ನಾಲಿಗೆ ಹರಿಯ ಬಿಟ್ಟರೆ ಅದೇ ಭಾಷೆಯಲ್ಲೆ ಉತ್ತರ ಕೊಡುವೆ: ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಸಚಿವ ನಿರಾಣಿ ಆಕ್ರೋಶ

"ಸರಕಾರಕ್ಕೆ ಮುಜುಗರವಾಗಬಾರದೆಂದು ಸುಮ್ಮನಿದ್ದೇನೆ"

Update: 2023-01-07 14:46 GMT

ಬೆಂಗಳೂರು: "ನಿನಗೆ ತಾಕತ್ತು ಇದ್ದರೆ 2023ರ ಚುನಾವಣೆಯಲ್ಲಿ ನಾನೂ ಸ್ಪರ್ಧಿಸುತ್ತೇನೆ. ನೀನು ಸ್ಪರ್ಧೆ ಮಾಡು ಜನ ಯಾರಿಗೆ ಆಶೀರ್ವಾದ ಮಾಡುತ್ತಾರೆ ನೋಡೋಣ. ಈ ಬಾರಿ ವಿಜಯಪುರದಲ್ಲಿ ನಿನಗೆ ತಕ್ಕ ಪಾಠ ಕಲಿಸಲು ಸಜ್ಜಾಗಿದ್ದಾರೆ. ನನ್ನ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ಆಲೋಚಿಸುವುದು ಒಳಿತು. ನನ್ನ ವಿರುದ್ಧ ನಾಲಿಗೆ ಹರಿಯಬಿಟ್ಟರೆ ಅದೇ ದಾಟಿಯಲ್ಲೇ ನಾನು ಉತ್ತರ ಕೊಡಬೇಕಾಗುತ್ತದೆ" ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ವಿಜಯಪುರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಗಳ ನಾಡಿನಲ್ಲಿ ನಾವಿದ್ದೇವೆಂಬ ಕಾರಣಕ್ಕೆ ಇದುವರೆಗೂ ಎಷ್ಟೇ ಟೀಕೆಗಳನ್ನು ಮಾಡಿದರರೂ ಸಹನೆಯಿಂದ ಇದ್ದೆ. ನಮ್ಮ ಸಹನೆಯನ್ನೆ ದೌರ್ಬಲ್ಯ ಎಂದುಕೊಂಡಿದ್ದರೆ ಇನ್ನು ಮುಂದೆ ಸಹಿಸುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ನಗರ ಬಿಜೆಪಿ ಟಿಕೆಟ್ ಯಾರಿಗೆ ಸಿಗುತ್ತದೆ ಎಂದು ನೋಡೋಣ? ಎಂದು ಸವಾಲು ಹಾಕಿದರು.

"ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಹರಿಹರ ಪೀಠ ಮತ್ತು ನನ್ನ ಬಗ್ಗೆ ಹಗುರವಾಗಿ ಮಾತನಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಬೊಮ್ಮಾಯಿ ತಾಯಿ ಆಣೆ ಮಾಡಿದ್ದಾರೆ, ಮೋಸ ಮಾಡಿದ್ದಾರೆಂದು ಲೂಸ್ ಟಾಕ್ ಮಾಡುವುದನ್ನು ಬಿಡು. ಇನ್ನು ಮುಂದೆ ಮಾತನಾಡುವಾಗ ಎಚ್ಚರ ಇರಲಿ" ಎಂದು ಮುರುಗೇಶ್ ನಿರಾಣಿ ತಾಕೀತು ಮಾಡಿದರು.

ನಾನೂ ಕೃಷ್ಣಾ ನದಿ ನೀರು ಕುಡಿದು ಬೆಳೆದಿದ್ದೇನೆ. ಇಲ್ಲೇ ನನ್ನ ಎಲ್ಲ ಸಂಬಂಧಗಳಿವೆ. ನಿನಗೆ ಗೊತ್ತಿರುವ ಭಾಷೆ, ಬೈಗುಳಕ್ಕಿಂತ ಹೆಚ್ಚು ನನಗೂ ಗೊತ್ತಿವೆ, ಹಾಗಂತ ನಾನು ಅವುಗಳನ್ನು ಬಳಸುವುದಿಲ್ಲ. ನೀನು ರಾಜಕಾರಣಕ್ಕೆ ಬರುವ ಮೊದಲು ನೀವು ಹೇಗಿದ್ದೀರಿ? ಯಾವ ಫುಟ್‍ಪಾತ್ ಮೇಲೆ ನಿಲ್ಲುತ್ತಿದ್ದೀರಿ? ಎಲ್ಲಿ ಕೂರುತ್ತಿದ್ದಿರೀ, ಎಲ್ಲವೂ ಗೊತ್ತಿದೆ’ ಎಂದು ನಿರಾಣಿ ತಿರುಗೇಟು ನೀಡಿದರು.

"ಲಿಂಗಾಯತ ಪಂಚಮಸಾಲಿ ಮತ್ತು ಬಣಜಿಗ ಸಮುದಾಯದವರು ಬಹಳ ಹಿಂದಿನಿಂದಲೂ ಅಣ್ಣ-ತಮ್ಮಂದಿರಂತೆ ಇದ್ದಾರೆ. ಯಾವುದೇ ಸಮಾಜದ ಜೊತೆ ಬೇಧಬಾವ ಇಲ್ಲದೆ ನಡೆದಕೊಂಡು ಬಂದಿದ್ದೇವೆ. ಸಭೆ, ಸಮಾರಂಭದಲ್ಲಿ ಅನ್ಯ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿ, ಚಪ್ಪಾಳೆ ಹೊಡೆಸಿಕೊಳ್ಳುವುದು ಬಿಡಿ" ಎಂದು ನಿರಾಣಿ ಗುಡುಗಿದರು.

"ನೀವು ಬೇರೆ ಪಕ್ಷದಲ್ಲಿ ಇದ್ದಾಗ ಟೊಪ್ಪಿ ಹಾಕಿಕೊಂಡು ಹಿಂದೂಗಳನ್ನು ಬೈಯ್ದಿದ್ದೀರಿ, ಈಗ ಟೊಪ್ಪಿ ತೆಗೆದು ಅವರನ್ನೇ ಬೈಯುತ್ತಿದ್ದೀರಿ, ನಿಮಗೆ ಎರಡು ನಾಲಿಗೆ ಇವೆಯೇ?. ನಿರಾಣಿಗೆ ಪಕ್ಷ ಮತ್ತು ಸಮಾಜ ಎರಡನೆ ತಾಯಿ ಇದ್ದ ಹಾಗೆ. ಎಂದೂ ಪಕ್ಷ ಬಿಟ್ಟು ಹೋಗಿಲ್ಲ, ಸಮಾಜದ ಬಗ್ಗೆ ಒಡಕಿನ ಮಾತು ಆಡಿಲ್ಲ" ಎಂದು ನಿರಾಣಿ ಹೇಳಿದರು.

ನಾನು ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಇನ್ನೊಬ್ಬರನ್ನು ನಿರ್ದೇಶಕನನ್ನಾಗಿ ಮಾಡಿ ಟೋಪಿ ಹಾಕಿ ಬಂದಿಲ್ಲ. ಹಾಲಿನ ಡೇರಿ ಮಾಡಿ ಶೇರ್ ತೆಗೆದುಕೊಂಡು ಓಡಿ ಹೋಗಿಲ್ಲ, ವಸತಿ ಶಾಲೆ ಮಾಡಿ ಯಾರ ಕೊರಳಿಗೆ ಕಟ್ಟಿಲ್ಲ. ನಿರಾಣಿ ಗ್ರೂಪ್‍ನಲ್ಲಿ ಒಂದೇ ಒಂದು ಪೈಸೆ ಯಾರ ಶೇರು ಇಲ್ಲ. ಯಾರ ಹೊಲ, ಮನೆ ಮೇಲೆ ಒಂದು ರೂ.ಸಾಲ ತೆಗೆದಿಲ್ಲ. ಎಲ್ಲವನ್ನು ಮರುಪಾವತಿ ಮಾಡುತ್ತಿದ್ದೇನೆ. ಯಾರಿಗೂ ಕೈ ಎತ್ತಿ ಓಡಿ ಹೋಗಿಲ್ಲ. ಹೀಗಾಗಿ ನಾನು ಬೇಡಿದಷ್ಟು ಸಾಲ ಬ್ಯಾಂಕುಗಳಿಂದ ಲಭಿಸುತ್ತಿದೆ. 21 ಕಾರ್ಖಾನೆ ಕಟ್ಟಿದ್ದೇನೆ, 72 ಸಾವಿರ ಜನಕ್ಕೆ ಉದ್ಯೋಗ ನೀಡಿದ್ದೇನೆ ಎಂದು ನಿರಾಣಿ ವಿವರಿಸಿದರು.

‘ಬಿಜೆಪಿ ಸರಕಾರ, ಮುಖ್ಯಮಂತ್ರಿ ಹಾಗೂ ಸ್ವಾಮೀಜಿಗಳ ಬಗ್ಗೆಯೂ ಹಗುರವಾಗಿ ಮಾತನಾಡುತ್ತಾರೆ. ನೀವು ಯಾವ ಪಕ್ಷಕ್ಕೆ ನಿಯತ್ತಾಗಿದ್ದೀರಿ. ನನಗೆ ಬಿಜೆಪಿ ತಾಯಿ ಸಮಾನ. ಪಕ್ಷದಲ್ಲಿದ್ದುಕೊಂಡು ನಮ್ಮನ್ನೆ ಟೀಕೆ ಮಾಡುತ್ತೀರಿ. ನಿಮ್ಮ ಭಾಷೆಯಲ್ಲೇ ನಾನು ಮಾತನಾಡುತ್ತೇನೆ. ಪಕ್ಷದ ಚೌಕಟ್ಟಿನಲ್ಲಿರುವುದರಿಂದ ಸರಕಾರಕ್ಕೆ ಮುಜುಗರವಾಗಬಾರದೆಂದು ಸುಮ್ಮನಿದ್ದೇನೆ’ ಎಂದು ಅವರು ಎಚ್ಚರಿಸಿದರು.

ಮೀಸಲಾತಿ ಸಿಗಲಿದೆ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಲಿದೆ. ಕಾನೂನಾತ್ಮಕವಾಗಿ ಸರಕಾರ ನಿರ್ಧಾರ ಕೈಗೊಳ್ಳಬೇಕಾಗಿರುವುದರಿಂದ ವಿಳಂಬವಾಗಿದೆ. ಸಮುದಾಯದ ಜೊತೆಗೆ ಒಕ್ಕಲಿಗರು ಸೇರಿದಂತೆ ಇತರರಿಗೂ ಮೀಸಲಾತಿ ಸೌಲಭ್ಯ ಸಿಗಬೇಕು. ಇನ್ನು 3 ತಿಂಗಳೊಳಗೆ ಎಲ್ಲ ಸಮುದಾಯಗಳಿಗೂ ಮೀಸಲು ಕಲ್ಪಿಸಲು ಸರಕಾರ ಬದ್ಧ ಎಂದು ಅವರು ನುಡಿದರು.

Similar News