ತಾಖತ್ ಇದ್ದರೆ ನನ್ನ ವಿರುದ್ಧದ ಆರೋಪದ ಬಗ್ಗೆ ತನಿಖೆ ನಡೆಸಿ: ಸಿದ್ದರಾಮಯ್ಯ ಸವಾಲು

''ಮೂರು ಮುಕ್ಕಾಲು ವರ್ಷ ತೆಪ್ಪಗಿದ್ದ ಬಿಜೆಪಿ ನಾಯಕರು...''

Update: 2023-01-24 13:26 GMT

ಬೆಂಗಳೂರು, ಜ.24: ಬಿಜೆಪಿ ನಾಯಕರು ನನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳ ತನಿಖೆಗೆ ನಾನು ಸಿದ್ಧನಿದ್ದೇನೆ. ಆದರೆ, ಇದಕ್ಕಿಂತ ಮೊದಲು ನನ್ನ ಸರಳ ಪ್ರಶ್ನೆಯೊಂದಕ್ಕೆ ಉತ್ತರಿಸಿ. ಇಲ್ಲಿಯವರೆಗೆ ಬಾಯಿ ಮುಚ್ಚಿಕೊಂಡಿರುವವರು ಈಗ ಯಾಕೆ ಬಾಯಿ ಬಡಿದುಕೊಳ್ಳುತ್ತಿದ್ದೀರಿ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಧಿಕಾರಕ್ಕೆ ಬಂದು ಮೂರು ಮುಕ್ಕಾಲು ವರ್ಷ ತೆಪ್ಪಗಿದ್ದ ಬಿಜೆಪಿ ನಾಯಕರು ಈಗ ಯಾಕೆ ಈ ಆರೋಪ ಮಾಡುತ್ತಿದ್ದಾರೆಂದು ಅರ್ಥಮಾಡಿಕೊಳ್ಳುವಷ್ಟು ರಾಜ್ಯದ ಜನ ಪ್ರಬುದ್ದರಿದ್ದಾರೆ. ತಮ್ಮ ಮೈತುಂಬಾ ಮೆತ್ತಿಕೊಂಡಿರುವ ಕಳಂಕ ತೊಡೆದು ಹಾಕಲು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎನ್ನುವುದು ಜನರಿಗೆ ತಿಳಿದಿದೆ ಎಂದು ತಿರುಗೇಟು ನೀಡಿದ್ದಾರೆ.

ಮಾತುಮಾತಿಗೆ ಧಮ್, ತಾಖತ್ ಎಂದು ಬೊಬ್ಬಿಡುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧದ ಭ್ರಷ್ಟಾಚಾರದ ಬಗ್ಗೆ ಇಲ್ಲಿಯ ವರೆಗೆ ತನಿಖೆ ಮಾಡದೆ ಸುಮ್ಮನಿದ್ದುದು ಯಾಕೆ? ಧಮ್ ತಾಖತ್ ಇರಲಿಲ್ಲವೇ?. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವ ಸ್ಥಾನವೂ ಸೇರಿದಂತೆ ಹಲವು ಅಧಿಕಾರ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. 13 ಬಜೆಟ್ ಮಂಡಿಸಿದ್ದೇನೆ. ಇಲ್ಲಿಯವರೆಗೆ ಯಾರಾದರೂ ಒಬ್ಬ ಗುತ್ತಿಗೆದಾರ ನನ್ನ ವಿರುದ್ಧ ಲಂಚದ ಆರೋಪ ಮಾಡಿದ್ದಾರೆಯೇ? ನನ್ನ ರಾಜಕೀಯ ಜೀವನ ತೆರೆದ ಕನ್ನಡಿ ಎಂದು ಅವರು ಸ್ಪಷ್ಟಣೆ ನೀಡಿದ್ದಾರೆ.

ಸಚಿವ ಸುಧಾಕರ್ ನನ್ನ ವಿರುದ್ಧ 35 ಸಾವಿರ ಕೋಟಿ ರೂ.ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಕೊರೋನ ಕಾಲದಲ್ಲಿ ಮಾಸ್ಕ್, ಸ್ಯಾನಿಟೈಸರ್ ಬಿಡದೆ ಖಜಾನೆ ಲೂಟಿ ಮಾಡಿದವರು ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಹಾಸ್ಯ ಪ್ರಸಂಗದಂತೆ ಕಾಣುತ್ತಿದೆ. ಸುಧಾಕರ್ ಮೊದಲು ನಾವು ಬಯಲು ಮಾಡಿದ ಸುಮಾರು 5 ಸಾವಿರ ಕೋಟಿ ರೂ.ಮೊತ್ತದ ಕೊರೋನ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿ. ಆಕ್ಸಿಜನ್, ಇಲ್ಲದೆ ಚಾಮರಾಜನಗರದಲ್ಲಿ 24 ಅಮಾಯಕ ವ್ಯಕ್ತಿಗಳು ಕಳೆದುಕೊಂಡ ಪ್ರಾಣ ಹತ್ಯೆಗೆ ಸಮನಾದುದು. ಇದರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದರೆ ಸುಧಾಕರ್ ಜೈಲಿಗೆ ಹೋಗಬೇಕಾದಿತು ಎಂದು ಅವರು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್‍ಗೆ ರಾಜ್ಯದಿಂದ ನಾವು ದುಡ್ಡು ಕೊಟ್ಟಿದ್ದೆವು ಎಂದು ಸುಧಾಕರ್ ಆರೋಪ ಮಾಡಿದ್ದಾರೆ. ಯಾರು, ಯಾರಿಗೆ ದುಡ್ಡು ಕೊಟ್ಟಿದ್ದರು ಎನ್ನುವುದನ್ನು ಅನಂತಕುಮಾರ್ ಮತ್ತು ಯಡಿಯೂರಪ್ಪ ಮಾತನಾಡಿಕೊಂಡಿದ್ದ ವಿಡಿಯೋ ಮೊದಲು ನೋಡಲಿ. ಈಗಿನ ಸರಕಾರದ ಅವಧಿಯಲ್ಲಿ  ವಿಧಾನಸೌಧದ ಗೋಡೆ-ಗೋಡೆಗಳು ಲಂಚ, ಲಂಚ ಎಂದು ಪಿಸುಗುಡುತ್ತಿವೆ ಎಂದು ಅವರು ತಿರುಗೇಟು ನೀಡಿದ್ದಾರೆ.

ಬೀದಿಯಲ್ಲಿ ಜನ ಇದು 40 ಪರ್ಸೆಂಟ್ ಸರಕಾರ ಎಂದು ಗೇಲಿ ಮಾಡುತ್ತಿದ್ದಾರೆ. ಸರಕಾರಿ ಕಾಮಗಾರಿ ನಡೆಸುವವರೇ ಸರಕಾರದ ವಿರುದ್ಧ ಲಂಚದ ಆರೋಪ ಮಾಡುತ್ತಿರುವುದು ದೇಶದಲ್ಲಿಯೇ ಮೊದಲ ಪ್ರಕರಣ. ಲಂಚಕ್ಕಾಗಿ ಪೀಡಿಸುವ ಸಚಿವ-ಶಾಸಕರಿಂದ ಬೇಸತ್ತು ಗುತ್ತಿಗೆದಾರರು ಮತ್ತು ವರ್ಗಾವಣೆಯಲ್ಲಿ ದುಡ್ಡು ಕಳೆದುಕೊಂಡು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಇದೊಂದು ಕೊಲೆಗಡುಕ ಸರಕಾರವಲ್ಲದೆ ಮತ್ತೇನು? ಎಂದು ಅವರು ಪ್ರಶ್ನಿಸಿದ್ದಾರೆ.

ಕೇಂದ್ರದಲ್ಲಿ ಲೋಕಪಾಲ ಕಾಯ್ದೆಯನ್ನು ಜಾರಿಗೆ ತರುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಇಲ್ಲಿಯವರೆಗೆ ಲೋಕಪಾಲರ ನೇಮಕದ ಬಗ್ಗೆ ಬಾಯಿ ಬಿಟ್ಟಿಲ್ಲ ಯಾಕೆ? ಜೈಲಿಗೆ ಹೋಗುವ ಭಯವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Similar News