ಜ.5 ರಿಂದ ಜ.13ರವರೆಗೆ ಬೀದರ್, ಕಲಬುರ್ಗಿ ಜಿಲ್ಲೆಗಳಲ್ಲಿ 2ನೇ ಹಂತದ ಪಂಚರತ್ನ ರಥಯಾತ್ರೆ: ಕುಮಾರಸ್ವಾಮಿ

Update: 2023-01-04 11:51 GMT

ಬೆಂಗಳೂರು: ಎರಡನೇ ಹಂತದ ಪಂಚರತ್ನ ರಥಯಾತ್ರೆ ನಾಳೆಯಿಂದ ಬೀದರ್ ಜಿಲ್ಲೆಯಿಂದ ಪ್ರಾರಂಭ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಬೀದರ್ ಮತ್ತು ಕಲಬುರ್ಗಿಯಲ್ಲಿ ರಥಯಾತ್ರೆ ಜನವರಿ 13ನೇ ತಾರೀಕಿನವರೆಗೆ ನಡೆಯಲಿದೆ ಎಂದರು.

ಬೀದರ್ ಜಿಲ್ಲೆಯಲ್ಲಿ 4 ದಿನ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ 5 ದಿನ ರಥಯಾತ್ರೆ ನಡೆಯಲಿದ್ದು, ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 14,15, 16ರಂದು ವಿರಾಮ‌ ಇರಲಿದೆ. ಜನವರಿ 17ರಿಂದ ಇಂಡಿ ವಿಧಾನಸಭೆ ಕ್ಷೇತ್ರದಿಂದ ಮತ್ತೆ ರಥಯಾತ್ರೆ ಶುರು ಆಗಲಿದೆ. ಅದು ಕ್ರಮವಾಗಿ ರಾಯಚೂರು, ಕೊಪ್ಪಳ, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಡೆಯಲಿದೆ. ಆ ಕುರಿತ ವೇಳಾಪಟ್ಟಿಯನ್ನು ತಿಳಿಸಲಾಗುವುದು ಎಂದರು ಕುಮಾರಸ್ವಾಮಿ ಅವರು.

ಹಳೆ ಮೈಸೂರು ಕರ್ನಾಟಕದಲ್ಲಿ ಬಿಟ್ಟರೆ ಉತ್ತರ ಕರ್ನಾಟಕದಲ್ಲಿ ಶಕ್ತಿ ಇಲ್ಲ ಅಂತಾರೆ ನಮ್ಮ ವಿರೋಧಿಗಳು. ಆದರೆ, ಆ ಭಾಗದಲ್ಲಿ ಕನಿಷ್ಟ 35 ಸ್ಥಾನ ಉತ್ತರ ಕರ್ನಾಟಕದಲ್ಲಿ ಗೆಲ್ಲಲು ಪ್ರಯತ್ನ ಮಾಡುತ್ತೇವೆ. ನಾವು ನಮ್ಮ ವಿಚಾರಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ. ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಯಾವುದೂ ಇರೋದಿಲ್ಲ. ಈ ಐದು ಕಾರ್ಯಕ್ರಮಗಳನ್ನು ಜನರ ಮುಂದೆ ಇಡ್ತೀವಿ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದರು.

ಅಮಿತ್ ಶಾ ಅವರು ಬಂದು ನಮ್ಮ ಕುಟುಂಬ ಹಾಗೂ ಜೆಡಿಎಸ್ ಪಕ್ಷದ ಬಗ್ಗೆ ಟೀಕೆ ಮಾಡಿದ್ದರ ಬಗ್ಗೆ ಈಗಾಗಲೇ ಹೇಳಿದ್ದೇನೆ. ಸ್ವತಂತ್ರ ಸರ್ಕಾರ ತರುವುದು ನಮ್ಮ ಗುರಿ. ಜೆಡಿಎಸ್ ಪಕ್ಷವನ್ನು 35 ಸೀಟುಗಳಿಗೆ ಕಟ್ಟಿ ಹಾಕುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ. ಕೊನೆಪಕ್ಷ ನಾವು ಅಷ್ಟು ಸೀಟು ಗೆಲ್ಲುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ, ಅವರಿಗೆ ನಾನು ಆಭಾರಿ ಎಂದು ಕುಮಾರಸ್ವಾಮಿ ಅವರು ಕುಟುಕಿದರು.

ಬಿಜೆಪಿ ಕಾಂಗ್ರೆಸ್ ರೀತಿಯಲ್ಲಿ ನಾವು ದೊಡ್ಡ ಕಾರ್ಯತಂತ್ರ ಮಾಡಿಕೊಂಡು ಹೋಗುತ್ತಿಲ್ಲ. ಪಂಚರತ್ನ ನಮ್ಮ ಕಾರ್ಯಕ್ರಮ ಮಾತ್ರ. ಜನರಿಗೆ ಅದನ್ನು ಮಾತ್ರ ಹೇಳುತ್ತೇವೆ. ಈಗಾಗಲೇ ಪಂಚರತ್ನ ರಥಯಾತ್ರೆಯ ಮೊದಲ ಹಂತಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. 34 ದಿನಗಳ 34 ಕ್ಷೇತ್ರಗಳ ರಥಯಾತ್ರೆಯಲ್ಲಿ ಬಹುತೇಕ ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Similar News