ಮೈಸೂರು | ಗ್ಯಾಸ್ ಸಿಲಿಂಡರ್ ಸ್ಫೋಟ: 6 ಮಂದಿಗೆ ಗಾಯ; ಇಬ್ಬರು ಗಂಭೀರ

Update: 2023-01-04 06:25 GMT

ಮೈಸೂರು, ಜ,4: ಮೈಸೂರಿನಲ್ಲಿಂದು ಬೆಳಗ್ಗೆ ಗ್ಯಾಸ್ ಸಿಲಿಂಡರ್ (Gas cylinder) ವೊಂದು ಆಕಸ್ಮಿಕವಾಗಿ ಸ್ಫೋಟ (Blast)ಗೊಂಡ ಪರಿಣಾಮ 6  ಮಂದಿ ಗಾಯಗೊಂಡಿದ್ದು, ಇಬ್ಬರು ಗಂಭೀರಗೊಂಡಿರುವ ಘಟನೆ ನಡೆದಿದೆ.

 ನಗರದ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಬನ್ನಿ ಮಂಟಪದಲ್ಲಿರುವ ಅಗ್ನಿಶಾಮಕ ವಸತಿ ಗೃಹದಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಅಗ್ನಿಶಾಮಕ ದಳದ ನೌಕರ ಮಹದೇವ್ ಎಂಬುವವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು ಮನೆಯಲ್ಲಿದ್ದ ಮಹದೇವ್ ಮತ್ತು ಪತ್ನಿ ಗೀತಾರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಮಹದೇವ್ ನೀರು ಕಾಯಿಸಲು ಮನೆಯ ಮತ್ತೊಂದು ರೂಮ್ ನಲ್ಲಿದ್ದ ಮದುವೆ ಮನೆಗಳಲ್ಲಿ ಅಡುಗೆಗೆ ಬಳಸುವ ಸ್ಟವ್ ಗೆ ಗ್ಯಾಸ್ ಸಿಲಿಂಡರ್ ಫಿಟ್ ಮಾಡಿದ್ದರು ಎನ್ನಲಾಗಿದೆ. ಈ ಸಿಲಿಂಡರ್ ನಲ್ಲಿ ಗ್ಯಾಸ್ ಲೀಕ್ ಆಗಿ ರೂಮ್ ನೆಲ್ಲಾ ಆವರಿಸಿತ್ತು. ಇಂದು ಬೆಳಗ್ಗೆ 7:30 ಗಂಟೆ ವೇಳೆ ಗ್ಯಾಸ್ ಸೋರಿಕೆಯಾಗಿರುವುದನ್ನು ಗಮನಿಸದ ಮಹದೇವ್ ಅವರ ಪತ್ನಿ ಗೀತಾ ಲೈಟರ್ ಆನ್ ಮಾಡಿದ್ದೆ ತಡ ಸಿಲಿಂಡರ್ ಸ್ಫೋಟಗೊಂಡಿದೆ.

ಇದರಿಂದ ಮನೆಯಲ್ಲಿದ್ದ ಮಹದೇವ್, ಪತ್ನಿ ಗೀತಾ, ಮತ್ತು ಪುತ್ರಿಗೆ ಗಾಯಗಳಾಗಿವೆ. ಇದೇವೇಳೆ ಮನೆಯ ಹೊರಗೆ ರಂಗೋಲಿ ಹಾಕುತ್ತಿದ್ದ ಪಕ್ಕದ ಮನೆಯ ಇಬ್ಬರು ಮಹಿಳೆಯರಿಗೂ ಗಾಯಗಳಾಗಿವೆ. ಜೊತೆಗೆ ಮೇಲಂತಸ್ತಿನಿಂದ ಕೆಳಗೆ ಇಳಿದು ಬರುತ್ತಿದ್ದ ಮತ್ತೊಬ್ಬರಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಈ ಘಟನೆಯಿಂದ ಮಹದೇವ್ ಮತ್ತು ಪತ್ನಿ ಗೀತಾ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ತಕ್ಷಣವೇ ಗಾಯಾಳುಗಳನ್ನು ಪಕ್ಕದಲ್ಲೇ ಇರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಚಿಕಿತ್ಸೆ ನೀಡಲಾಗುತ್ತಿದೆ. ಎಂದು ಎನ್.ಆರ್.ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಅಝರುದ್ದೀನ್ ತಿಳಿಸಿದರು.

ಎನ್.ಆರ್.ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Similar News