ಬಿಡಾಡಿ ದನಗಳನ್ನು ಗೋಶಾಲೆಗಳಿಗೆ ಬಿಡಿ: ಸಚಿವ ಪ್ರಭು ಚೌಹಾಣ್ ಮನವಿ

Update: 2023-01-23 15:45 GMT

ಬೆಂಗಳೂರು, ಜ. 23: ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ರಸ್ತೆಯಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಬಿಡಾಡಿ ದನಗಳನ್ನು ನಿಯಂತ್ರಿಸಲು ಅವುಗಳನ್ನು ರಕ್ಷಣೆ ಮಾಡಿ ಸಮೀಪದ ಗೋಶಾಲೆಗಳಿಗೆ ಬಿಡಬೇಕು ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್, ಸ್ಥಳೀಯ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ.

ಸೋಮವಾರ ಈ ಕುರಿತು ಹೇಳಿಕೆ ನೀಡಿರುವ ಅವರು, ಬಿಬಿಎಂಪಿ ಸೇರಿದಂತೆ ಎಲ್ಲ ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ಹೋಬಳಿ ಕೇಂದ್ರಗಳು, ಗ್ರಾ.ಪಂ. ಸೇರಿದಂತೆ ಪ್ರಮುಖ ಪಟ್ಟಣಗಳ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳು ನಿತ್ಯ ಕಂಡು ಬರುತ್ತಿದ್ದು, ಸಾಕಷ್ಟು ದೂರುಗಳು ಬರುತ್ತಿರುವುದರಿಂದ ಬಿಡಾಡಿ ದನಗಳಿಗೆ ಕಡಿವಾಣ ಹಾಕಲು ಸ್ಥಳೀಯ ಸಂಸ್ಥೆಗಳು ಮುಂದಾಗಬೇಕಾಗಿದೆ ಎಂದು ತಿಳಿಸಿದ್ದಾರೆ.

ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳ ಮಾಲಕರು ಎಮ್ಮೆ, ಹಸುಗಳ ಹಾಲು ಹಿಂಡಿಕೊಂಡು ಬೀದಿಗೆ ಅಟ್ಟುವ ಪ್ರವೃತ್ತಿ ಮತ್ತೆ ಹೆಚ್ಚುತ್ತಿರುವುದನ್ನು ತಡೆಗಟ್ಟಲು ಹಾಗೂ ಸಂಭವಿಸುವ ಅಪಘಾತಗಳಲ್ಲಿ ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಗಾಯಗಳಾಗಿ ಮೃತಪಡುವುದನ್ನು ತಡೆಗಟ್ಟಲು ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸರಕಾರ ಸಿದ್ಧವಿದೆ ಎಂದು ಸ್ವಷ್ಟಪಡಿಸಿದ್ದಾರೆ.

ರಸ್ತೆ ಮೇಲೆ ದನಗಳು ಕಂಡು ಬಂದರೆ ತಕ್ಷಣ ಸಮೀಪದ ಸರಕಾರಿ ಮತ್ತು ಖಾಸಗಿ ಗೋಶಾಲೆಗೆ ಸ್ಥಳೀಯ ಸಂಸ್ಥೆಗಳು ತಂದು ಬಿಡಬೇಕು. ಆ ಮೂಲಕ ರಸ್ತೆ ಮಧ್ಯೆ ನಿಲ್ಲುವ ಅಥವಾ ರಸ್ತೆ ಬದಿ ಮೇಯುತ್ತಾ ಅಪಘಾತಕ್ಕೀಡಾಗಿ ಸಾವನ್ನಪ್ಪುವ ರಾಸುಗಳನ್ನು ರಕ್ಷಣೆ ಮಾಡಿ, ಅವುಗಳ ಪಾಲನೆ, ಪೋಷಣೆ ಮಾಡುವುದು ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿ, ಸಾರ್ವಜನಿಕರನ್ನು ರಕ್ಷಣೆ ಮಾಡುವುದು ಇದರ ಉದ್ದೇಶ ಎಂದು ಅವರು ತಿಳಿಸಿದ್ದಾರೆ.

ಸಹಾಯವಾಣಿಗೆ ಕರೆ ಮಾಡಿ: ರಸ್ತೆಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಬಿಡಾಡಿ ದನಗಳು ಕಂಡು ಬಂದರೆ ಕೂಡಲೇ ಸಾರ್ವಜನಿಕರು ಪ್ರಾಣಿ ಕಲ್ಯಾಣ ಸಹಾಯವಾಣಿ ಸಂಖ್ಯೆ 82771 00200 ಅಥವಾ ಸ್ಥಳೀಯ ಸಂಸ್ಥೆಗಳ ಸಹಾಯವಾಣಿಗಳಿಗೆ ಕರೆ ಮಾಡಿ, ಈ ಬಗ್ಗೆ ದೂರು ನೀಡಿದರೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಬಿಡಾಡಿ ದನಗಳನ್ನು ಸಮೀಪದ ಗೋಶಾಲೆಗಳಿಗೆ ತಂದುಬಿಡುವ ವ್ಯವಸ್ಥೆಗೆ ಕ್ರಮಕೈಗೊಳ್ಳಬೇಕು. ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕರು ಬಿಡಾಡಿ ದನಗಳನ್ನು ಗೋಶಾಲೆಗಳಿಗೆ ತಂದುಬಿಡಬೇಕು ಎಂದು ಮನವಿ ಮಾಡಿದ್ದಾರೆ.

ನೋಂದಣಿ: ಸರಕಾರಿ ಮತ್ತು ಖಾಸಗಿ ಗೋಶಾಲೆಗಳಿಗೆ ತಂದು ಬಿಡುವ ಬಿಡಾಡಿ ದನಗಳ ಆರೈಕೆ, ಪಾಲನೆ ಮತ್ತು ಪೋಷಣೆ ಜತೆಗೆ ಪ್ರತಿಯೊಂದನ್ನು ಆನ್‍ಲೈನ್ ಪೋರ್ಟಲ್‍ನಲ್ಲಿ ನೋಂದಣಿ ಮಾಡಬೇಕು ಎಂದು ಪ್ರಭು ಚೌಹಾಣ್, ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

Similar News