86ನೇ ಸಾಹಿತ್ಯ ಸಮ್ಮೆಳನ: ಉಸ್ಮಾನ್ ಸಾಹೇಬರ ಕೈಯಲ್ಲಿ ತಯಾರಾದ ಒಂದು ಸಾವಿರ ಯಾಲಕ್ಕಿ ಮಾಲೆ

Update: 2023-01-06 06:33 GMT

ಹಾವೇರಿ: ಏಲಕ್ಕಿ ಕಂಪಿನ ನಾಡಿನಲ್ಲಿ ಇಂದಿನಿಂದ  ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಮ್ಮೇಳನಾಧ್ಯಕ್ಷ, ಮುಖ್ಯಮಂತ್ರಿ ಹಾಗೂ ಇತರೆ ಗಣ್ಯರನ್ನು ಗೌರವಿಸಲು 5 ಲಕ್ಷ  ರೂ. ಮೌಲ್ಯದ ಒಂದು ಸಾವಿರ ಏಲಕ್ಕಿ ಮಾಲೆಗಳನ್ನು ಸಿದ್ಧಪಡಿಸಲಾಗಿದೆ.

ಈ ಮಾಲೆಗಳು ತನ್ನ ಸೊಬಗು ಮತ್ತು ಪರಿಮಳದಿಂದ ಹಾವೇರಿಗೆ ‘ಏಲಕ್ಕಿ ಕಂಪಿನ ನಗರ’ ಎಂದು ಹೆಸರು ತಂದುಕೊಟ್ಟಿವೆ. ಬೆಂಗಳೂರಿನ ವಿಧಾನಸೌಧದಿಂದ ನವದೆಹಲಿಯ ರಾಷ್ಟ್ರಪತಿ ಭವನದವರೆಗೆ ಅನೇಕ ಗಣ್ಯರ ಕೊರಳನ್ನು ಅಲಂಕರಿಸಿವೆ. ಅಷ್ಟೇ ಏಕೆ ಅಮೆರಿಕ, ಇಂಗ್ಲೆಂಡ್‌, ಜಪಾನ್‌ ಮುಂತಾದ ವಿದೇಶಗಳಲ್ಲೂ ಕಂಪನ್ನು ಬೀರಿವೆ.

ಹಾವೇರಿಯ ಚಂದ್ರಪಟ್ಟಣ ರಸ್ತೆಯ ಉಸ್ಮಾನ್‌ ಸಾಹೇಬ್‌ ಪಟವೇಗಾರ್‌ ಕುಟುಂಬ ಎಂಟು ದಶಕಗಳಿಂದ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಾ ಬಂದಿದೆ. 1996ರಲ್ಲಿ ಈ ಕುಟುಂಬಕ್ಕೆ ರಾಜ್ಯ ಪ್ರಶಸ್ತಿಯ ಗೌರವವೂ ಸಂದಿದೆ. ಹೀಗಾಗಿ, ಈ ಕುಟುಂಬಕ್ಕೆ ನುಡಿಜಾತ್ರೆಗೆ ಸಾವಿರ ಏಲಕ್ಕಿ ಮಾಲೆಗಳನ್ನು ತಯಾರಿಸುವ ಹೊಣೆಯನ್ನು ಜಿಲ್ಲಾಡಳಿತ ನೀಡಿದೆ.

ಸಮ್ಮೇಳನಾಧ್ಯಕ್ಷರಿಗೆ ಬೃಹತ್‌ ಹಾರ: ‘ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 4 ಅಡಿ ಎತ್ತರದ 10 ಎಳೆಗಳುಳ್ಳ ಬೃಹತ್‌ ಏಲಕ್ಕಿ ಮಾಲೆಯನ್ನು ತಯಾರಿಸುತ್ತಿದ್ದೇವೆ. ಎರಡೂವರೆ ಅಡಿ ಎತ್ತರದ 5 ಎಳೆಯ 400 ಹಾರಗಳು ಮತ್ತು 2 ಅಡಿ ಎತ್ತರದ 600 ಹಾರಗಳನ್ನು ಸಿದ್ಧಪಡಿಸುತ್ತಿದ್ದೇವೆ. ಕೈಯಿಂದಲೇ ಮಾಲೆ ಕಟ್ಟಬೇಕಿರುವುದರಿಂದ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸುಮಾರು 40 ಕಾರ್ಮಿಕರೊಂದಿಗೆ ಹಗಲು–ರಾತ್ರಿ ಬಿಡುವಿಲ್ಲದೆ ಮಾಲೆ ಕಟ್ಟುತ್ತಿದ್ದೇವೆ’ ಎಂದು ವ್ಯಾಪಾರಿ ಹಝರತ್‌ ಸಾಹೇಬ್‌ ಪಟವೇಗಾರ್‌ ತಿಳಿಸಿದರು.

Similar News