ಬೆಂಗಳೂರು-ಮೈಸೂರು ಹೆದ್ದಾರಿಗೆ ದೇವೇಗೌಡರ ಹೆಸರಿಡಿ: ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮನವಿ

Update: 2023-01-05 15:29 GMT

ಬೆಂಗಳೂರು, ಜ. 5: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ವೈಮಾನಿಕ ಸಮೀಕ್ಷೆಗೆ ಧಾವಿಸಿರುವ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೇ ಈ ಭಾಗದ ಜನರ ಭಾವನೆಗಳನ್ನು ನೀವು ಅರ್ಥ ಮಾಡಿಕೊಂಡಿದ್ದೆ ಆದರೆ, ಈ ಮಹಾರಸ್ತೆಗೆ ಮಾಜಿ ಪ್ರಧಾನಿ ದೇವೇಗೌಡರ ಹೆಸರಿಡಿ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮನವಿ ಮಾಡಿದ್ದಾರೆ.

ಗುರುವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ಈ ರಸ್ತೆ ಹಾದು ಹೋಗುವ ಉದ್ದಗಲಕ್ಕೂ ಇರುವ ಮಣ್ಣಿನ ಕಣಕಣದಲ್ಲೂ, ರೈತರ ಬೆವರ ಹನಿ ಶ್ರಮದಲ್ಲಿ ದೇವೇಗೌಡರ ಹೆಸರು ರಾರಾಜಿಸುತ್ತಿದೆ. ದೇವೇಗೌಡರು ಅಜಾತ ಶತ್ರು ಆಗಿದ್ದಾರೆ. ಇದನ್ನು ಮನಗಂಡು ಈ ದಿಗ್ಗಜ ನಾಯಕರ ಹೆಸರಿಗೆ ಗೌರವಿಸುವ ದೃಷ್ಟಿಯಿಂದ ಈ ದಶಪಥ ರಸ್ತೆಗೆ ಅವರ ಹೆಸರಿಡುವುದು ಸೂಕ್ತ ಎಂದು ವಿನಂತಿಸಿದ್ದಾರೆ.

ಪ್ರಧಾನಿಯಂತಹ ಉನ್ನತ ಹುದ್ದೆ ಅಲಂಕರಿಸಿದ ಪ್ರಪ್ರಥಮ ಕನ್ನಡಿಗ ಎನ್ನುವ ಹಿರಿಮೆ ದೇವೇಗೌಡರದ್ದು. ಕರ್ನಾಟಕದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಕೊಂಡೊಯ್ದ ಹೆಮ್ಮೆ. ಹೀಗಾಗಿ ಈ ರಸ್ತೆಗೆ ಅವರ ಹೆಸರಿಟ್ಟರೆ ಕೇಂದ್ರಕ್ಕೂ ಹೆಸರು ಬರುತ್ತದೆ. ಪಕ್ಷ ರಾಜಕಾರಣವನ್ನು ಬದಿಗಿಟ್ಟು, ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ದೇವೇಗೌಡರ ಹೆಸರು ಇಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಅವರು ಕೋರಿದ್ದಾರೆ.

ಇದನ್ನೂ ಓದಿ: ಮೈಸೂರು-ಬೆಂಗಳೂರು ಹೆದ್ದಾರಿಗೆ ಒಡೆಯರ್ ಹೆಸರಿಡಿ: ನಿತಿನ್ ಗಡ್ಕರಿ, ಸಿಎಂ ಬೊಮ್ಮಾಯಿಗೆ ಎಸ್.ಎಂ ಕೃಷ್ಣ ಪತ್ರ

Similar News