ನಮ್ಮದು ಕಲ್ಯಾಣ ರಾಜ್ಯ, ಈಸ್ಟ್ ಇಂಡಿಯಾ ಕಂಪೆನಿ ಆಳ್ವಿಕೆಯಲ್ಲ: BDA ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2023-01-15 12:39 GMT

ಬೆಂಗಳೂರು, ಜ.15: ಬೆಂಗಳೂರಿನ ಪದ್ಮನಾಭನಗರ ನಿವಾಸಿಯೊಬ್ಬರಿಗೆ ಸೇರಿದ ಎರಡು ನಿವೇಶನಗಳನ್ನು ನಾಗರಿಕ ಸೇವೆಗೆ(ಸಿಎ) ಮೀಸಲಿಟ್ಟಿರುವುದಾಗಿ ಆದೇಶಿಸಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಆಯುಕ್ತರ ಆದೇಶಗಳನ್ನು ಇತ್ತೀಚೆಗೆ ವಜಾ ಮಾಡಿರುವ ಹೈಕೋರ್ಟ್, ನಮ್ಮದು ಈಸ್ಟ್ ಇಂಡಿಯಾ ಕಂಪೆನಿಯ ಆಳ್ವಿಕೆಯಲ್ಲ. ಕಲ್ಯಾಣ ರಾಜ್ಯಕ್ಕೆ ಒಳಪಟ್ಟಿರುವ ಆಡಳಿತ ಎಂದು ಮಾರ್ಮಿಕವಾಗಿ ನುಡಿದಿದೆ. 

ಪದ್ಮನಾಭನಗರದ ಪಾರ್ಟಿ ಇನ್ ಪರ್ಸನ್ ಬಿ.ವಿ.ಓಂಪ್ರಕಾಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು.

ಮೂರು ದಶಕಗಳ ಹಿಂದೆ ಮಂಜೂರಾಗಿದ್ದ ನಿವೇಶನಗಳನ್ನು ನಾಗರಿಕ ಸೌಲಭ್ಯಗಳಿಗೆ(ಸಿಎ) ಮೀಸಲಿಟ್ಟಿರುವುದಾಗಿ ತಿಳಿಸಿ 2013ರ ಜೂ.20ರಂದು ನಗರದ ಪದ್ಮನಾಭನಗರದ ಬಿ.ವಿ.ಓಂಪ್ರಕಾಶ್ ಎಂಬುವರಿಗೆ ಬಿಡಿಎ ಪತ್ರ ಬರೆದಿತ್ತು. ಇದನ್ನು ಪ್ರಶ್ನಿಸಿ ಓಂಪ್ರಕಾಶ್ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಪೀಠವು ವಕೀಲರ ವಾದವನ್ನು ಆಲಿಸಿ ಬಿಡಿಎ ನಿವೇಶನ ಮಾಲಕರಿಗೆ ಬಿಡಿಎ ಬರೆದಿದ್ದ ಪತ್ರವನ್ನು ರದ್ದುಪಡಿಸಿ ಆದೇಶಿಸಿದೆ. 

ಅಲ್ಲದೇ, ಬಿಡಿಎ ಅಧಿಕಾರಿಗಳು ಎಸಗಿರುವ ತಪ್ಪುಗಳಿಗೆ ದೊಡ್ಡ ಮಟ್ಟದ ದಂಡ ವಿಧಿಸಬಹುದಾಗಿದೆ. ಆದರೆ, ಬಿಡಿಎ ಪರ ವಕೀಲರ ಮನವಿಯನ್ನು ಪರಿಗಣಿಸಿ ದಂಡ ಹಾಕುವ ನಿರ್ಧಾರ ಹಿಂಪಡೆಯಲಾಗಿದೆ. ಆದರೆ, ಅಧಿಕಾರಿಗಳು ಅರ್ಜಿದಾರರ ವಿರುದ್ಧ ಮುಂದಾಗಿರುವ ಕ್ರಮವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ತಪ್ಪಿತಸ್ಥ ಅಧಿಕಾರಿಗಳಿಗೆ ದಂಡ ವಿಧಿಸುವ ಸಂಬಂಧ ಅರ್ಜಿದಾರರು ಮೆಮೋ ಸಲ್ಲಿಸಬಹುದು ಎಂದು ಸೂಚನೆ ನೀಡಿ ಆದೇಶಿಸಿದೆ.

Similar News