ಬಿಜೆಪಿ ದುರಾಡಳಿತದಿಂದ ದೇಶ ಆರ್ಥಿಕ ದಿವಾಳಿಯಾಗುವ ಕಾಲ ದೂರವಿಲ್ಲ: ಎಚ್.ಸಿ.ಮಹದೇವಪ್ಪ ಆತಂಕ

Update: 2023-01-16 16:19 GMT

ಬೆಂಗಳೂರು, ಜ. 16: ‘ದೇಶದಲ್ಲಿರುವ ದೊಡ್ಡ ಜನಸಂಖ್ಯೆಯ ಉತ್ಪಾದನೆಯ ಕಾರಣಕ್ಕಾಗಿಯೆ ಕೇಂದ್ರ ಸರಕಾರ ಎಷ್ಟೇ ದುರಾಡಳಿತ ನಡೆಸಿದರೂ ಆರ್ಥಿಕತೆ ದಿವಾಳಿ ಹಂತಕ್ಕೆ ತಲುಪಿಲ್ಲ. ಆದರೆ, 2ರೂ. ಅಜ್ಞಾನಿ ಕೋಮುಭಕ್ತರು ಆರ್ಥಿಕ ತಜ್ಞರಾಗಿ ಬದಲಾಗುತ್ತಿರುವುದನ್ನು ಗಮನಿದರೆ ದೇಶ ದಿವಾಳಿಯಾಗುವ ಸಂದರ್ಭ ದೂರ ಇಲ್ಲ’ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಸೋಮವಾರ ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಅವರು, ‘ದೇಶದ ಜಿಡಿಪಿ ದರವನ್ನೇ ತಗ್ಗಿಸುವಂತೆ ಕಾರ್ಪೊರೇಟ್ ಉದ್ಯಮಿಗಳ 10 ಲಕ್ಷ ಕೋಟಿ ರೂ.ಸಾಲಮನ್ನಾ ಮಾಡುವ  ಬಿಜೆಪಿ ಸರಕಾರವನ್ನು ಪ್ರಶ್ನಿಸಿದ 2 ರೂ.ಕೋಮುಭಕ್ತರು ಶ್ರಮ ವಹಿಸಿ ಕೆಲಸ ಮಾಡುವ ಮಹಿಳೆಯರು, ರೈತರು ಹಾಗೂ ಮಧ್ಯಮ ವರ್ಗಗಳಿಗೆ ಸಹಾಯ ಮಾಡುವ ಸಲುವಾಗಿ ಕೆಲವೇ ನೂರು ಕೋಟಿ ರೂ.ಗಳಲ್ಲಿ ಯೋಜನೆಗಳನ್ನು ಜಾರಿ ಮಾಡಿದಾಗ ಅಸಹನೆಯಿಂದ ಕುದಿಯುವುದು ಯಾವ ಕಾರಣಕ್ಕೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈಗಾಗಲೇ ನುಡಿದಂತೆ ನಡೆದು ಜನರ ಬದುಕಿಗೆ ನೆರವಾದ ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ತನ್ನ ಪ್ರಣಾಳಿಕೆಯ ಭಾಗವಾಗಿ ಕೆಲವು ಜನಪರ ಯೋಜನೆಗಳ ಘೋಷಣೆ ಮಾಡಿರುವುದನ್ನು ಕಂಡು ಕೋಮುವಾದಿ ಪಾಳಯದ ಹಲವರು ಆರ್ಥಿಕ ತಜ್ಞರಾಗಿ ಬದಲಾಗಿದ್ದು ಇದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ, ಶ್ರೀಲಂಕಾದ ಪರಿಸ್ಥಿತಿ ನಮಗೆ ಬರಲಿದೆ ಎಂದು ಅರ್ಥವಿಲ್ಲದೇ ರೋಧಿಸುತ್ತಿವೆ ಎಂದು ಅವರು ಟೀಕಿಸಿದ್ದಾರೆ.

ಹಿಂದಿನ ಸರಕಾರದ ಅವಧಿಯಲ್ಲಿ ಆರ್ಥಿಕ ಶಿಸ್ತಿನ ಆಧಾರದ ಮೇಲೆ ಜನರ ತೆರಿಗೆ ಹಣ ಅಚ್ಚುಕಟ್ಟಾಗಿ ಅವರಿಗೆ ತಲುಪಿಸುವ ಕೆಲಸ ಮಾಡಿದ್ದ ಕಾಂಗ್ರೆಸ್, ಮಹಿಳೆಯರು, ರೈತರು, ಮಕ್ಕಳು, ಯುವಕ ಯುವತಿಯರ ಆದಿಯಾಗಿ ಎಲ್ಲ ವರ್ಗಗಳಿಗೂ ನೆರವಾಗಿತ್ತು. ಇದರ ಫಲವೇ ರಾಜ್ಯವು ಗುಜರಾತ್ ಮಾದರಿ ಎಂಬ ಕಳಪೆ ಮಾದರಿ ಹಿಂದಿಕ್ಕಿ ಒಟ್ಟಾರೆ ಅಭಿವೃದ್ಧಿಯಲ್ಲಿ ನಂ.1 ಸ್ಥಾನಕ್ಕೆ ಏರಿತ್ತು. ಕಾಂಗ್ರೆಸ್ ಜನಪರ ಭರವಸೆಗಳನ್ನು ಟೀಕಿಸುತ್ತಿರುವ 2ರೂ.ಕೋಮು ಭಕ್ತರು ಏಕೆ ಬಿಜೆಪಿ ಆಡಳಿತದ ಅವಧಿಯಲ್ಲಿ 2ಲಕ್ಷ ಕೋಟಿ ರೂ.ಇದ್ದ ರಾಜ್ಯದ ಸಾಲ 5ಲಕ್ಷ ಕೋಟಿ ರೂ.ಗೆ ಏರಿದೆ ಎಂಬುದನ್ನು ತಿಳಿಸಲಿ ಎಂದು ಮಹದೇವಪ್ಪ ಸವಾಲು ಹಾಕಿದ್ದಾರೆ.

Similar News