'ಸಿದ್ದು ನಿಜ ಕನಸುಗಳು' ಪುಸ್ತಕ ಬಿಡುಗಡೆಗೆ ಕೋರ್ಟ್ ನಿಂದ ತಡೆಯಾಜ್ಞೆ

ಸಚಿವ ಅಶ್ವತ್ಥನಾರಾಯಣಗೆ ನೋಟಿಸ್

Update: 2023-01-09 14:29 GMT

ಬೆಂಗಳೂರು: ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ರಚಿಸಲಾದ 'ಸಿದ್ದು ನಿಜ ಕನಸುಗಳುʼ ಪುಸ್ತಕ ಬಿಡುಗಡೆಗೆ ಸಿಟಿ ಸಿವಿಲ್‌ ಕೋರ್ಟ್‌ ತಡೆ ನೀಡಿದೆ. 

ಇಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಪುರಭವನದಲ್ಲಿ 'ಸಿದ್ದು ನಿಜ ಕನಸುಗಳು' ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಪುಸ್ತಕ ಬಿಡುಗಡೆಯನ್ನು ಡಾ. ಸಿಎನ್‌ ಅಶ್ವತ್ಥ ನಾರಾಯಣ ನೆರವೇರಿಸಲಿದ್ದರು. 

ಈ ಬಗ್ಗೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಕೋರ್ಟ್‌ ಮೊರೆ ಹೋಗಿ ತಡೆ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನಗರದ ಸಿಟಿ ಸಿವಿಲ್‌ ಕೋರ್ಟ್‌ ಪುಸ್ತಕ ಬಿಡುಗಡೆಗೆ ತಡೆ ನೀಡಿದೆ.  ಪುಸ್ತಕ ಬಿಡುಗಡೆ, ಮಾರಾಟ ಅಲ್ಲದೇ ಮಾಧ್ಯಮ ಪ್ರಸಾರಕ್ಕೆ ಕೋರ್ಟ್‌  ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆಯನ್ನು ಫೆ.9ಕ್ಕೆ ಮುಂದೂಡಿದೆ.

ಸೋಮವಾರ ಮಧ್ಯಾಹ್ನ 3 ಗಂಟೆಗೆ ಪುರಭವನದಲ್ಲಿ ಬಿಡುಗಡೆಯಾಗುತ್ತಿರುವ ಸಿದ್ದು ನಿಜಕನಸುಗಳು ಸಂಪುಟ-1ರ ಲೋಕಾರ್ಪಣೆ ಹಾಗೂ ಅಧ್ಯಕ್ಷತೆಯನ್ನು ಅಶ್ವಥ್ ನಾರಾಯಣ ಮಾಡಲಿದ್ದಾರೆ ಎಂದು ಪ್ರಕಟಿಸಲಾಗಿತ್ತು. ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಹಾಜರಿರಬೇಕಾಗಿತ್ತು. ಅದರೊಂದಿಗೆ ಬರಹಗಾರ ರೋಹಿತ್ ಚಕ್ರತೀರ್ಥ, ಪ್ರತ್ರಕರ್ತ ಸಂತೋಷ್ ತಮ್ಮಯ್ಯ, ವಿಕ್ರಮ ಹಾಗೂ ಸಂವಾದದ ಸಂಪಾದಕ ವೃಷಾಂಕ್ ಭಟ್ ಹಾಗೂ ಬರಹಗಾರ ರಾಕೇಶ್ ಶೆಟ್ಟಿ ಸಮಾರಂಭದಲ್ಲಿ ಇರುವುದು ಖಚಿತವಾಗಿತ್ತು.

ಆಹ್ವಾನ ಪತ್ರಿಕೆಯ ಅನುಸಾರ ಹೇಳುವುದಾದರೆ, ವಿಕೆಪಿ ಎನ್ನುವ ಅನಾಮಧೇಯ ವ್ಯಕ್ತಿ ಈ ವಿವಾದಾತ್ಮಕ ಪುಸ್ತಕವನ್ನು ಬರೆದಿದ್ದಾರೆ. ಇದು ಮೊದಲ ಸಂಪುಟವಾಗಿದ್ದು, ಇನ್ನೂ ಹಲವು ಸಂಪುಟಗಳಲ್ಲಿ ಸಿದ್ದು ಅವರ ನಿಜಕನಸುಗಳನ್ನು ಬಿತ್ತರ ಮಾಡಲಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿತ್ತು.

Similar News