5ನೇ,8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ: ಪರೀಕ್ಷಾ ಕೇಂದ್ರಗಳನ್ನು ತಂತ್ರಾಂಶದಲ್ಲಿ ಮ್ಯಾಪಿಂಗ್ ಮಾಡಲು ಸೂಚನೆ

Update: 2023-01-23 17:55 GMT

ಬೆಂಗಳೂರು, ಜ. 23: ವಿವಾದಗಳ ನಡುವೆಯೂ ಶಿಕ್ಷಣ ಇಲಾಖೆಯು ಪ್ರಸಕ್ತ ವರ್ಷದಲ್ಲಿ 5ನೆ ಮತ್ತು 8ನೆ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆಗಳನ್ನು ನಡೆಸುತ್ತಿದ್ದು, ಪರೀಕ್ಷಾ ಕೇಂದ್ರಗಳನ್ನು ಗೊತ್ತುಪಡಿಸಲು ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. 

ಬಿಇಓ ಲಾಗೀನ್‍ನಲ್ಲಿ ಪರೀಕ್ಷಾ ಕೇಂದ್ರಗಳ ರಚನೆಯನ್ನು ನಡೆಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸೂಚಿಸಿದೆ. ಕಡ್ಡಾಯವಾಗಿ ಜ.30ರೊಳಗೆ ಪರೀಕ್ಷಾ ಕೇಂದ್ರಗಳ ರಚನಾ ಕಾರ್ಯವನ್ನು ಗುರುತಿಸುವಂತೆ ಸೂಚಿಸಿದೆ.

ಶಾಲಾವಾರು ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧಾರಿಸಿ, 5ನೆ ತರಗತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 25 ವಿದ್ಯಾರ್ಥಿಗಳು ಒಂದು ಕೇಂದ್ರದಲ್ಲಿ ಲಭ್ಯವಾಗುವಂತೆ ಮ್ಯಾಪಿಂಗ್ ಮಾಡಬೇಕು. ವಿದ್ಯಾರ್ಥಿಗಳು ಕಡಿಮೆ ಇದ್ದರೆ, 2 ಕಿ.ಮೀ. ವ್ಯಾಪ್ತಿಯಲ್ಲಿ ಅಗತ್ಯ ಮೂಲಭೂತ ಸೌಕರ್ಯ ಇರುವ ಶಾಲೆಗಳ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಪರೀಕ್ಷಾ ಕೇಂದ್ರಗಳನ್ನು ರಚಿಸಬೇಕು. 

8ನೆ ತರಗತಿ ಪರೀಕ್ಷಾ ಕೇಂದ್ರವನ್ನು ಕನಿಷ್ಠ 50 ವಿದ್ಯಾರ್ಥಿಗಳು ಇರುವಂತೆ ಆಯಾ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಸ್ಥಾಪಿಸಬಹುದು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದಲ್ಲ, ಕನಿಷ್ಠ 2 ಕಿ.ಮೀ. ವ್ಯಾಪ್ತಿಯ ಸಮೀಪದ ಶಾಲೆಗಳಿಗೆ ಟ್ಯಾಗ್ ಮಾಡುವಂತೆ ಇಲಾಖೆಯು ಸೂಚಿಸಿದೆ. 

ತಂತ್ರಾಂಶದಲ್ಲಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲು ಹಾಗೂ ರದ್ದುಪಡಿಸಲು ಅವಕಾಶವನ್ನು ನೀಡಲಾಗಿದೆ. ಶಾಲೆಗಳ ವಿವರವನ್ನು ಸ್ಯಾಟ್ ತಂತ್ರಾಂಶದಿಂದ ಪಡೆದು, ಬಿಇಒ ವ್ಯಾಪ್ತಿಯಲ್ಲಿನ ಎಲ್ಲ ರೀತಿಯ ಪಠ್ಯಕ್ರಮಗಳನ್ನು ಬೋಧಿಸುವ ಶಾಲೆಗಳನ್ನು ಪಟ್ಟಿ ಮಾಡಲಾಗಿದೆ. ಪರೀಕ್ಷೆಗಳನ್ನು ಕೇವಲ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಮಾತ್ರ ನಡೆಸುತ್ತಿರುವುದರಿಂದ ಬೇರೆ ಪಠ್ಯಕ್ರಮದ ಶಾಲೆಗಳಿಗೆ ಅನ್ವಯಿಸುವುದಿಲ್ಲ ಎಂಬ ಸೂಚನೆ ನೀಡಲಾಗಿದೆ. ತಂತ್ರಾಂಶದಲ್ಲಿ ಗೊಂದಲಗಳು ಸೃಷ್ಠಿಯಾದಲ್ಲಿ ಮತ್ತು ಹೆಚ್ಚಿನ ಮಾಹಿತಿಗಾಗಿ 080-2972 0438 ಮತ್ತು 080-2334 1615ಕ್ಕೆ ಸಂಪರ್ಕಿಸುವಂತೆ ತಿಳಿಸಿದೆ. 

Similar News