‘ಕನ್ನಡ ಜ್ಞಾನ-ವಿಜ್ಞಾನ-ತಂತ್ರಜ್ಞಾನ ಕಾರ್ಯಪಡೆ’ ರಚನೆಯಾಗಲಿ: ಸರಕಾರಕ್ಕೆ ಸಾಹಿತಿ ಡಾ. ದೊಡ್ಡ ರಂಗೇಗೌಡ ಆಗ್ರಹ

ಹಾವೇರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

Update: 2023-01-06 17:23 GMT

ಹಾವೇರಿ, ಜ. 6: ನಮ್ಮ ರಾಜ್ಯದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಶ್ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿಯೇ ನೀಡುವ ತಲಾ ಒಂದೊಂದು ಕಾಲೇಜನ್ನಾದರೂ ಮುಂದಿನ ಮೂರು ವರ್ಷದ ಅವಧಿಯಲ್ಲಿ ನಾವು ಆರಂಭಿಸಬೇಕು. ಇದಕ್ಕಾಗಿ ‘ಕನ್ನಡ ಜ್ಞಾನ-ವಿಜ್ಞಾನ-ತಂತ್ರಜ್ಞಾನ ಕಾರ್ಯಪಡೆ’ಯೊಂದನ್ನು ಮೊದಲು ರಾಜ್ಯ ಸರ್ಕಾರ ರಚಿಸಬೇಕು, ಕನ್ನಡವೆಂದಾಕ್ಷಣ ಕೇವಲ ಸಾಹಿತಿಗಳು, ಕವಿಪುಂಗವರನ್ನು ನೆನೆಯುವ ಸೀಮಿತ ಕಲ್ಪನೆಯಿಂದ ನಾವು ಇಂದು ಹೊರಬಂದು ವಿಜ್ಞಾನ, ತಂತ್ರಜ್ಞಾನ, ಜೀವಶಾಸ್ತ್ರ, ವೈದ್ಯಕೀಯ, ಗಣಿತಶಾಸ್ತ್ರ, ಅರ್ಥಶಾಸ್ತ್ರ, ಮಾನವಿಕ ಶಾಸ್ತ್ರಗಳಲ್ಲಿರುವ ಕನ್ನಡದ ಮಹಾನ್ ಸಾಧಕರನ್ನುಮುನ್ನೆಲೆಗೆ ತರಬೇಕು ಎಂದು 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಿರಿಯ ಸಾಹಿತಿ ಡಾ. ದೊಡ್ಡ ರಂಗೇಗೌಡ ಕರೆ ನೀಡಿದ್ದಾರೆ.

ಹಾವೇರಿಯಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡುತ್ತಿದ್ದರು.

ಕನ್ನಡವನ್ನು ಜ್ಞಾನದ ಭಾಷೆಯಾಗಿ ರೂಪಿಸಲು, ಕಲಿಸಲು ಗಟ್ಟಿಯಾದ ತಳಪಾಯ ಸೃಷ್ಟಿಸಬೇಕು, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿನ ಪಾರಿಭಾಷಿಕ ಪದಗಳಿಗೆ ಸಂವಾದಿಯಾಗಿ ಕನ್ನಡ, ಕಂಗ್ಲಿಷ್ ಪದಗಳನ್ನು ರೂಪಿಸುವುದರೊಟ್ಟಿಗೆ ಇವುಗಳಲ್ಲಿ ಏಕರೂಪತೆಯನ್ನು ತರುವ ನಿಟ್ಟಿನಲ್ಲಿ ಒಂದು ‘ಸಮಗ್ರ ಪಾರಿಭಾಷಿಕ ಪದಕೋಶ’ವನ್ನು ರೂಪಿಸುವುದು ಇಂದಿನ ಅಗತ್ಯ ಎಂದ ಅವರು, ಕನ್ನಡದಲ್ಲಿ ಉನ್ನತ, ವೃತ್ತಿಪರ ಶಿಕ್ಷಣ ನೀಡುವ ವಿಚಾರವಾಗಿ ಆರಂಭಿಕ ವರ್ಷಗಳಲ್ಲಿ ಪ್ರಸ್ತುತ ಇರುವ ಆಯ್ದ ಕೆಲ ಪ್ರತಿಷ್ಠಿತ ಸರ್ಕಾರಿ ವೈದ್ಯಕೀಯ, ವಿಜ್ಞಾನ, ಇಂಜಿನಿಯರಿಂಗ್ಕಾಲೇಜುಗಳ ಕಟ್ಟಡ, ಮೂಲಸೌಕರ್ಯವನ್ನೇ ಬಳಸಿಕೊಂಡು ಅಲ್ಲಿನ ಸಿಬ್ಬಂದಿ ಹಾಗೂ ಪಠ್ಯಕ್ರಮವನ್ನು ಸೂಕ್ತ ರೀತಿಯಲ್ಲಿ ಅಣಿಗೊಳಿಸುವ ಮೂಲಕ ಹಾಗೂ ಕನ್ನಡದಲ್ಲಿ ಕಲಿಸಬೇಕೆನ್ನುವ ಇಚ್ಛಾಶಕ್ತಿ ಇರುವ ಉತ್ಸಾಹಶೀಲ, ನುರಿತ ಬೋಧಕ ಸಿಬ್ಬಂದಿಯನ್ನು ಅಲ್ಲಿಗೆ ತರುವ ಮೂಲಕ ಕನ್ನಡದಲ್ಲಿಯೇ ಈ ಶಾಸ್ತ್ರಗಳನ್ನು ಕಲಿಯಲು ಮುಂದಾಗುವ ವಿದ್ಯಾರ್ಥಿಗಳ ಒಂದು ಪ್ರತ್ಯೇಕ ತಂಡ ಆರಂಭಿಸಬಹುದು. ಹೀಗೆ, ಕನ್ನಡದಲ್ಲಿಯೇ ವೃತ್ತಿಪರ ಶಿಕ್ಷಣವನ್ನು ಪಡೆಯಲು ಮುಂದಾಗುವ ಪ್ರತಿಭಾವಂತ ಮಕ್ಕಳ ಸಂಪೂರ್ಣ ಖರ್ಚುವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳುವ ಮೂಲಕ ವೃತ್ತಿಪರ ಕೋರ್ಸ್ಗಳನ್ನು, ಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ಕಲಿಯುವುದಕ್ಕೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದರು.

ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣಗಳಲ್ಲಿ ಕನ್ನಡ ಒಂದು ಶಿಕ್ಷಣ ಮಾಧ್ಯಮವಾಗಿ ರಾರಾಜಿಸುವಂತೆ ಮಾಡಲು ನಾವು ಪಣ ತೊಡಬೇಕು. ಇಂಗ್ಲಿಷ್‌ನಲ್ಲಿಯೇ ಉನ್ನತ ಶಿಕ್ಷಣವನ್ನು ಪಡೆಯುತ್ತೇನೆ ಎನ್ನುವವರು ಅದರಲ್ಲಿಯೇ ಪಡೆಯಲಿ, ಅವರ ನಿರ್ಧಾರದ ಬಗ್ಗೆ ನನಗೆ ತಕರಾರಿಲ್ಲ. ಆದರೆ, ಕನ್ನಡದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ ಎನ್ನುವ ಕೊರಗು ಯಾವುದೇ ಕನ್ನಡಿಗನಿಗೆ ಇರಬಾರದು. ವಿಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ಕಲಿಯಲು ಸಾಧ್ಯವಾಗದ ಕಾರಣಕ್ಕೆ ಈ ನಾಡಿನ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ತನಗಿಷ್ಟವಿಲ್ಲದ ಮತ್ತಾವುದೋ ಶಿಕ್ಷಣವನ್ನು ಪಡೆಯುವಂತಾಗಬಾರದು. ಎಂದು ಕಳಕಳಿ ವ್ಯಕ್ತಪಡಿಸಿದರು.

ಸಮಕಾಲೀನ ಜಗತ್ತಿನಲ್ಲಿ ಭಾಷೆಯೊಂದು ತನ್ನ ಪಾರಮ್ಯತೆಯನ್ನುಮೆರೆಯಬೇಕೆಂದರೆ ಅದು ಮನೆಯಂಗಳದ ಭಾಷೆಯಾಗಿ, ದೈನಂದಿನ ವ್ಯಾವಹಾರಿಕ ಭಾಷೆಯಾಗಿ ಮಾತ್ರವೇ ಉಳಿದರೆ ಸಾಲದು. ಅದು ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಭಾಷೆಯಾಗಿಯೂ ವಿಕಸಿತಗೊಳ್ಳಬೇಕು. ಹಾಗಾಗಿ, ಉನ್ನತ ಶಿಕ್ಷಣದಲ್ಲಿಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ರೂಪಿಸಲು ನಾವು ಇಂದು ಸ್ಪಷ್ಟ ಕಾರ್ಯಸೂಚಿಯೊಂದನ್ನು ರೂಪಿಸಿಕೊಂಡು ಆ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ ಇರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಭಾಷೆ ಎನ್ನುವುದು ವ್ಯಾವಹಾರಿಕ ಸಾಧನವಾಗಿ, ದುಡಿಮೆಯ ಮಾರ್ಗವಾಗಿ ತನ್ನ ಸ್ವರೂಪವನ್ನು ಹಿಗ್ಗಿಸಿಕೊಂಡಿರುವುದನ್ನು ಉಲ್ಲೇಖಿಸಿದ ದೊಡ್ಡರಂಗೇಗೌಡರು, ಸಾಮುದಾಯಿಕ ಬದುಕಿನಿಂದ ದೂರವಾಗಿ ವ್ಯಕ್ತಿ ಕೇಂದ್ರಿತ ಬದುಕು ಮುನ್ನೆಲೆಗೆ ಬಂದಿರುವ ಇಂದಿನ ವಾಸ್ತವದ ಜಗತ್ತಿನಲ್ಲಿ ‘ಅನ್ನ ನೀಡುವ’ ಭಾಷೆಯ ಬಗ್ಗೆ ಜನಸಮುದಾಯದಲ್ಲಿ ವಿಶೇಷ ಸೆಳೆತ ಕಂಡು ಬರುತ್ತಿರುವುದಕ್ಕೆ ನಾವು ಕುರುಡಾಗಬಾರದು. ಕನ್ನಡವನ್ನು ಅನ್ನ ನೀಡುವ ಭಾಷೆಯಾಗಿ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮ ಮುಂದಿದೆ ಎಂದು ಹೇಳಿದರು.

ಉದ್ಯೋಗ, ಉದ್ಯಮಶೀಲತೆಯ ಭಾಷೆಯಾಗಿ ಕನ್ನಡ ಕನ್ನಡ ಅನ್ನದ ಭಾಷೆಯಾಗಿ, ಉದ್ಯೋಗದ ಭಾಷೆಯಾಗಿ, ಉದ್ಯಮಶೀಲತೆಯ ಭಾಷೆಯಾಗಿ ಸಶಕ್ತವಾಗಬೇಕಾದರೆ ಮಾರುಕಟ್ಟೆ ಸಂಸ್ಕೃತಿಯ ಇಂದಿನ ದಿನಗಳಲ್ಲಿ ಕನ್ನಡಿಗರು ತಾವು ಪಡೆಯುವ ಸೇವೆಗಳನ್ನುಕನ್ನಡದಲ್ಲಿಯೇ ಪಡೆಯುವ ಜಾಗೃತಿ, ಆಗ್ರಹಗಳನ್ನು ಬೆಳಸಿಕೊಳ್ಳಬೇಕು. ವಿಪರ್ಯಾಸವೆಂದರೆ, ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು.

ಬ್ಯಾಂಕ್ ವಿಲೀನಗಳಿಂದ ಕನ್ನಡಕ್ಕೆ ಧಕ್ಕೆ!

ಬ್ಯಾಂಕುಗಳ ವಿಲೀನದ ಅನಂತರ ನಮ್ಮ ಹೆಮ್ಮೆಯ ಗುರುತಾಗಿದ್ದ ಹಲವು ಬ್ಯಾಂಕುಗಳ ಚಹರೆಯೇ ಬದಲಾಗಿದೆ. ಇಂದು ನಮ್ಮ ಮುಗ್ಧ ಜನತೆ ತಮ್ಮದೇ ಹಳ್ಳಿಯಲ್ಲಿರುವ ಬ್ಯಾಂಕುಗಳಲ್ಲಿಯೂ ಬ್ಯಾಂಕಿಂಗ್ ಸೇವೆಯನ್ನು ಕನ್ನಡದಲ್ಲಿ ಪಡೆಯಲು ಹೆಣಗಾಡಬೇಕಾದ ಪರಿಸ್ಥಿತಿ ಇದೆ ಎಂದು ಸಮ್ಮೇಳನಾಧ್ಯಕ್ಷರು ಕಳವಳ ವ್ಯಕ್ತಪಡಿಸಿದರು.

ಕನ್ನಡ ಬಾರದ, ಅರೆಬರೆ ಕನ್ನಡ ಬಂದರೂ ಕನ್ನಡದಲ್ಲಿ ಸೇವೆಯನ್ನು ನಿರಾಕರಿಸುವ ಸಿಬ್ಬಂದಿಗಳೇ ಇಂದು ಹೆಚ್ಚಿದ್ದಾರೆ. ಗ್ರಾಹಕನ ಭಾಷೆಯನ್ನಾಡದ ಬ್ಯಾಂಕುಗಳು ಕರ್ನಾಟಕದಲ್ಲಿ ಏಕಾದರೂ ಇರಬೇಕು ಹೇಳಿ? ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರ ಇಂತಹ ಅಭಾಸಗಳನ್ನು ನಿವಾರಿಸಿಕೊಳ್ಳಲು ವೈಯಕ್ತಿಕ ಹಾಗೂ ಆಡಳಿತಾತ್ಮಕ ನಗರಿಗರಲ್ಲೂ ಕಠಿಣ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ನಮ್ಮ ಭಾಷೆಯಲ್ಲಿ ಸೇವೆ ನೀಡದಬ್ಯಾಂಕುಗಳು, ಸರ್ಕಾರಿ ಉದ್ದಿಮೆಗಳು, ಖಾಸಗಿ ಸಂಸ್ಥೆಗಳನ್ನು ಮುಲಾಜಿಲ್ಲದ ಧಿಕ್ಕರಿಸಬೇಕು ಎಂದು ಸಮ್ಮೇಳನಾಧ್ಯಕ್ಷರು ಕರೆ ನೀಡಿದರು.

ಕನ್ನಡದ ರಾಯಭಾರಿಗಳನ್ನು ನಿರ್ಲಕ್ಷಿಸದಿರಿ

ಇಂದು ಪ್ರತಿಯೊಬ್ಬ ಹೊರನಾಡ ಕನ್ನಡಿಗನನ್ನೂ‘ಕನ್ನಡದ ರಾಯಭಾರಿ’ ಎಂದೇ ನಮ್ಮ ಸರ್ಕಾರವು ನೋಡಬೇಕು ಎಂದು ಆಗ್ರಹಿಸಿದ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ, ಅಲ್ಲಿನ ಕನ್ನಡಪರ ಸಂಘ ಸಂಸ್ಥೆಗಳಿಗೆ ವಿಶೇಷ ಉತ್ತೇಜನಗಳನ್ನು ನೀಡುವ ಮೂಲಕ ಕನ್ನಡದ ಚಟುವಟಿಕೆಗಳನ್ನು ಹೆಚ್ಚೆಚ್ಚು ಪಸರಿಸುವ ಶ್ಲಾಘನಾ ಕಾರ್ಯಗಳಿಗೆ ಒಂದು ಖಚಿತ ರೂಪುರೇಷೆಯನ್ನು ನೀಡಲು ಇದು ಸಕಾಲ. ಈ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕರ್ನಾಟಕ, ಕನ್ನಡದ ಬಗ್ಗೆ ಹೊರದೇಶಗಳಲ್ಲಿ ಹೆಚ್ಚಚ್ಚು ಆಸಕ್ತಿ, ಉತ್ಸಾಹ ಕೆರಳಿಸುವಂತಹ ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯಮಿಕ ಕಾರ್ಯಕ್ರಮಗಳನ್ನು ರೂಪಿಸಲು ವಿಶೇಷ ಅಸ್ಥೆ ವಹಿಸಬೇಕು. ಹೊರನಾಡ ಕನ್ನಡಿಗರಲ್ಲಿ ಭದ್ರತೆಯ ಭಾವನೆಯನ್ನು ಮೂಡಿಸುವುದರೊಟ್ಟಿಗೇ, ಅವರಲ್ಲಿ ರಾಯಭಾರಿತ್ವ, ಉದ್ಯಮಶೀಲತೆಯನ್ನು ಉದ್ದೀಪಿಸುವ ಕಾರ್ಯಕ್ರಮಗಳು, ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.

ಡಬಲ್ ಇಂಜಿನ್ ಸರಕಾರ ಏನು ಮಾಡುತ್ತಿದೆ?

ಇತರ ಶಾಸ್ತ್ರೀಯ ಭಾಷೆಗಳ ಹೋಲಿಕೆಯಲ್ಲಿ 2017 ರಿಂದ 2020ರ ಅವಧಿಯಲ್ಲಿ ಸಂಸ್ಕೃತ ಭಾಷೆಗೆ ಕೇಂದ್ರವು ನೀಡಿದ ಅನುದಾನದ ಮೊತ್ತ ರೂ. 643 ಕೋಟಿ ಆಗಿದೆ. ಇದೇ ಅವಧಿಯಲ್ಲಿ ಶಾಸ್ತ್ರೀಯ ಭಾಷಾ ಸ್ಥಾನಮಾನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಕನ್ನಡದ ಅಧ್ಯಯನ, ಸಂಶೋಧನೆಗಳಿಗೆ ಬಿಡುಗಡೆಯಾದ ಹಣ ಕೇವಲ ರೂ. 3 ಕೋಟಿ. ನೆರೆಯ ತಮಿಳು ಭಾಷೆಗೆ ಈ ಅವಧಿಯಲ್ಲಿ ದೊರೆತ ಹಣ ರೂ. 23 ಕೋಟಿ, ತಮಿಳು ಭಾಷೆಗೆ 2017ರಿಂದ 2021ರ ವರೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾದ ಹಿನ್ನೆಲೆಯಲ್ಲಿ ಬಿಡುಗಡೆಯಾದ ಒಟ್ಟು ಹಣ ರೂ. 42 ಕೋಟಿ. ಕನ್ನಡಕ್ಕೆನೀಡಲಾಗಿರುವ ಅನುದಾನ ಪರಿಸ್ಥಿತಿಯಲ್ಲಿ ಕಳೆದ ಎರಡು ವರ್ಷದ ಅವಧಿಯಲ್ಲಿಯೂ ಗಣನೀಯ ಸುಧಾರಣೆಯೇನೂ ಆಗಿಲ್ಲ ಎಂದು ದೊಡ್ಡರಂಗೇಗೌಡರು ಆಕ್ರೋಶ ವ್ಯಕ್ತಪಡಿಸಿದರು.

ಹೀಗಾದರೆ, ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದೂ ನಾವು ಏನು ಸಾಧಿಸಲು ಸಾಧ್ಯ? ಡಬಲ್ ಎಂಜಿನ್ ಸರ್ಕಾರದ ಅನುಕೂಲತೆಗಳ ಬಗ್ಗೆ ಪದೇ ಪದೆ ಹೇಳುವ ಕೇಂದ್ರದ ಸರ್ಕಾರವು ಕನ್ನಡಕ್ಕೆ ಮಾಡಿರುವ ಅನುಕೂಲ ಇದೆ ಏನು? ಎಂದು ಅವರು ಪ್ರಶ್ನಿಸಿದರು. ಕನ್ನಡಕ್ಕೆಶಾಸ್ತ್ರೀಯ ಭಾಷೆಯ ಸ್ಥಾನಮಾನ ಕೇವಲ ಕಣ್ಣ್ಣೊರೆಸುವ ತಂತ್ರವಾಗಿದೆಯೇ ಹೊರತು ಭಾಷೆ, ಸಂಶೋಧನೆಯ ದೃಷ್ಟಿಯಿಂದ ಮಹತ್ವದ್ದೇನನ್ನೂ ಸಾಧಿಸಲು ಸಾಧ್ಯವಾಗಿಲ್ಲ.

ಈ ವಾಸ್ತವದ ಹಿನ್ನೆಲೆಯಲ್ಲಿ ನಾಡಿನ ಆಳುವ ಸರ್ಕಾರಕ್ಕೆ ನಾನು ಹೇಳುವ ಮಾತೊಂದೇ, ಶಾಸ್ತ್ರೀಯ ಭಾಷಾ ಸ್ಥಾನಮಾನದ ಹಿನ್ನೆಲೆಯಲ್ಲಿ ಕನ್ನಡಕ್ಕೆದೊರೆಯಬೇಕಾದ ಹಕ್ಕಿನ ಹಣವನ್ನು ತರುವ ಜವಾಬ್ದಾರಿ ನಿಮ್ಮದು. ಅದನ್ನು ತರಿಸುವ ಪ್ರಯತ್ನ ಮಾಡಿ ಎಂದು ಸರಕಾರವನ್ನು ಒತ್ತಾಯಿಸಿದರು.

ಆನ್‌ಲೈನ್ ಜ್ಞಾನಕೋಶ ರಚನೆಯಾಗಲಿ

ಕನ್ನಡದ ಎಲ್ಲ ಪ್ರಾಚೀನ ಲಕ್ಷಣ ಗ್ರಂಥಗಳು ಸೇರಿದಂತೆ ಕ್ಲಾಸಿಕ್ ಕೃತಿಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಆಸಕ್ತರಿಗೆ ಲಭ್ಯವಾಗುವಂತೆ ಮಾಡಲು ನಾವು ಇಂದು ವಿಶೇಷ ಆಲ್‌ಲೈನ್ ಜ್ಞಾನಕೋಶವೊಂದರನ್ನು ರೂಪಿಸಬೇಕು ಎಂದು ಸಮ್ಮೇಳನಾಧ್ಯಕ್ಷರು ಕರೆ ನೀಡಿದರು.

ಈ ಜ್ಞಾನಕೋಶ ಸಂಪೂರ್ಣ ಉಚಿತವಾಗಿದ್ದು, ಅಕಡೆಮಿಕ್ ಶಿಸ್ತಿನಿಂದ ಕೂಡಿರಬೇಕು. ಸಾಹಿತ್ಯ, ಸಂಸ್ಕೃತಿ, ಜಾನಪದಕ್ಕೆ ಮಾತ್ರವೇ ಇದನ್ನು ಸೀಮಿತಗೊಳಿಸದೆ ಕನ್ನಡದ ಪ್ರಮುಖ ಸಂಶೋಧನಾ ಕೃತಿಗಳು, ಮಹತ್ವದ ಡಾಕ್ಟರೇಟ್ ಪ್ರಬಂಧಗಳೂ ಇದರಲ್ಲಿ ಲಭ್ಯವಾಗುವಂತಿರಬೇಕು. ಈ ಕೆಲಸ ನಿರಂತರವಾಗಿ, ಅಕಡೆಮಿಕ್ ಶಿಸ್ತಿನಿಂದ ನಡೆಯಬೇಕು. ನಮ್ಮ ಎಲ್ಲ ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ವಿಭಾಗಗಳು, ಕನ್ನಡ ಪೀಠಗಳು ಒಂದು ಸಮಾನ ಆಶಯವನ್ನು ಗುರುತಿಸಿಕೊಂಡು ತಮ್ಮ ವಿದ್ವತ್ತು, ಪಾಂಡಿತ್ಯ, ಪ್ರಾಜ್ಞತೆಯನ್ನುಮೆರೆದು ಜಗತ್ತಿನ ಶ್ರೇಷ್ಠ ಅಕಡೆಮಿಕ್‌ಆನ್‌ಲೈನ್ತಾಣವೊಂದನ್ನು ರೂಪಿಸಬೇಕು. ಈ ಜಾಲತಾಣದಲ್ಲಿ, ನಮ್ಮ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಗಳು, ವಿಶ್ವವಿದ್ಯಾಲಯದ ಪ್ರಸಾರಾಂಗಗಳು ಈವರೆಗೆ ಮಾಡಿರುವ ಕೆಲಸವೂ ಪ್ರತಿಫಲಿತವಾಗಲಿ ಎಂದು ಅವರು ತಿಳಿಸಿದರು.

ಪುಸ್ತಕ ಪ್ರಕಾಶಕರು ಬದುಕುವುದು ಹೇಗೆ?

ಪುಸ್ತಕ ಪುಸ್ತಕೋದ್ಯಮ ಸೊರಗಬಾರದು; ಅದು ಪರಿಪ್ಲುತವಾಗಬೇಕು. ಗ್ರಂಥಗಳುಸರಕುಗಳಲ್ಲ. ಅವುಗಳಲ್ಲಿ ಸಂಸ್ಕೃತಿಯ ಹೃದಯವಿದೆ. ಬಿಬಿಎಂಪಿ ಗ್ರಂಥಾಲಯಗಳಿಗೆ ಕೊಡಬೇಕಾದ ಹಣ ಸುಮಾರು 500 ಕೋಟಿ ಕರವನ್ನು ಬಾಕಿ ಉಳಿಸಿಕೊಂಡು ಆ ಹಣವನ್ನು ಬೇರೆ ಖಾತೆಗಳಿಗೆ ನೀಡಿ ಪುಸ್ತಕೋದ್ಯಮಕ್ಕೆ ಸಲ್ಲಬೇಕಾದ ಧನ ಸಂಗ್ರಹವನ್ನು ತಡೆ ಹಿಡಿದು ಬಹಳ ಅನ್ಯಾಯ ಮಾಡಿದೆ. ಹೀಗಾದರೆ, ಪುಸ್ತಕ ಪ್ರಕಾಶಕರು ಬದುಕುವುದು ಹೇಗೆ? ಎಂದು ಸಮ್ಮೇಳನಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುಸ್ತಕೋದ್ಯಮಕ್ಕೆ ಕಾಯಕಲ್ಪ ಮಾಡಬೇಕಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಇದುವರೆಗೆ ಸಗಟು ಖರೀದಿಗೆ ಸಂಬಂಧಿಸಿದಂತೆ ಏಕಗವಾಕ್ಷಿ ಮೂಲಕ ಒಬ್ಬೊಬ್ಬಪ್ರಕಾಶಕರಿಂದ 300 ಪ್ರತಿಗಳನ್ನು ಮಾತ್ರ ಕೊಳ್ಳುತ್ತಿದೆ. ಇಂದಿನ ದಿನಮಾನಗಳಲ್ಲಿ ಪುಸ್ತಕೋದ್ಯಮಬದುಕುಳಿಯಬೇಕಾದರೆ ನೆರೆಯ ರಾಜ್ಯಗಳಾದ ತಮಿಳು ನಾಡು, ಕೇರಳದಲ್ಲಿರುವಂತೆ ಕನಿಷ್ಠ 500 ಪ್ರತಿಗಳನ್ನಾದರೂ ಕೊಳ್ಳುವ ಮನಸ್ಸು ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆಯಾ ವರ್ಷ ಖರೀದಿಸಿದ ಪುಸ್ತಕದ ಹಣವನ್ನು ಪ್ರಕಾಶಕರಿಗೆ ತಲುಪಿಸುವ ತುರ್ತು ಕಾರ್ಯವೂಆಗಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಕೇಂದ್ರದ ಶಾಸ್ತ್ರೀಯಭಾಷಾ ಅಧ್ಯಯನ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಲಿ

ಮೊಟ್ಟಮೊದಲಿಗೆ ಈ ಶಾಸ್ತ್ರೀಯಭಾಷಾ ಅಧ್ಯಯನ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಬೇಕು. ಈ ಕೇಂದ್ರದ ನಿರ್ದೇಶಕರು ಸೇರಿದಂತೆ ಪರಿಣತ ಸಿಬ್ಬಂದಿ ವರ್ಗದವರನ್ನು, ಕಚೇರಿ ಸಿಬ್ಬಂದಿ ವರ್ಗದವರನ್ನು ರಾಜ್ಯ ಸರ್ಕಾರದ ಸಲಹೆಯ ಮೇರೆಗೆ ನೇಮಿಸಬೇಕು. ಈ ಬಗ್ಗೆ ರಾಜ್ಯ ತಮಿಳುನಾಡಿನ ಮಾದರಿಯಲ್ಲಿಯೇ ಸ್ವಾಯತ್ತ ಕೇಂದ್ರ ರಚಿಸುವಂತೆ ಕೇಂದ್ರಕ್ಕೆಒತ್ತಾಯಿಸಬೇಕು. ತಮಿಳು ಭಾಷೆಗೆ ನೀಡುತ್ತಿರುವಷ್ಟೇ ನೆರವನ್ನು ಕನ್ನಡಕ್ಕೂ ನೀಡಬೇಕು ಎಂದು ದೊಡ್ಡರಂಗೇಗೌಡರು ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಆಗ್ರಹಿಸಿದ್ದಾರೆ.

ಶಾಸ್ತ್ರೀಯ ಭಾಷೆಯ ಅಧ್ಯಯನ ಕೇಂದ್ರಕ್ಕೆ ಸಹಕಾರಿಯಾಗುವ ರೀತಿಯಲ್ಲಿ ಉಪಕೇಂದ್ರಗಳನ್ನು ಸ್ಥಾಪಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಇತಿಹಾಸ ಅಕಾಡೆಮಿ, ಬಿ.ಎಂ.ಶ್ರೀ. ಪ್ರತಿಷ್ಠಾನ, ಉದಯಭಾನು ಕಲಾಸಂಘ, ಬೆಂಗಳೂರು, ಕರ್ನಾಟಕ ಸಂಘ ಧಾರವಾಡ, ಮೊದಲಾದ ಕನ್ನಡಪರ ಸಂಘಗಳನ್ನುಶಾಸ್ತ್ರೀಯ ಭಾಷೆಯ ಅಧ್ಯಯನದ ಉಪ ಕೇಂದ್ರಗಳನ್ನಾಗಿಸ್ಥಾಪಿಸಬೇಕು. ಈ ಬಗ್ಗೆ ಯೋಜನೆ ಸಿದ್ಧಪಡಿಸಿ ಶಾಸ್ತ್ರೀಯ ಭಾಷೆ ಅಧ್ಯಯನ ಅಭಿವೃದ್ಧಿ ಅಡಿಯಲ್ಲಿ ಕೇಂದ್ರದಿಂದ ನೆರವನ್ನು ಪಡೆಯಬೇಕು. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕನ್ನಡ ಶಾಸ್ತ್ರೀಯಭಾಷೆಗೆ ಸಂಬಂಧಿಸಿದ ಪ್ರತ್ಯೇಕ ವಿಭಾಗ ಆಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ, ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಪ್ರತ್ಯೇಕ ವಿಭಾಗವನ್ನು ಮಾಡಿ ಅದಕ್ಕೆ ಒಬ್ಬರು ಹೆಚ್ಚುವರಿ ಆಯುಕ್ತರನ್ನು ನೇಮಿಸಿ, ಅವರಿಗೆ ಪೂರ್ಣಪ್ರಮಾಣದ ಸಿಬ್ಬಂದಿಯನ್ನು ನೀಡಬೇಕು. ಈ ವಿಭಾಗವು ಕನ್ನಡ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ಪುಸ್ತಕ ಪ್ರಾಧಿಕಾರ ಮೊದಲಾದ ಸರ್ಕಾರದ ಸಂಸ್ಥೆಗಳೊಡನೆ, ವಿಶ್ವವಿದ್ಯಾನಿಲಯಗಳೊಡನೆ ಸಮನ್ವಯ ಸಾಧಿಸಿ, ಶಾಸ್ತ್ರೀಯ ಭಾಷೆ ಅಭಿವೃದ್ಧಿ ಕಾರ್ಯಗಳು ಓವರ್‌ಲ್ಯಾಪ್ ಆಗದಂತೆ ನೋಡಿಕೊಂಡು ಎಲ್ಲ ಸಂಸ್ಥೆಗಳಿಗೂ ಪ್ರತ್ಯೇಕ ಯೋಜನೆ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ನೀಡಬೇಕು.ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಕನ್ನಡ ವಿಭಾಗದಲ್ಲಿ ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಒಂದು ಪ್ರತ್ಯೇಕ ವಿಭಾಗ ಆಗಬೇಕು ಅವರು ಒತ್ತಾಯಿಸಿದರು.

ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಕನ್ನಡ ವಿಭಾಗದಲ್ಲಿ ಶಾಸ್ತ್ರೀಯಭಾಷಾ ಅಧ್ಯಯನ ವಿಭಾಗವನ್ನು ತೆರೆದು ಅದಕ್ಕೆ ನಿರ್ದೇಶಕರು ಸೇರಿದಂತೆ ಪರಿಣತ ಸಿಬ್ಬಂದಿ ವರ್ಗದವರನ್ನು ನೇಮಿಸಲು ಸರ್ಕಾರ ಪೂರ್ಣ ನೆರವು ನೀಡಬೇಕು. ಅದೇ ರೀತಿ ಹೊರನಾಡಿನವಿಶ್ವವಿದ್ಯಾನಿಲಯಗಳಲ್ಲಿಎಲ್ಲೆಲ್ಲಿ ಕನ್ನಡ ವಿಭಾಗಗಳಿವೆ, ಅದನ್ನು ಬಲಪಡಿಸಿ, ಅಲ್ಲಿಯೂ ಕೂಡಾ ಕನ್ನಡ ಶಾಸ್ತ್ರೀಯಭಾಷಾ ಅಧ್ಯಯನ ವಿಭಾಗವನ್ನು ಮಾಡಬೇಕು. ಈ ಎರಡೂ ವಿಭಾಗಗಳಿಗೆ ಕರ್ನಾಟಕ ಸರ್ಕಾರ ಪೂರ್ಣ ನೆರವನ್ನು ನೀಡಬೇಕು. ಈ ಬಗ್ಗೆ ಅಂದಾಜು ಮಾಡಿ ಕೇಂದ್ರಕ್ಕೆ ಕಳುಹಿಸಿ ಶಾಸ್ತ್ರೀಯ ಭಾಷೆ ಅಡಿಯಲ್ಲಿ ಹಣಕಾಸಿನ ನೆರವನ್ನು ಪಡೆಯಬೇಕು. ವಿಶ್ವವಿದ್ಯಾನಿಲಯಗಳಿಂದ ಶಾಸನ ಸಂಪುಟಗಳ ಪ್ರಕಟಣೆ, ಹಳಗನ್ನಡ ಕಾವ್ಯಗಳ ಪ್ರಕಟಣೆ, ಹಸ್ತಪ್ರತಿಗಳಲ್ಲಿ ಉಳಿದಿರುವ ಅಮೂಲ್ಯವಾದ ಮತ್ತು ಪ್ರಮುಖವಾದ ಕಾವ್ಯಗಳನ್ನು ಪ್ರಕಟಿಸುವ ಯೋಜನೆಗಳನ್ನು ರೂಪಿಸಬೇಕು. ಕನ್ನಡದ ಪ್ರಮುಖ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಕೃತಿಗಳನ್ನು ಆಯ್ಕೆ ಮಾಡಿ, ಅವುಗಳನ್ನು ಡಿಜಿಟಲ್ ರೂಪದಲ್ಲಿ ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದರು.

ಈಗ ರಾಜ್ಯ ಸರ್ಕಾರ ಕನ್ನಡ ಭಾಷೆಯ ಅಭಿವೃದ್ಧಿ ವಿಚಾರದಲ್ಲಿ ತರುತ್ತಿರುವ ಹೊಸ ವಿಧೇಯಕದಲ್ಲಿ ಈ ಎಲ್ಲ ಅಂಶಗಳನ್ನೂ ಸೇರ್ಪಡೆ ಮಾಡಬೇಕು. ಆಗ ಈ ಎಲ್ಲ ಕಾರ್ಯಕ್ರಮಗಳಿಗೆ ಶಾಸನಾತ್ಮಕ ಮಾನ್ಯತೆ ಇರುತ್ತದೆ. ಈ ವಿಧೇಯಕವನ್ನು ವಿಧಾನಸಭಾ ಅಧ್ಯಕ್ಷರ ಮೂಲಕ ಜಂಟಿ ಸದನದ ಸಮಿತಿಗೆ ಒಪ್ಪಿಸಿ, ಮೂರು ತಿಂಗಳಲ್ಲಿ ವಿಧೇಯಕ ಸಿದ್ಧಪಡಿಸಿ, ಬರುವ ಜನವರಿ ತಿಂಗಳ ಅಧಿವೇಶನದಲ್ಲಿ ವಿಧೇಯಕವನ್ನು ಅಂಗೀಕರಿಸಿ, ರಾಷ್ಟ್ರಪತಿಗಳ ಅಂಗೀಕಾರ ಪಡೆದು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.

ಬೆಳಗಾವಿ ಬಿಟ್ಟು ಕೊಡೆವು

ನಾವು ಈಗ ಕನ್ನಡ - ಮಹಾರಾಷ್ಟ್ರಗಳ ಗಡಿ ಸಮಸ್ಯೆಯ ಬೆಳಗಾವಿ ಎಲ್ಲಿಗೆ ಸೇರಬೇಕು ಎಂಬ ವಿಷಯಗಳು ಬಂದಾಗ ಕರ್ನಾಟಕದ ಜನ ಒಟ್ಟಾಗಿ ಉತ್ತರ ಕೊಟ್ಟಿದ್ದಾರೆ. ಕನ್ನಡದ ಒಂದು ಅಂಗುಲ ನೆಲವನ್ನೂ ಬೇರೆಯವರಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಖ್ಯಾತೆ ತೆಗೆದು ಬಂದವರ ಖಾತೆಗಳೇ ಇಲ್ಲವಾಗಿಸಬಲ್ಲರು ಕನ್ನಡಿಗರು. ನಾಡಿಗೆ ಅವಮಾನವಾದರೆ ನಮಗೆ ಅವಮಾನ. ನುಡಿಗೆ ಅವಮಾನವಾದರೆ ಕೆರಳುತ್ತದೆ. ನಮ್ಮಭಿಮಾನ ನಾಡು ನುಡಿಗೆ ಅನ್ಯಾಯವಾಗಲು ನಾವು ಕನ್ನಡಿಗರು ಬಿಡುವುದಿಲ್ಲ. ನಮ್ಮಲ್ಲಿ ಅದಟು ಇದೆ; ಪರಾಕ್ರಮವೂ ಇದೆ. ಎದುರಿಸುವ ಕೆಚ್ಚೂನೆಚ್ಚೂ ಆತ್ಮವಿಶ್ವಾಸ ಇದ್ದೇ ಇದೆ. ಬೆಳಗಾವಿಯನ್ನು ನಾವು ಕನ್ನಡಿಗರು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಇದು ನಮ್ಮ ಇಚ್ಛೆ ಇದು ನಮ್ಮ ಹೃದಯಂತರಾಳದ ವಾಂಛೆ! ನಮ್ಮದಲ್ಲದನೆಲವನ್ನು ನಾವು ಅಪೇಕ್ಷಿಸುವುದಿಲ್ಲ. ನಮ್ಮ ರಾಜ್ಯದ ಸ್ವತ್ತನ್ನು ನಮ್ಮ ಸರ್ಕಾರ ಕೂಡ ಬಿಟ್ಟು ಕೊಡುವುದಿಲ್ಲ. ಇದು ಸತ್ಯದ ಮಾತು! ಇದು ಪ್ರತಿ ನಿತ್ಯದ ಮಾತು! ಎಂದು ಸಮ್ಮೇನಾಧ್ಯಕ್ಷರು ಘೋಷಿಸಿದರು. 

Similar News