ಯಾರೋ ಏನೋ ಬರೆದಿಟ್ಟಿದ್ದಾರೆಂದು ಒಬ್ಬರನ್ನು ಏಕಾಏಕಿ ಆರೆಸ್ಟ್ ಮಾಡೋಕೆ ಆಗಲ್ಲ: ಸಚಿವ ಆರಗ ಜ್ಞಾನೇಂದ್ರ

"ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಾಗಿದೆ"

Update: 2023-01-04 07:04 GMT

ಶಿವಮೊಗ್ಗ, ಜ.4: ಶಾಸಕ ಅರವಿಂದ ಲಿಂಬಾವಳಿ ಮತ್ತು ಇತರ ಆರು ಜನರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿ ಪ್ರದೀಪ್ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎಫ್ಐಆರ್ ದಾಖಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಮಾಜಿ ಸಚಿವ ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು ಉದ್ಯಮಿ ಪ್ರದೀಪ್ ಆತ್ಮಹತ್ಯೆ ವಿಚಾರವಾಗಿ ಶಿವಮೊಗ್ಗದಲ್ಲಿ  ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಕಾಂಗ್ರೆಸ್ ನವರು ಅಭಿಯಾನ ಮಾಡ್ತಾರೆ ಎಂದು ನಮ್ಮ ಪೋಲಿಸರು ಯಾರನ್ನು ಅರೆಸ್ಟ್ ಮಾಡಲ್ಲ. ನಾವು ಹೇಳ್ತಿವಿ ಅಂತಾ ಪೊಲೀಸರು ಅರೆಸ್ಟ್ ಮಾಡದೇ ಇರೋದು ಕೂಡ ಇರಲ್ಲ. ಕಾನೂನು, ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಸರಿಸಿ, ಕ್ರಮವಾಗುತ್ತದೆ. ಕಾಯ್ದೆ ಪ್ರಕಾರ ಅಪರಾಧಿಯಾದರೆ ಯಾರ ಬೇಕಾದರೂ ಅಗಲಿ, ಅವರನ್ನು ಪೊಲೀಸರು ಬಂಧಿಸುತ್ತಾರೆ ಎಂದರು.

ತನಿಖೆಯಲ್ಲಿ ನಿರಪರಾಧಿ ಅಂತಾ ಗೊತ್ತಾದ್ರೇ ಆರೆಸ್ಟ್ ಮಾಡೋದಿಲ್ಲ. ಏನೋ ವ್ಯವಹಾರಗಳಿವೆ ಅನಿಸುತ್ತಿದೆ. ಎಲ್ಲಾ ಆಯಾಮದಲ್ಲೂ ತನಿಖೆಯಾಗುತ್ತೆ. ತನಿಖಾ ಹಂತದಲ್ಲಿ ನಾನು ಮಾತನಾಡೋದು ಸರಿಯಲ್ಲ. ಅರವಿಂದ ಲಿಂಬಾವಳಿ ಬಗ್ಗೆ ಎಫ್ ಐ ಆರ್ ನಲ್ಲಿ ಏನೇ ಇರಲಿ. ಅವರು ಶಾಸಕರಾಗಿರಲಿ, ಮಂತ್ರಿಯಾಗಲಿ, ಸಾಮಾನ್ಯ ವ್ಯಕ್ತಿಯಾಗಿರಲಿ. ಯಾರೋ ಬರೆದಿಟ್ಟಿದ್ದಾರೆ ಎಂದು ಏಕಾಏಕಿ ಆರೆಸ್ಟ್ ಮಾಡೋಕೆ ಆಗುವುದಿಲ್ಲ. ಪೊಲೀಸರಿಗೂ ಸಹ ಕೆಲವೊಂದು ಕಾನೂನು ತೊಡಕುಗಳು ಇವೆ. ಕೃತ್ಯದಲ್ಲಿ ಭಾಗಿಯಾಗಿದ್ದರೆ, ಕಾನೂನಿನಂತೆ ತಪ್ಪಿತಸ್ಥರಾಗಿದ್ದರೆ ಕ್ರಮ ಆಗುತ್ತದೆ ಎಂದು ಗೃಹಸಚಿವರು ಹೇಳಿದರು.

ಔರಾಧ್ಕರ್ ವರದಿ - ಹಿರಿಯ ಅಧಿಕಾರಿಗಳ ಸಂಬಳದಲ್ಲಿ ವ್ಯತ್ಯಾಸ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಔರಾದ್ಕರ್ ವರದಿ ಪ್ರಕಾರ ವ್ಯತ್ಯಾಸ ಇರೋದು ಸಹಜ.ಔರಾದ್ಕರ್ ವರದಿಯಿಂದ ಶೇ.80 ಪೊಲೀಸ್ ಸಿಬ್ಬಂದಿಗೆ ಲಾಭ ಸಿಕ್ಕಿದೆ. ಅನ್ಯಾಯ ಆದವರಿಗೆ ಭತ್ತೆಯಲ್ಲಿ ಸರಿಪಡಿಸುವ ಕೆಲಸ ಆಗ್ತಿದೆ‌ ಎಂದರು.

 ಶಿವಮೊಗ್ಗದಲ್ಲಿ ಪೊಲೀಸ್ ಕಮೀಷನರೇಟ್ ಸ್ಥಾಪನೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸೆಂಟ್ರಲ್ ಮಾರ್ಗಸೂಚಿ ಪ್ರಕಾರ ಆಗುತ್ತಿಲ್ಲ.ಆದರೂ ನನ್ನ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ವಿಶೇಷ ಜೈಲು ಮಂಜೂರಾಗಿದ್ದು, ಶಿವಮೊಗ್ಗಕ್ಕೆ ನೀಡಲಾಗಿದೆ. ಶಿವಮೊಗ್ಗದ ಸೋಗಾನೆ ಜೈಲಿನ ಆವರಣದೊಳಗೆ ಅದು ನಿರ್ಮಾಣವಾಗುತ್ತೆ. ಹೈಟೆಕ್ ಆರೋಪಿಗಳಿಗಾಗಿ ಈ ವಿಶೇಷ ಜೈಲು ಇರಲಿದೆ. ಶಿವಮೊಗ್ಗ ಸೋಗಾನೆಯ ಸೆಂಟ್ರಲ್ ಜೈಲ್ ಆವರಣದಲ್ಲಿ ವಿಶೇಷ ಜೈಲು ನಿರ್ಮಾಣ ಮಾಡಲಾಗುವುದು ಎಂದರು.

ಮುರುಘಾಶ್ರೀ ವಿರುದ್ಧ ಸಾಕ್ಷ್ಯಾಧಾರ ಇಲ್ಲವೆಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಂಥದ್ದೇನೂ ವಿಷಯ ನನಗೆ ಗೊತ್ತಿಲ್ಲ. ಅಂತೆ-ಕಂತೆಗಳಿಗೆ ನಾನು ಉತ್ತರಿಸುವುದಿಲ್ಲ. ಮುರುಘಾಶ್ರೀ ಸೇರಿದಂತೆ ಹಲವರ ಬಂಧನ ಆಗಿದೆ. ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಪ್ರಭಾವ ಕೂಡ ಬೀರಿಲ್ಲ.ಪೊಲೀಸರಿಗೆ ಮುಕ್ತ ಅವಕಾಶ ಕೊಡಲಾಗಿದೆ. ಬಹಳ ಚೆನ್ನಾಗಿ ತನಿಖೆ ಮಾಡ್ತಿದ್ದಾರೆ ಎಂದರು.

ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಆತ್ಯಂತ ವೈಜ್ಞಾನಿಕವಾಗಿ ಮೀಸಲಾತಿಯನ್ನು ಸಿಎಂ ಘೋಷಣೆ ಮಾಡಿದ್ದಾರೆ. ಹಿಂದುಳಿದ ವರ್ಗದ ವರದಿ ಬಂದ ನಂತರ ಮೀಸಲಾತಿ ಸಿಗುವ ವಿವರ ಗೊತ್ತಾಗುತ್ತೇ ಎಂದರು.

Similar News