ರಾಹುಲ್ ಗಾಂಧಿಗೆ ಏಕೆ ಚಳಿ ಆಗುವುದಿಲ್ಲ ಎಂದು ತಿಳಿಯಲು ತಜ್ಞರನ್ನು ಕೇಳಿದ್ದೇನೆ: ಉ.ಪ್ರ ಉಪಮುಖ್ಯಮಂತ್ರಿ
ಲಕ್ನೋ : ಭಾರತ್ ಜೋಡೋ ಯಾತ್ರೆ ಮುನ್ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಚಳಿಯಿರುವಾಗಲೂ ಕೇವಲ ಟಿ-ಶರ್ಟ್ ಧರಿಸುತ್ತಿರುವುದು ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಬೃಜೇಶ್ ಪಾಠಕ್ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ರಾಹುಲ್ ಗಾಂಧಿಗೆ ಚಳಿಯೇಕೆ ಆಗುತ್ತಿಲ್ಲ ಎಂದು ಕಂಡುಹಿಡಿಯಲು ತಜ್ಞರಿಗೆ ಅಧ್ಯಯ ನಡೆಸುವಂತೆ ಹೇಳಿದ್ದೇನೆ ಎಂದು ಪಾಠಕ್ ಹೇಳಿದ್ದಾರೆ.
"ಆಖಿರ್ ವೋ ಕೌನ್ ಸಾ ಜೀವನು ಹೈ ಜಿಸ್ಸೆ ಥಂಡ್ ನಹೀ ಲಗ್ತೀ" (ಅಷ್ಟಕ್ಕೂ ಚಳಿಯೇ ಆಗದವರು ಎಂತಹಾ ಮನುಷ್ಯರು) ಎಂದು ಪಾಠಕ್ ಅವರು ಹೇಳುತ್ತಿರುವ ಸಂದರ್ಶನದ ವೀಡಿಯೋ ವೈರಲ್ ಆಗಿದೆ.
"ರಾಹುಲ್ ಗಾಂಧಿ ಅವರಿಗೆ 3-4 ಡಿಗ್ರಿ ತಾಪಮಾನಗಳಲ್ಲಿಯೂ ಚಳಿಯಾಗುತ್ತಿಲ್ಲ ಎಂಬ ಬಗ್ಗೆ ಹಲವು ಮಾಧ್ಯಮ ವರದಿಗಳಿವೆ. ಅವರಿಗೆ ಈ ಚಳಿ ನಿರೋದಕ ಶಕ್ತಿ ಹೇಗೆ ದೊರಕಿತು ಎಂಬ ಬಗ್ಗೆ ಸಂಶೋಧನೆ ನಡೆಯುತ್ತಿದೆ, ಕಂಡುಹಿಡಿಯಲು ನಮ್ಮ ತಜ್ಞರಿಗೆ ಹೇಳಿದ್ದೇವೆ," ಎಂದು ಪಾಠಕ್ ಹೇಳಿದ್ದಾರೆ.
ತಮಗೆ ಚಳಿಯ ಬಗ್ಗೆ ಭಯವಿಲ್ಲದೇ ಇರುವುದರಿಂದ ಚಳಿಯಾಗುವುದಿಲ್ಲ ಎಂದು ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದರೆ ಅವರ ಸೋದರಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧೀ ವಾದ್ರಾ ಪ್ರತಿಕ್ರಿಯಿಸಿ "ರಾಹುಲ್ ಗಾಂಧಿ ಸತ್ಯದ ಕವಚ ಧರಿಸಿದ್ದಾರೆ, ದೇವರು ಅವರನ್ನು ರಕ್ಷಿಸುತ್ತಾರೆ," ಎಂದಿದ್ದರು.