ಹುಬ್ಬಳ್ಳಿಗೆ ಪ್ರಧಾನಿ ಭೇಟಿ; 'ಗೋ ಬ್ಯಾಕ್ ಮೋದಿ' ಘೋಷಣೆ

Update: 2023-01-12 12:53 GMT

ಹುಬ್ಬಳ್ಳಿ: 'ಉದ್ಯೋಗ ನೀಡಿ, ನಿರುದ್ಯೋಗ ಸಮಸ್ಯೆ ಬಗೆಹರಿಸಿ' ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರ  ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರ ವಿರುದ್ಧ ನಗರದ ಪಾಲಿಕೆ ಆವರಣದ ಬಳಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು 'ಗೋ ಬ್ಯಾಕ್ ಮೋದಿ' ಎಂದು ಘೋಷಣೆ ಕೂಗಿ  ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ, ಸಾಮಾಜಿಕ ಜಾಲತಾಣದಲ್ಲೂ ಕೂಡ ಕಾಂಗ್ರೆಸ್ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರು ಹಾಗೂ ಕೆಲವು ಕಾರ್ಯಕರ್ತರಿಂದ ‘ಗೋ ಬ್ಯಾಕ್ ಮೋದಿ’ ಅಭಿಯಾನ ನಡೆಸಿ, ಹಲವಾರು ವಿಚಾರಗಳಿಗೆ ಸಂಬಂಧಿಸಿ ಪ್ರಶ್ನೆಗಳ ಮೂಲಕ ಅಭಿಯಾನ ನಡೆಸುತ್ತಿದ್ದಾರೆ. 

► ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳ ಸುರಿಮಳೆ

-ಹುಬ್ಬಳ್ಳಿಯ ವಿಮಾನ ನಿಲ್ದಾಣವನ್ನು ಅದಾನಿಗೆ ಮಾರಾಟ ಮಾಡಿದ ವ್ಯಾಪಾರಿ ಮೋದಿಗೆ ಸ್ವಾಗತಿಸಬೇಕಾ?

-ಹುಬ್ಬಳ್ಳಿಯನ್ನು ಸ್ಮಾರ್ಟ್ ಸಿಟಿ ಮಾಡೊದಾಗಿ ಹೇಳಿ UGLY ಮಾಡಿದ ಮೋದಿಗೆ ಸ್ವಾಗತಿಸಬೇಕಾ?

-ಬಿಆರ್​ಟಿಎಸ್ ತಂದು ಸಾವಿರಾರು ಜನರ ಉದ್ಯೋಗ ಕಸಿದುಕೊಂಡು ನೂರಾರು ಅಮಾಯಕ ಜನರ ಬಲಿ ಪಡೆದ ಮೋದಿಗೆ ಸ್ವಾಗತಿಸಬೇಕಾ?

-ಖಾದಿ ತ್ರಿವರ್ಣ ರಾಷ್ಟ್ರ ಧ್ವಜವನ್ನು ಮೂಲೆ ಗುಂಪು ಮಾಡಿ ಚೈನಾದ ಪಾಲಿಸ್ಟರ್ ಧ್ವಜ ತಂದ ಮೋದಿಗೆ ಸ್ವಾಗತಿಸಬೇಕಾ? ಎಂದು ಕಾರ್ಯಕ್ರಮಕ್ಕೂ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.

Similar News