ಭಾರೀ ವಿರೋಧದ ಬಳಿಕ ಮದ್ಯ ಖರೀದಿ ವಯೋಮಿತಿ ಇಳಿಕೆ ಮಾಡುವ ನಿರ್ಧಾರ ಕೈಬಿಟ್ಟ ರಾಜ್ಯ ಸರಕಾರ

Update: 2023-01-18 12:42 GMT

ಬೆಂಗಳೂರು, ಜ. 18: ವಿದ್ಯಾರ್ಥಿ, ಯುವಜನರು ಹಾಗೂ ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಮದ್ಯ ಖರೀದಿ ವಯಸ್ಸನ್ನು 21ರಿಂದ 18 ವರ್ಷಕ್ಕೆ ಇಳಿಕೆ ಮಾಡುವ ತೀರ್ಮಾನವನ್ನು ರಾಜ್ಯ ಸರಕಾರ ಹಿಂಪಡೆದಿದೆ.

ಅಬಕಾರಿ ಇಲಾಖೆಯು ಮದ್ಯ ಖರೀದಿಗೆ ನಿಗದಿ ಮಾಡಿದ್ದ ವಯೋಮಿತಿಯನ್ನು 21ವರ್ಷದಿಂದ 18ಕ್ಕೆ ಇಳಿಕೆ ಮಾಡಲು ಕರಡು ತಿದ್ದುಪಡಿಯನ್ನು ಹೊರಡಿಸಿತ್ತು. ಅಲ್ಲದೆ, ಈ ಸಂಬಂಧ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಕೋರಲಾಗಿತ್ತು. ಆದರೆ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ‘ರಾಜ್ಯ ಸರಕಾರವೇ ಯುವಜನತೆಯನ್ನು ಮದ್ಯಪಾನಕ್ಕೆ ಪ್ರೋತ್ಸಾಹಿಸಲು ಕುಮ್ಮಕ್ಕು ನೀಡುತ್ತಿದೆ’ ಎಂಬ ಆರೋಪವೂ ಕೇಳಿಬಂದಿತ್ತು.

ನಿರುದ್ಯೋಗದ ಹಿನ್ನೆಲೆಯಲ್ಲಿ ಯುವಜನರು ಜಾತೀಯತೆ, ಕೋಮುವಾದ, ಮಾದಕ ದ್ರವ್ಯದಂತಹ ದುಶ್ಚಟಗಳಿಗೆ ದಾಸರಾಗುತ್ತಿದ್ದು, ಇದೀಗ ಸರಕಾರ ಮದ್ಯ ಖರೀದಿಯ ವಯಸ್ಸನ್ನು ಇಳಿಸಿ ದೊಡ್ಡ ಪ್ರಮಾಣದಲ್ಲಿ ಯುವಜನರನ್ನು ಕುಡುಕರನ್ನಾಗಿ ಮಾಡುವ ಹುನ್ನಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಮದ್ಯ ಖರೀದಿ ವಯಸ್ಸನ್ನು ಇಳಿಕೆ ಮಾಡಬಾರದು ಎಂಬ ಒತ್ತಾಯ ಕೇಳಿಬಂದಿತ್ತು. 

ಇದನ್ನೂ ಓದಿ: ‘ಮದ್ಯ ಖರೀದಿ’ ವಯಸ್ಸಿನ ಮಿತಿ 21 ರಿಂದ 18ಕ್ಕೆ ಇಳಿಕೆಗೆ ಚಿಂತನೆ: ವಿದ್ಯಾರ್ಥಿ ಸಂಘಟನೆಗಳಿಂದ ವ್ಯಾಪಕ ವಿರೋಧ

2015ರ ವರೆಗೆ ‘ಆಲ್ಕೋಹಾಲ್’ ಪಾನೀಯಗಳನ್ನು ಖರೀದಿಸಲು ಕಾನೂನುಬದ್ಧ ವಯಸ್ಸು 18 ವರ್ಷವಿತ್ತು. 1967ರ ಕರ್ನಾಟಕ ಅಬಕಾರಿ ಪರವಾನಗಿ ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ಮದ್ಯ ಖರೀದಿ ವಯಸ್ಸನ್ನು 21ವರ್ಷಕ್ಕೆ ಹೆಚ್ಚಿಸಲಾಯಿತು. ಆದರೆ, ಈಗ ಸರಕಾರ ಮದ್ಯ ಖರೀದಿಸುವ ವಯಸ್ಸನ್ನು 18ವರ್ಷಕ್ಕೆ ಇಳಿಸಲು ಚಿಂತನೆ ನಡೆಸಿತ್ತು. ಜ.10ರಂದು ಕರದು ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕರಿಂದ ಆಕ್ಷೇಪ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಆದರೆ, ಇದೀಗ ಮದ್ಯ ಖರೀದಿಗೆ ವಯಸ್ಸಿನ ಮಿತಿ ಸಡಿಕೆ ಮಾಡದಿರಲು ರಾಜ್ಯ ಸರಕಾರ ನಿರ್ಧರಿಸಿದೆ.

‘ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ಮಾಧ್ಯಮಗಳಲ್ಲಿ ಬಂದಿರುವ ಆಕ್ಷೇಪಣೆಗಳನ್ನು ಪರಿಗಣಿಸಿ ಕರ್ನಾಟಕ ಅಬಕಾರಿ(ಸನ್ನದ್ದು ಸಾಮಾನ್ಯ ಷರತ್ತುಗಳು)ನಿಯಮಗಳ ಅನ್ವಯ ಮದ್ಯ ಖರೀದಿ ವಯಸ್ಸಿನ ಮಿತಿಯನ್ನು 21ರಿಂದ 18 ವರ್ಷಕ್ಕೆ ಇಳಿಕೆ ಮಾಡಲು ಉದ್ದೇಶಿಸಿದ್ದ ಕರಡು ತಿದ್ದುಪಡಿ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ’ ಎಂದು ಅಬಕಾರಿ ಆಯುಕ್ತರು ತಿಳಿಸಿದ್ದಾರೆ.

Similar News