ನಮ್ಮದು ವೋಟ್ಬ್ಯಾಂಕ್ ಅಲ್ಲ, ಅಭಿವೃದ್ಧಿ ರಾಜಕಾರಣ: ಪ್ರಧಾನಿ ಮೋದಿ
''ಹಿಂದಿನ ಸರ್ಕಾರಗಳಿಂದ ರಾಜ್ಯಕ್ಕೆ ನಷ್ಟ ಆಗಿದೆ"
ಯಾದಗಿರಿ: 'ನಾವು ಎಂದಿಗೂ ವೋಟ್ಬ್ಯಾಂಕ್ ರಾಜಕಾರಣ ಮಾಡಲ್ಲ. ಅಭಿವೃದ್ಧಿಗೆ ಒತ್ತುಕೊಡುತ್ತೇವೆ, ಅಭಿವೃದ್ಧಿಯನ್ನೇ ಗಮನದಲ್ಲಿರಿಸಿಕೊಂಡು ರಾಜಕಾರಣ ಮಾಡುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಜಿಲ್ಲೆಯ ಕೊಡೇಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಜೊತೆಗೆ ನೀರಾವರಿ, ಕುಡಿಯುವ ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮುಂದಿನ 25 ವರ್ಷಗಳು ಪ್ರತಿಯೊಬ್ಬ ನಾಗರಿಕ ಮತ್ತು ರಾಜ್ಯಕ್ಕೆ 'ಅಮೃತ ಕಾಲ'ವಾಗಲಿದೆ. ಈ ಅವಧಿಯಲ್ಲಿ ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಬೇಕಾಗಿದೆ.
ಈ ಹಿಂದೆ ಇದ್ದ ಸರ್ಕಾರಗಳು ಯಾದಗಿರಿಯಂಥ ಹಲವು ಜಿಲ್ಲೆಗಳನ್ನು ಹಿಂದುಳಿದಿವೆ ಎಂದು ಘೋಷಿಸಿ ಕೈತೊಳೆದುಕೊಂಡಿದ್ದವು. ಆದರೆ ನಾವು ಹಾಗಲ್ಲ. ಈ ಜಿಲ್ಲೆಗಳು ಹಿಂದುಳಿದಿರುವ ಕಾರಣಗಳನ್ನು ಹುಡುಕಿ, ಪರಿಹರಿಸಲು ಯತ್ನಿಸಿದೆವು. ಆದರೆ ಹಿಂದಿದ್ದವರು ಅವನ್ನು ಹುಡುಕಲು ಸಮಯ ಕೊಡಲೇ ಇಲ್ಲ. ರಸ್ತೆ, ವಿದ್ಯುತ್, ನೀರಿನಂಥ ಸೌಕರ್ಯ ಒದಗಿಸಲು ಹಿಂದಿನ ಸರ್ಕಾರಗಳು ವಿಫಲವಾದವು. ಅವರು ಮತಬ್ಯಾಂಕ್ ರಾಜಕಾರಣಕ್ಕೇ ಒತ್ತು ಕೊಟ್ಟರು. ಜಾತಿ, ಮತಗಳನ್ನು ಮುಂದಿಟ್ಟು ರಾಜಕಾರಣ ಮಾಡಿದರು. ಇದರಿಂದ ಇಡೀ ಕರ್ನಾಟಕ, ನೀವೆಲ್ಲರೂ ಕಷ್ಟ-ನೋವು ಅನುಭವಿಸುವಂತ ಪರಿಸ್ಥಿತಿ ಎದುರಾಗಿತ್ತು ಎಂದು ಆರೋಪಿಸಿದರು.