ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಾರಾಟಗಾರರಿಗೆ ನಷ್ಟ: ತಲೆನೋವಾದ ‘ಡಿಜಿಟಲ್ ಬ್ಯಾಂಕಿಂಗ್’..!

Update: 2023-01-07 18:15 GMT

ಹಾವೇರಿ, ಜ. 7: ಒಂದೆಡೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳ ಖರೀದಿಯ ಭರಾಟೆ ಜೋರಾಗಿದ್ದರೆ, ಮತ್ತೊಂದೆಡೆ ನಗದು ವಾಹಿವಾಟಿನ ಸಮಸ್ಯೆ ತಲೆದೂರಿದೆ. ಇದಕ್ಕೆ ಮುಖ್ಯ ಕಾರಣ ‘ಡಿಜಿಟಲ್ ಬ್ಯಾಂಕಿಂಗ್’ ವ್ಯವಸ್ಥೆಯೇ ಆಗಿರುವುದು ವಿಪರ್ಯಾಸ.

ಕ್ಷಣ ಕ್ಷಣಕ್ಕೂ ಮೊಬೈಲ್ ನೆಟ್‍ವರ್ಕ್ ದೊರೆಯದ ಕಾರಣ, 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಾರಾಟಗಾರದಲ್ಲಿ ತೊಡಗಿರುವ ನೂರಾರು ಮಳಿಗೆ ಮಾಲಕರು, ಎರಡನೆ ದಿನ ಶನಿವಾರವೂ ನಷ್ಟ ಅನುಭವಿಸಿದರು. 

ಏಲಕ್ಕಿ ನಗರ ಹಾವೇರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಮುಖ ಆಕರ್ಷಕವಾಗಿರುವುದೇ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ. ಅದರಲ್ಲೂ 250ಕ್ಕೂ ಅಧಿಕ ಪುಸ್ತಕ ಮಳಿಗೆಗಳು ಇಲ್ಲಿವೆ. ಆದರೆ, ಆನ್‍ಲೈನ್ ಬ್ಯಾಂಕ್ ವ್ಯವಸ್ಥೆ, ಆ್ಯಪ್ ಆಧಾರಿತ ನಗದು ವಾಹಿವಾಟು ನಡೆಸಲು ಮೊಬೈಲ್ ನೆಟ್‍ವರ್ಕ್ ಇಲ್ಲದ ಕಾರಣ, ಹಲವು ಸಾಹಿತ್ಯಾಸಕ್ತರು ಪುಸ್ತಕಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಮೊಬೈಲ್ ಹಿಡಿದು ಪರದಾಟ: ಪುಸ್ತಕ ಮಳಿಗೆಯವರು ಹಣ ಪಾವತಿಗೆ ಗೂಗಲ್ ಪೇ, ಭೂಮ್, ಫೋನ್ ಪೇ, ಪೇಟಿಎಂ ಕ್ಯುಆರ್ ಕೋಡ್‍ಗಳನ್ನು ತಂದಿದ್ದಾರೆ. ಬೆಳಗ್ಗೆ ತಮ್ಮ ಮಳಿಗೆಯಲ್ಲಿ ಈ ಕೋಡ್‍ಗಳನ್ನು ಪ್ರದರ್ಶಿಸಿದ್ದರು. ಆದರೆ ಶೇ.99ರಷ್ಟು ಆನ್‍ಲೈನ್ ಪೇಮೆಂಟ್ ವಿಫಲವಾಗುತ್ತಿದೆ. ಇಡೀ ದಿನ ಬೆರಳೆಣಿಕೆಯ ಮಂದಿ ಮಾತ್ರ ಆನ್‍ಲೈನ್ ಪಾವತಿ ಮಾಡಲು ಸಫಲರಾದರು. ಈ ವೇಳೆ ಮೊಬೈಲ್ ಹಿಡಿದು ಅನೇಕರು ಹೊರಗಡೆ ಪರದಾಟ ನಡೆಸಿದರು. 

ಹಾವೇರಿ ನಗರದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಇಲ್ಲಿ ಮೊಬೈಲ್ ನೆಟ್‍ವರ್ಕ್ ಇದೆಯಾದರೂ ಸಾವಿರಾರು ಜನರು ಒಂದೇ ಕಡೆ ಕೂಡಿದ್ದರಿಂದ ದಿನಪೂರ್ತಿ ಮೊಬೈಲ್ ನೆಟ್‍ವರ್ಕ್ ಜಾಮ್ ಆಗಿದೆ. ಸಾಮಾನ್ಯ ಕರೆಗೂ ಪರದಾಡುವ ಸ್ಥಿತಿ ಇದೆ ಎಂದು ಕಲ್ಯಾಣ್ ಪುಸ್ತಕ ಮಳಿಗೆಯ ವಿನೋದ್ ತಮ್ಮ ಅಳಲು ತೋಡಿಕೊಂಡರು.

ಈ ಕುರಿತು ಪ್ರತಿಕ್ರಿಯಿಸಿದ ಸಿಂಧನೂರ ಸಾಹಿತ್ಯ ಮಳಿಗೆಯ ಸದಸ್ಯ ಅಲಿ, ಪುಸ್ತಕ ಖರೀದಿಸಲು ಆಗಮಿಸುವ ಅನೇಕರು ಆನ್‍ಲೈನ್ ಪೇಮೆಂಟ್ ಇದೆಯೇ ಎಂದು ಮೊದಲು ಕೇಳುತ್ತಾರೆ. ಅದರಲ್ಲೂ ಈಗಿನ ಯುವಜನರು ಯಾರೂ ಹೆಚ್ಚು ಹಣವನ್ನು ಜತೆಯಲ್ಲಿ ಒಯ್ಯುವುದಿಲ್ಲ. ಹೀಗಾಗಿ, ಪುಸ್ತಕ ಖರೀದಿಗೆ ಮುಂದಾಗುತ್ತಿಲ್ಲ ಬೇಸರ ವ್ಯಕ್ತಪಡಿಸಿದರು.

ಬರಹಗಾರ ರಾಜೀವ್ ಜೋಷಿ ಈ ಕುರಿತು ಪ್ರತಿಕ್ರಿಯಿಸಿ, ಹೊಸ ಪುಸ್ತಕಗಳು ಕಡಿಮೆ ದರಕ್ಕೆ ದೊರೆತ ಹಿನ್ನೆಲೆ 20 ಪುಸ್ತಕಗಳನ್ನು ಖರೀದಿ ಮಾಡಿದೆ. ಆದರೆ, ಆನ್‍ಲೈನ್ ಪೇಮೆಂಟ್ ಸಾಧ್ಯವಾಗಲೇ ಇಲ್ಲ. ಕೊನೆಗೆ ನನ್ನಲ್ಲಿದ್ದ ಅಷ್ಟೂ ಹಣ, ಸ್ನೇಹಿತನಲ್ಲಿದ್ದ ಹಣವನ್ನು ಸೇರಿಸಿದರೂ 1,500ರೂ. ದಾಟಲಿಲ್ಲ. ಕೊನೆಗೆ, ನಾಳೆ ಬರುತ್ತೇನೆ ಎಂದು ಹಾಗೆಯೇ ಇಟ್ಟು ಬಂದಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೀಗೇ, ಅನೇಕ ಪುಸ್ತಕ ಮಳಿಗೆ ಮಾಲಕರು, ಖರೀದಿದಾರರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಷ್ಟೂ ಮಳಿಗೆಗಳನ್ನು ಸೇರಿಸಿ ದಿನಪೂರ್ತಿ ಲಕ್ಷಾಂತರ ರೂ. ನಷ್ಟವಾಗಿದೆ ಎಂದೇ ಹೇಳಿದರು. ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಸಮ್ಮೇಳನ ಮಾಡುವಾಗ, ತಂತ್ರಜ್ಞಾನಕ್ಕೆ ತಕ್ಕಂತೆ ಸಂಚಾರಿ ನೆಟ್‍ವರ್ಕ್‍ಗಳು ಅಥವಾ ಇನ್ನಾವುದೇ ವ್ಯವಸ್ಥೆ ಮೂಲಕ ಆನ್‍ಲೈನ್ ಪಾವತಿಗೆ ವ್ಯವಸ್ಥೆ ಕಲ್ಪಿಸಬೇಕಾಗಿತ್ತು ಎಂದು ನುಡಿದರು.

Similar News