ಎಕ್ಸ್ ಪ್ರೆಸ್ ವೇಗೆ ನಾಲ್ವಡಿ ಹೆಸರಿಡಲು ಆಕ್ಷೇಪಿಸಿದ ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಮುಖಂಡ ರಘು ಕೌಟಿಲ್ಯ ಟೀಕೆ

Update: 2023-01-07 17:56 GMT

ಮೈಸೂರು:  ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಗೆ  ಕೃಷ್ಣರಾಜ ಒಡೆಯರ್  ಅವರ ಹೆಸರಿನ ಬದಲು ಕಾವೇರಿ ನದಿಯ ಹೆಸರನ್ನಿಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ ಸಂಸದ ಪ್ರತಾಪ ಸಿಂಹಗೆ ಸ್ವಪಕ್ಷದ ಬಿಜೆಪಿ ಮುಖಂಡ ಹಾಗೂ ಮೈಲಾಕ್ ಅಧ್ಯಕ್ಷ ರಘು ಕೌಟಿಲ್ಯ ಸರಣಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.

‘ನಾಲ್ವಡಿ ಹೆಸರಿಗೆ ಅಪಸ್ವರದ ಅಪಚಾರ’ ಎಂಬ ಹ್ಯಾಶ್ ಟ್ಯಾಗ್ ಮೂಲಕ ಟ್ವೀಟ್ ಮಾಡಿರುವ ರಘು ಕೌಟಿಲ್ಯ, ಈ ಯುಗದಲ್ಲಿ ರಾಮರಾಜ್ಯದ ಕನಸನ್ನು ಸಾಕಾರಗೊಳಿಸಿದ ಭಾರತದ ಏಕೈಕ ರಾಜ ರಾಜಋಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಅವರ ಹೆಸರಿಗೆ ಸಾಟಿ ಎಂಬುದು ಯಾವುದೂ ಇಲ್ಲ. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಗೆ ನಾಲ್ವಡಿಯವರ ಹೆಸರಿಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ  ನಾಡಿನ ಹಿರಿಯ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣರವರೇ ಸ್ವಯಂ ಪ್ರೇರಣೆಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಪತ್ರಬರೆದು ಒತ್ತಾಯಿಸಿದ್ದಾರೆ. ಹಿರಿಯ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ರವರು ಈ ಕುರಿತು ಬೆಂಬಲಿಸಿ ಮಾತನಾಡಿದ್ದಾರೆ. ಇದಕ್ಕೆ ಧ್ವನಿಗೂಡಿಸುವುದು ಸಂಸದ ಪ್ರತಾಪ ಸಿಂಹ ಅವರ ಕರ್ತವ್ಯವಾಗಬೇಕಿತ್ತು. ಅದು ಬಿಟ್ಟು ಕಾವೇರಿಗೆ ‘ಕನ್ನಂಬಾಡಿ ಅಣೆಕಟ್ಟು ಕೀರಿಟ’ತೊಡಿಸಿದ ಕೃಷ್ಣರಾಜ ಒಡೆಯರ್ ರವರ ಹೆಸರಿಗೆ ತಗಾದೆ ತೆಗೆಯುತ್ತಿರುವುದರ ಹಿನ್ನಲೆ ‘ಕಾವೇರಿ ಹೆಸರಿನ ಓಲೈಕೆ ರಾಜಕಾರಣಕ್ಕಾಗಿ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದರು.

ದಶಪಥ ಹೆದ್ದಾರಿಗೆ ಹೆಸರಿಡುವ ವಿಷಯದಲ್ಲಿ ಪ್ರತಿಷ್ಠೆ ಹಾಗೂ ರಾಜಕಾರಣ ತಿರುಗು ಬಾಣವಾದೀತು! ‘‘ಮೈಸೂರು ರಾಜಮನೆತನದ ಕೊಡುಗೆಗಳ ಉಪಕಾರ ಸ್ಮರಣೆ ನಮ್ಮ ನಿತ್ಯ ಮಂತ್ರ ,ಅದರ ಪ್ರತೀಕವಾಗಿ ಯದುವಂಶದ ಹೆಸರು ಎಲ್ಲೆಲ್ಲೂ ರಾರಾಜಿಸುತ್ತಿರಬೇಕು ಎಂದು ರಘುಕೌಟಿಲ್ಯ ತಿಳಿಸಿದ್ದಾರೆ.

Similar News