ಗೃಹ ಸಚಿವ ಖಾತೆಯಲ್ಲಿ ಈಗ ನಾನು ಎಕ್ಸ್‌ಪರ್ಟ್ ಆಗಿದ್ದೇನೆ: ಆರಗ ಜ್ಞಾನೇಂದ್ರ

''ಗೃಹ ಸಚಿವರನ್ನು ಕಾಡುವಷ್ಟು ವಿಷಯಗಳು ಬೇರೆ ಯಾರಿಗೂ ಇಲ್ಲ...''

Update: 2023-01-05 04:58 GMT

ಶಿವಮೊಗ್ಗ, ಜ.04: ನಾನೇನೂ ಐದು ವರ್ಷ ಮಂತ್ರಿಯಾಗಿದ್ದವನಲ್ಲ. ಕೇವಲ ಒಂದೂವರೆ ವರ್ಷದ ಗೃಹಮಂತ್ರಿ.ಇರುವ ಅವಧಿಯಲ್ಲಿ ಜಿಲ್ಲೆಗೆ ಗರಿಷ್ಠ ಅನುದಾನ ಕೊಟ್ಟಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ನಗರದ ಪೂರ್ವ ಸಂಚಾರ ಪೊಲೀಸ್  ಠಾಣೆಯ ನೂತನ ಕಟ್ಟಡವನ್ನು ಲೋಕಾರ್ಪಣೆ ಗೊಳಿಸಿ ಅವರು ಮಾತನಾಡಿದರು.

''ರಾಜ್ಯದಲ್ಲಿ ಗೃಹ ಸಚಿವರನ್ನು ಕಾಡುವಷ್ಟು ವಿಷಯಗಳು ಬೇರೆ ಯಾರಿಗೂ ಇಲ್ಲ. ಈ ವಿಚಾರದಲ್ಲಿ ಹೆಚ್ಚಿನ ಅನುಭಗಳಿಲ್ಲದೆ ಇದ್ದ ನನಗೆ ಆರಂಭದಲ್ಲಿ ಸಂಕೋಚವಾಗುತ್ತಿತ್ತು. ಆಯನೂರು ಮಂಜುನಾಥರಂಥವರು ನಿನಗ್ಯಾಕೆ ಗೃಹ ಖಾತೆ ಅಂತಲೂ ಕೇಳಿದ್ದಾರೆ. ಆದರೆ, ಈಗ ನಾನು ಎಕ್ಸ್‌ಪರ್ಟ್ ಆಗಿದ್ದೇನೆ'' ಎಂದರು.

''ಶಿವಮೊಗ್ಗದ ಸೆಂಟ್ರಲ್ ಜೈಲು ಆವರಣದಲ್ಲಿ 108 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ಜೈಲು ನಿರ್ಮಾಣವಾಗಲಿದೆ. 10 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗಕ್ಕೆ ಎಫ್ ಎಸ್ ಎಲ್ ಕೇಂದ್ರ ಸ್ಥಾಪನೆ ಆಗುತ್ತಿದೆ. 48 ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇನೆ. ಪ್ರತಿ ಠಾಣಿಗೆ ಸೈಬರ್ ಕ್ರೈಮ್ ತಜ್ಞರ ನೇಮಕ ಮಾಡಲಾಗಿದೆ. ಇಲಾಖೆಗೆ ಹೊಸ ವಾಹನ ಕೊಟ್ಟಿದ್ದೇವೆ'' ಎಂದರು.

''ನಾನು ಮಂತ್ರಿಯಾದ ಬಳಿಕ  ಹಿಜಾಬ್ ಸೇರಿದಂತೆ ಎಲ್ಲ ಸವಾಲು ನನ್ನ ಅವಧಿಯಲ್ಲಿ ನಡೆಯಿತು. ಪಿಎಸ್ ಐ ನೇಮಕಾತಿ ಹಗರಣ ಕೂಡಾ ಸವಾಲಾಗಿತ್ತು. ಬೇಲಿಯೇ ಎದ್ದು ಮೇಯ್ದ ಪರಿಸ್ಥಿತಿ ಅದು. ಆದರೂ ನಮ್ಮ ಇಲಾಖೆ ಪಾರದರ್ಶಕವಾಗಿ ತನಿಖೆ ಮಾಡಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯನ್ನು ಜೈಲಿಗೆ ಕಳಿಸಿದ್ದೇವೆ. ಗೃಹ ಇಲಾಖೆ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಇದರ ಕ್ರೆಡಿಟ್ ಸಾಮಾನ್ಯ ಪೇದೆಯಿಂದ ಅಧಿಕಾರಿಗಳವರೆಗೆ ಸಲ್ಲುತ್ತದೆ'' ಎಂದರು.

''ಪ್ರತಿಪಕ್ಷಗಳು ವಿತಂಡವಾದ ಮಾಡುತ್ತಿವೆ. ಆರೋಪಿಗಳಿಗೆ ರಕ್ಷಣೆ ನೀಡುತ್ತಿವೆ. ಶಿವಮೊಗ್ಗದಲ್ಲಿ ನಡೆದ ಹಿಂದು ಹರ್ಷ ಕೊಲೆ ಖಂಡಿಸುವುದನ್ನು ಬಿಟ್ಟು  ಮೆರವಣಿಗೆಯಲ್ಲಿ ಭಾಗಿಯಾದ ಈಶ್ವರಪ್ಪ ವಿರುದ್ಧ ಮಾತನಾಡುವ ಮೂಲಕ ರಾಜಕಾರಣ ಮಾಡಿದರು. ಮೈಸೂರಿನಲ್ಲಿ ನಡೆದ ಅತ್ಯಾಚಾರ ಖಂಡಿಸುವುದು ಬಿಟ್ಟು ನನ್ನ ಮೇಲೆ ಹರಿಹಾಯ್ದರು'' ಎಂದರು.

ಶಿವಮೊಗ್ಗ ರೌಡಿಗಳ ರಾಜ್ಯವಾಗಿತ್ತು. ರೌಡಿಗಳ ಫೀಡಿಂಗ್ ಸೆಂಟ್ರ್ ಆಗಿತ್ತು. ಈಗ ಯಾರೂ ಬಾಲ ಬಿಚ್ಚುತ್ತಿಲ್ಲ. ಶಿವಮೊಗ್ಗ, ಭದ್ರಾವತಿಯಲ್ಲಿ ಇನ್ನು ರೌಡಿಗಳ ಆಟ ನಡೆಯದು ಎಂದರು.

ಕಾರ್ಯಕ್ರಮದಲ್ಲಿ ಪೂರ್ವ ವಲಯ  ಐಜಿಪಿ ಕೆ.ತ್ಯಾಗರಾಜನ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್,ಎಎಸ್ಪಿ ರೋಹನ್ ಜಗದೀಶ್ ಸೇರಿದಂತೆ ಪೊಲೀಸ್ ಅಧಿಕಾರಿಗಳಿದ್ದರು.

Similar News