಅವರು ಚಿಕ್ಕಮಗಳೂರಿಗೆ ಬಂದಿರಲಿಲ್ಲ. 

ಕಾಫಿನಾಡಿಗೆ ಭೇಟಿ ನೀಡಿದ್ದ ವೇಳೆ ಅವರು ಇಲ್ಲಿನ ಸುಂದರ ರಮಣೀಯ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತಿದ್ದರು. ನಿಸರ್ಗದ ಮಡಿಲಿನಲ್ಲಿ ಸದಾ ಬದುಕಬೇಕು ಎಂದು ಹೇಳುತ್ತಿದ್ದ ಶ್ರೀಗಳು ಚಿಕ್ಕಮಗಳೂರಿನಲ್ಲಿ ಒಂದು ತಿಂಗಳ ಕಾಲ ನಗರದ ಹೊರವಲಯದಲ್ಲಿರುವ ಕೈಮರದ ಎನ್‍ಎಂಡಿಸಿ ಬಳಿ ಇರುವ ಆದಿಚುಂಚನಗಿರಿ ಪ್ರದೇಶದಿಂದ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯಲ್ಲಿ ದಿನನಿತ್ಯ ವಾಕಿಂಗ್ ಮಾಡುತ್ತಿದ್ದರು. ಸ್ಥಳೀಯ ಉತ್ಸಾಹಿ ಯುವಕರು ಇವರ ಜೊತೆ ವಾಕಿಂಗ್, ಟ್ರಕ್ಕಿಂಗ್ ಹೋಗುತ್ತಿದ್ದರು. ಬೆಟ್ಟವನ್ನು ಸಲೀಸಾಗಿ ಹತ್ತುತ್ತಿದ್ದ ಶ್ರೀಗಳು ಈ ಪ್ರದೇಶ ಅತ್ಯಂತ ಪುಣ್ಯದ ಪ್ರದೇಶವೆಂದು ಹೇಳಿ ಮುಳ್ಳಯ್ಯನಗಿರಿ ಭಾಗದಲ್ಲಿ ಟ್ರಕ್ಕಿಂಗ್ ಮಾಡಿದ್ದರು.

ರಾತ್ರಿವೇಳೆಯಲ್ಲಿ ಬೆಟ್ಟದಲ್ಲಿ ನಡೆಯುವ ಸಂದರ್ಭದಲ್ಲಿ ಟಾರ್ಚ್‍ಲೈಟ್ ಇಲ್ಲದೆ ನಡೆಡಯುವಂತೆ ಹೇಳುತ್ತಿದ್ದರು. ಕತ್ತಲಿನಲ್ಲಿ ನಡೆದರೇ ಎಂತಹ ಕಷ್ಟವನ್ನಾದರೂ ಕೂಡ ಎದುರಿಸಬಹುದು ಎನ್ನುವ ಪಾಠವನ್ನು ಅವರು ತಮ್ಮೊಂದಿಗಿದ್ದವರಿಗೆ ಹೇಳಿಕೊಡುತ್ತಿದ್ದರು. ಅಂದು ಅವರ ಜೊತೆ ಒಡನಾಟ ಹೊಂದಿದವರು ಆ ಸವಿ ನೆನಪುಗಳನ್ನು ಮೆಲಕು ಹಾಕಿದ್ದಾರೆ. ಅಂದು ಜಿಲ್ಲೆಗೆ ಆಗಮಿಸಿದ್ದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಜೊತೆ ನಗರದ ಉಪ್ಪಳಿಯ ತೇಜೇಶ್‍ಕುಮಾರ್, ಯುವಕರಾದ ಇಂದ್ರೇಶ್, ಪ್ರಕಾಶ್, ಆರಾಧ್ಯ, ಕಿರಣ್, ಹೇಮಂತ್, ಪ್ರಗತಿಪರ ರೈತ, ರಾಜ್ಯೋತ್ಸವ ಪುರಸ್ಕೃತ ಚಂದ್ರಶೇಖರ್ ನಾರಾಯಣಪುರ, ಎಐಟಿ ಪ್ರಾಂಶುಪಾಲ ಸುಬ್ಬರಾಯ, ವೈದ್ಯ ಜೆ.ಪಿ.ಕೃಷ್ಣೇಗೌಡ ಸೇರಿದಂತೆ ಅನೇಕರು ಗಿರಿಶ್ರೇಣಿಗಳಲ್ಲಿ ಹೆಜ್ಜೆ ಹಾಕಿದ್ದರು. ಅವರು ಜಿಲ್ಲೆಗೆ ಆಗಮಿಸಿದ್ದ ವೇಳೆ ಇಲ್ಲಿನ ಪರಿಸರಕ್ಕೆ ಭೇಟಿ ನೀಡಿದ್ದ ಪೊಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗುತ್ತಿವೆ.

Similar News