EWS ಮೀಸಲಾತಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧ, ರಾಜ್ಯದಲ್ಲಿ ಹಾಲಿ ಮೀಸಲಾತಿ ನೀತಿ ಮುಂದುವರಿಕೆ: ತಮಿಳುನಾಡು ಸರ್ಕಾರ
ಚೆನ್ನೈ: ಆರ್ಥಿಕವಾಗಿ ಹಿಂದುಳಿದವರಿಗಾಗಿ ಕಲ್ಪಿಸಿರುವ (EWS) ಮೀಸಲಾತಿ ಸಾಮಾಜಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿರುವುದರಿಂದ ರಾಜ್ಯ ಸರ್ಕಾರವು ಅದನ್ನು ಜಾರಿಗೊಳಿಸುವುದಿಲ್ಲ ಎಂದು ತಮಿಳುನಾಡು (Tamil Nadu) ಸರ್ಕಾರ ಸ್ಪಷ್ಟಪಡಿಸಿದೆ. ಚಾಲ್ತಿಯಲ್ಲಿರುವ ಶೇ. 69 ಮೀಸಲಾತಿ ನೀತಿಯನ್ನೇ ಮುಂದುವರಿಸಲು ಸರ್ಕಾರ ದೃಢ ನಿಶ್ಚಯ ಕೈಗೊಂಡಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಲಾಗಿದೆ ಎಂದು thenewsminute.com ವರದಿ ಮಾಡಿದೆ.
"ಸಾಮಾಜಿಕವಾಗಿ ಹಿಂದುಳಿದಿರುವ ವರ್ಗಗಳ ಪ್ರಗತಿಯನ್ನು ಖಾತ್ರಿಗೊಳಿಸಲು ಹಾಗೂ ರಾಜ್ಯದಲ್ಲಿ ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸಲು ತಮಿಳುನಾಡು ವಿಶಿಷ್ಟ ಮೀಸಲಾತಿ ನೀತಿಯನ್ನು ಅಳವಡಿಸಿಕೊಂಡಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕೊಡಮಾಡಲಾಗಿರುವ ಶೇ. 10ರಷ್ಟು ಮೀಸಲಾತಿಯು ಸಾಮಾಜಿಕ ನ್ಯಾಯದ ತತ್ವಕ್ಕೆ ವಿರುದ್ದವಾಗಿರುವುದರಿಂದ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಮೀಸಲಾತಿ ನೀತಿಯನ್ನೇ ಮುಂದುವರಿಸಲು ರಾಜ್ಯ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ" ಎಂದು ತಮಿಳುನಾಡು ವಿಧಾನಸಭೆಯ ಅಧಿವೇಶನದಲ್ಲಿ ಮಂಡನೆಯಾದ ರಾಜ್ಯಪಾಲರ ಭಾಷಣದಲ್ಲಿ ಹೇಳಲಾಗಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕಲ್ಪಿಸಲಾಗಿದ್ದ EWS ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಇದಲ್ಲದೆ EWS ಮೀಸಲಾತಿ ಅನುಷ್ಠಾನಗೊಳಿಸಬೇಕೋ, ಬೇಡವೋ ಎಂಬುದು ರಾಜ್ಯ ಸರ್ಕಾರಗಳ ವಿವೇಚನೆಗೆ ಸೇರಿದ್ದು ಎಂದು 2022ರಲ್ಲಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು.
ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಆರಂಭದಿಂದಲೂ ಇಡಬ್ಲ್ಯೂಎಸ್ ಮೀಸಲಾತಿಯನ್ನು ವಿರೋಧಿಸುತ್ತಿದ್ದು, ಅದನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಹೇಳಿವೆ. ಇಡಬ್ಲ್ಯೂಎಸ್ ಮೀಸಲಾತಿ ಕುರಿತ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಬೆನ್ನಿಗೇ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಇಡಬ್ಲ್ಯೂಎಸ್ ಮೀಸಲಾತಿ ಸಂಬಂಧ ಆಗಿರುವ ಬೆಳವಣಿಗೆಯಿಂದ ಶತಮಾನದ ಇತಿಹಾಸ ಹೊಂದಿರುವ ಸಾಮಾಜಿಕ ನ್ಯಾಯ ಹೋರಾಟಕ್ಕೆ ಹಿನ್ನಡೆಯಾಗಿದೆ. ರಾಜ್ಯದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳು ಮತ್ತು ಇತರ ಸಂಘಟನೆಗಳು ಸಾಮಾಜಿಕ ನ್ಯಾಯದ ಪರ ಹೋರಾಡಲು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದರು.
ಇದನ್ನೂ ಓದಿ: ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ಆ್ಯಪ್ ಗಳ ಬಗ್ಗೆ ಇರಲಿ ಎಚ್ಚರ…