ಆರ್‌ಟಿಐ ಕಾರ್ಯಕರ್ತನ ಹತ್ಯೆಗೆ ಪೋಲೀಸ್ ಇಲಾಖೆ, ಸರಕಾರದ ವೈಫಲ್ಯವೇ ಕಾರಣ: ಆರೋಪ

Update: 2023-01-16 12:07 GMT

ಬೆಂಗಳೂರು, ಜ.16: ಕನಕಪುರ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಮೂರ್ತಿ ಕೊಲೆ ಆಗಿರುವುದಕ್ಕೆ ಪೋಲೀಸ್ ಇಲಾಖೆ ಹಾಗೂ ಸರಕಾರದ ವೈಫಲ್ಯವೇ ಕಾರಣ ಎಂದು ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯು ಆರೋಪಿಸಿದೆ. 

ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ವಿ.ಹನುಮಂತರಾಯಪ್ಪ ಮಾತನಾಡಿ, ಕನಕಪುರ ಮೂಲದ ಮೂರ್ತಿ ಮಾಹಿತಿ ಹಕ್ಕಿನಡಿ ತನ್ನ ಗ್ರಾಮದಲ್ಲಿ ನಡೆಯುವ ಅಕ್ರಮ ಬಯಲಿಗೆಳೆಯುತ್ತಿದ್ದನು. ಕಾಮಗಾರಿಗಳಲ್ಲಿ ಕಂಡು ಬಂದ ಅಕ್ರಮಗಳನ್ನು ಪ್ರಶ್ನೆ ಮಾಡುತ್ತಿದ್ದನು. ಆದರೆ ಕಾಮಗಾರಿಗಳಲ್ಲಿ ಅಕ್ರಮ ಎಸಗಿದ ಬಲಾಢ್ಯರು ಪೋಲೀಸ್ ಇಲಾಖೆಯ ಸಿಬ್ಬಂದಿಯನ್ನು ಬಳಸಿಕೊಂಡು ಮೂರ್ತಿಯನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದರು.

ಮೂರ್ತಿ ಕೊಲೆಗೂ ಮುನ್ನ ಆತನ ಮೇಲೆ ಹತ್ತಾರು ಬಾರಿ ಹಲ್ಲೆ ಮಾಡಿದ್ದರು. ಈ ಬಗ್ಗೆ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆದರೆ ಪೋಲೀಸರು ಯಾವುದೇ ಕ್ರಮವನ್ನು ಜರುಗಿಸಿಲ್ಲ. ಅಲ್ಲದೆ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ, ದುಷ್ಕರ್ಮಿಗಳಿಗೆ ಬೆನ್ನೆಲುಬಾಗಿ ನಿಂತು ಮೂರ್ತಿಯನ್ನು ಕೊಲೆ ಮಾಡಲು ನೆರವಾಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕನಕಪುರ: ತಲೆ ಮೇಲೆ ಕಲ್ಲು ಎತ್ತಿ ಹಾಕಿ RTI ಕಾರ್ಯಕರ್ತನ ಕೊಲೆ 

ಒಬ್ಬ ವ್ಯಕ್ತಿಯು ಮಾಹಿತಿಯನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿಯನ್ನು ಸಲ್ಲಿಸುತ್ತಾನೆ. ಅರ್ಜಿಯ ಕುರಿತು ಅಧಿಕಾರಿಯು ಸಂಬಂಧಪಟ್ಟ ಗುತ್ತಿಗೆದಾರರಿಗೆ ಅರ್ಜಿ ಸಲ್ಲಿಸಿರುವ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ನೀಡಿತ್ತಾರೆ. ಗುತ್ತಿಗೆದಾರರು ಜನಪ್ರತಿನಿಧಿಗಳಿಗೆ, ಜನಪ್ರತಿನಿಧಿಗಳು ಪೋಲೀಸರಿಗೆ ತಿಳಿಸುತ್ತಾರೆ. ಹೀಗೆ ಸರಕಾರ, ಪೋಲೀಸ್ ಇಲಾಖೆ ಹಾಗೂ ಗೂಂಡಗಳು ಒಂದಾಗಿ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಮುಗಿಸಲು ತಂತ್ರ ರೂಪಿಸುತ್ತಾರೆ ಎಂದು ಅವರು ವಿವರಿಸಿದರು. 

ಮೂರ್ತಿ ಕೊಲೆ ನಡೆದಾಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾವಿಗಳನ್ನು ಕೈಬಿಟ್ಟು ನೆಪಮಾತ್ರಕ್ಕೆ ಕೆಲವರನ್ನು ಅರೆಸ್ಟ್ ಮಾಡಲಾಗಿದೆ. ಹಾಗಾಗಿ ಮೂರ್ತಿ ಕೊಲೆ ಪ್ರಕರಣವನ್ನು ಸರಕಾರವು ಗಂಬೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು. 

‘ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಲೋಕಾಯುಕ್ತ ಕಚೇರಿಯು ಕಣ್ಣಿಟ್ಟಿದೆ. ಗುಪ್ತಚರ ಇಲಾಖೆಯು ಮಾಹಿತಿ ಹಕ್ಕು ಕಾರ್ಯಕರ್ತರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಕಲೆ ಹಾಕುತ್ತಿದೆ. ಆದರೆ ಪ್ರಮಾಣಿಕ ಆರ್‍ಟಿಐ ಕಾರ್ಯಕರ್ತರನ್ನು ಪೋಲೀಸ್ ಇಲಾಖೆ ಮತ್ತು ಸರಕಾರ ರಕ್ಷಣೆ ನೀಡಬೇಕು’ 

-ಸಿ.ನರಸಿಂಹಮೂರ್ತಿ, ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಉಪಾಧ್ಯಕ್ಷ

Similar News