ಕೋಲಾರ ಕ್ಷೇತ್ರದಿಂದ ಆಯ್ಕೆಯಾದರೆ ಪ್ರತೀ ವಾರ ಕ್ಷೇತ್ರಕ್ಕೆ ಬರುತ್ತೇನೆ: ಸಿದ್ದರಾಮಯ್ಯ

Update: 2023-01-09 14:49 GMT

ಬೆಂಗಳೂರು, ಜ.9: 'ಕೋಲಾರ ಕ್ಷೇತ್ರದಿಂದ ಆಯ್ಕೆಯಾದರೆ ಪ್ರತೀ ವಾರ ಕ್ಷೇತ್ರಕ್ಕೆ ಬರುತ್ತೇನೆ. ಜನ ಮಧ್ಯವರ್ತಿಗಳಿಲ್ಲದೆ ನನ್ನನ್ನು ಭೇಟಿ ಮಾಡಬಹುದು. ಸಾಮಾನ್ಯ ವ್ಯಕ್ತಿಯೂ ಬಂದು ನೇರವಾಗಿ ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಇದು ನಾನು ನಡೆಸಿಕೊಂಡು ಬಂದಿರುವ ಸಂಪ್ರದಾಯ' ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, ''ಕೋಲಾರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸುದರ್ಶನ್ ಅವರು ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಇಲ್ಲಿಂದಲೇ ಚುನಾವಣೆಗೆ ನಿಂತು ಶಾಸಕನಾದರೆ ಕ್ಷೇತ್ರವೂ ಸೇರಿದಂತೆ ಇಡೀ ಕೋಲಾರದ ಅಭಿವೃದ್ಧಿಗೆ ವಿಶೇಷ ಮಹತ್ವ ಕೊಡುತ್ತೇನೆ. ಇದರಲ್ಲಿ ಅನುಮಾನವೇ ಬೇಡ'' ಎಂದು ಭರವಸೆ ನೀಡಿದ್ದಾರೆ.

''ನಾವು ಕೆ.ಸಿ ವ್ಯಾಲಿ ಯೋಜನೆಗೆ 1,400 ಕೋಟಿ ಅನುದಾನ ನೀಡಿ, ಜಾರಿ ಮಾಡಿದ್ದೆವು, ಎನ್,ಸಿ ವ್ಯಾಲಿ ಯೋಜನೆ ಜಾರಿ ಮಾಡಿದ್ದೆವು. ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಭೂಮಿ ಪೂಜೆ ಮಾಡಿದ್ದು ನಮ್ಮ ಕಾಲದಲ್ಲಿ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದರೆ ಈ ಯೋಜನೆಯನ್ನು ಪೂರ್ಣಗೊಳಿಸುತ್ತಿದ್ದೆವು'' ಎಂದು ಹೇಳಿದ್ದಾರೆ. 

''ಕೋಲಾರದಿಂದ ನಾನು ಸ್ಪರ್ಧಿಸಿದರೆ ನಾನು ಸ್ಪರ್ಧಿಸದೆ ಬೆಂಬಲ ನೀಡುತ್ತೇನೆ ಎಂದು ಕ್ಷೇತ್ರದ ಹಾಲಿ ಶಾಸಕರಾದ ಶ್ರೀನಿವಾಸ ಗೌಡ ಅವರು ಹೇಳಿದ್ದಾರೆ. ಅವರ ಅಭಿಮಾನಕ್ಕೆ ನಾನು ಕೃತಜ್ಞನಾಗಿದ್ದೇನೆ''

- ಸಿದ್ದರಾಮಯ್ಯ, ವಿಧಾನ ಸಭೆ ವಿಪಕ್ಷ ನಾಯಕರು

Similar News