ಧರ್ಮಗಳ ಮಧ್ಯೆ ದ್ವೇಷ ಹುಟ್ಟಿಸುವ ಸುಳ್ಳು ವಿಡಿಯೋ ಸೃಷ್ಠಿ: ಪ್ರಕಾಶ್ ಮಲ್ಪೆ ವಿರುದ್ಧ ಪ್ರಕರಣ ದಾಖಲು

Update: 2023-01-27 13:52 GMT

ಮಲ್ಪೆ: ಹಿಂದೂ ಮತ್ತು ಮುಸ್ಲಿಂ ಧರ್ಮದವರ ಮಧ್ಯೆ ದ್ವೇಷ ಭಾವನೆ ಹುಟ್ಟುವಂತೆ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಸುಳ್ಳು ಮಾಹಿತಿಯ ವಿಡಿಯೋ ಹರಿಬಿಟ್ಟ ಪ್ರಕಾಶ್ ಮಲ್ಪೆ ವಿರುದ್ಧ ಮಲ್ಪೆ ಕೊಳದ ಮಂಜುನಾಥ್ ಸಾಲ್ಯಾನ್ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ಉಡುಪಿಯಲ್ಲಿ ಮತ್ತು ಸೈಂಟ್ ಮೆರಿಸ್ ದ್ವೀಪದಲ್ಲಿ ನಡೆದಿದ್ದ ಘಟನೆಗಳ ವಿಡಿಯೋಗಳನ್ನು ಎಡಿಟ್ ಮಾಡಿದ್ದು, ಈ ಎರಡು ಘಟನೆಗಳಿಗೂ ಹಾಗೂ ಮಲ್ಪೆ ಸೈಂಟ್ ಮೆರಿಸ್ ದ್ವೀಪದ ಪ್ರವಾಸಿ ಸಂಸ್ಥೆ ಹಾಗೂ ಕೆಲಸಗಾರರ ಜೊತೆ ನನಗೆ ಯಾವುದೇ ಸಂಬಂಧ ಇಲ್ಲದಿದ್ದರೂ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರ ಮಧ್ಯ ದ್ವೇಷ ಭಾವನೆ ಹುಟ್ಟುವಂತೆ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಸುಳ್ಳು ಮಾಹಿತಿಯನ್ನು ಪ್ರಕಾಶ ಮಲ್ಪೆ ಎಂಬಾತ ತನ್ನ ವ್ಯಾಟ್ಸ ಆ್ಯಪ್ ಮೂಲಕ ಸಾರ್ವಜನಿಕವಾಗಿ ಹರಿಯಬಿಟ್ಟು ವೈರಲ್ ಮಾಡಿ ನನ್ನ ತೆಜೋವಧೆೆಗೆ ಪ್ರಯತ್ನಿಸಿರುವುದಾಗಿ ಮಂಜುನಾಥ್ ವಿ.ಸಾಲ್ಯಾನ್ ದೂರಿದ್ದಾರೆ.

ಈ ಬಗ್ಗೆ ಅವರಲ್ಲಿ ಜ.25ರಂದು ಮಲ್ಪೆ ಕೊಳ ಎಂಬಲ್ಲಿ ಪ್ರಶ್ನೆ ಮಾಡಲು ಹೋದಾಗ ಪ್ರಕಾಶ ಮಲ್ಪೆ, ವಿಡಿಯೋ ಮಾಡಿರುವುದು ನನ್ನ ಮೊಬೈಲ್‌ನಲ್ಲಿ ಮತ್ತು ಇದು ನನ್ನ ಇಷ್ಟ ಎಂದು ಹೇಳಿ ಮಲ್ಪೆ ಪರಿಸರದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಮಂಜುನಾಥ್ ಸಾಲ್ಯಾನ್‌ಗೆ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ರೀತಿ ವರ್ತಿಸಿರುವ ಪ್ರಕಾಶ ಮಲ್ಪೆ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ಪ್ರಕಾಶ್ ಮಲ್ಪೆ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 505(5), 504, 506  ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Similar News