ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಸಿಎಂ ಬೊಮ್ಮಾಯಿ ಭರವಸೆ
ವಿಜಯಪುರ, ಫೆ. 4: ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ನೀಡಬೇಕೆಂಬ ಬೇಡಿಕೆ ಇದ್ದು, ಈ ಬಾರಿಯ ಬಜೆಟ್‍ನಲ್ಲಿ ಇದಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿರುವ 37ನೆ ಪತ್ರಕರ್ತರ ಸಮ್ಮೇಳನದಲ್ಲಿ ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್, ಸುದ್ದಿ ವಾಚಕಿ ಸುಕನ್ಯಾ, ಸಿಎಂ ಮಾಧ್ಯಮ ಸಂಯೋಜಕ ಶಂಕರ ಪಾಗೋಜಿ ಅವರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ನಿವೃತ್ತ ಪತ್ರಕರ್ತರ ಮಾಸಾಸನ ಹೆಚ್ಚಳಕ್ಕೂ ಬಜೆಟ್‍ನಲ್ಲಿ ಅವಕಾಶ ಕಲ್ಪಿಸಲಾಗುವುದು. ಪತ್ರಕರ್ತರ ಭವನಗಳ ನಿರ್ವಹಣೆ ಪತ್ರಕರ್ತರಿಗೆ ನೀಡಲು ಕ್ರಮ ವಹಿಸಲಾಗುವುದು. ಇಲ್ಲವಾದರೆ ಸರಕಾರವೇ ಆ ಜವಾಬ್ದಾರಿಯನ್ನು ನಿರ್ವಹಿಸಲಿದೆ ಎಂದ ಅವರು, ಪತ್ರಕರ್ತರು ಪ್ರದೇಶಗಳಿಗೆ ಸೀಮಿತವಾಗದೆ ಅಖಂಡ ಕರ್ನಾಟಕದ ಭಾಗಬೇಕು. ಆಗ ಮಾತ್ರ ರಾಜ್ಯದ ಗಟ್ಟಿ ಧ್ವನಿ ಎಲ್ಲೆಡೆ ಕೇಳುತ್ತದೆ ಎಂದು ಸಲಹೆ ನೀಡಿದರು.
ಅವಿನಾಭಾವ ಸಂಬಂಧ: ಪತ್ರಕರ್ತರು ಹಾಗೂ ರಾಜಕಾರಣಿಗಳದ್ದು ಅವಿನಾಭಾವ ಸಂಬಂಧ. ಪರಸ್ಪರರನ್ನು ಬಿಟ್ಟು ಕೆಲಸ ಮಾಡಲಾಗುವುದಿಲ್ಲ. ತಮ್ಮ ಅಭಿಪ್ರಾಯಗಳ ಮೂಲಕ ನಮ್ಮ ವ್ಯಕ್ತಿತ್ವ ರೂಪಿಸಲು ಪತ್ರಕರ್ತರು ಕಾರಣ. ರಾಜಕಾರಣಿಗಳು ಇಲ್ಲದಿದ್ದರೆ, ಪತ್ರಿಕೆಗಳನ್ನು ಯಾರೂ ಓದುತ್ತಿರಲಿಲ್ಲ ಎಂದರು.
ರಾಜಕಾರಣಿಗಳು ಮತ್ತು ಪತ್ರಕರ್ತರ ನಡುವೆ ಆರೋಗ್ಯಕರ ಸಂಬಂಧವಿದ್ದರೆ ಆಡಳಿತ ಉತ್ತಮವಾಗಿರುತ್ತದೆ. ಪತ್ರಿಕೋದ್ಯಮ ಬಹಳಷ್ಟು ಬದಲಾವಣೆ ಕಂಡಿದೆ. ಪ್ರತಿಯೊಬ್ಬ ಓದುಗನೂ ಪರ್ತಕರ್ತನಾಗಿದ್ದಾನೆ. ಇಂತಹ ಸಂದರ್ಭದಲ್ಲಿ ಪತ್ರಿಕೋದ್ಯಮವನ್ನು ಉಳಿಸಿಕೊಂಡು ಪರ್ತಕರ್ತರ ವೃತ್ತಿಯನ್ನು ಗಟ್ಟಿಗೊಳಿಸುವುದು ಸವಾಲಿನ ಕೆಲಸ ಎಂದು ಅವರು ನುಡಿದರು.
ದೇಶಕ್ಕೆ ಅನ್ನ ನೀಡುವ ರಾಜ್ಯ ಆಗಬೇಕು: ‘ಕರ್ನಾಟಕ, ಇಡೀ ದೇಶಕ್ಕೆ ಅನ್ನ ನೀಡುವ ರಾಜ್ಯವಾಗುವ ನಿಟ್ಟಿನಲ್ಲಿ ಆ ಕನಸಿನ ಈಡೇರಿಕೆಗೆ ನಾವೆಲ್ಲರೂ ಬದ್ಧರಾಗಿ ಕೆಲಸ ಮಾಡಬೇಕಿದೆ’ ಎಂದ ಅವರು, ಆಡಳಿತ ಮಾಡುವವರಿಗೆ ಸ್ಪಷ್ಟತೆ ಇದ್ದು, ನಮ್ಮ ಕರ್ತವ್ಯ ವ್ಯಾಪ್ತಿಯ ಬಗ್ಗೆ ಅರಿವಿರಬೇಕು. ಜನರಿಗೆ ಒಳಿತು ಮಾಡಲು ಒಂದು ಕಾರಣ ಸಾಕು. ಪ್ರಾದೇಶಿಕವಾಗಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಾಗ ಮಾತ್ರ ಸಮಗ್ರ ಕರ್ನಾಟಕದ ಅಭಿವೃದ್ಧಿ ಸಾಧ್ಯ ಎಂದರು.
ಸಚಿವರಾದ ಸಿ.ಸಿ.ಪಾಟೀಲ್, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಇನ್ನಿತರರು ಹಾಜರಿದ್ದರು.