'ಕರ್ಮ ಬಿಡಲ್ಲ': ರೋಹಿಣಿ ವಿರುದ್ಧ ಡಿ. ರೂಪಾ ಆರೋಪಗಳ ಬೆನ್ನಲ್ಲೇ ಕುಸುಮಾ ಟ್ವೀಟ್

Update: 2023-02-19 17:12 GMT

ಬೆಂಗಳೂರು: ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಸಂಧಾನ ಯತ್ನದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿರುವ ಹಿರಿಯ ಐಪಿಎಸ್‌ ಅಧಿಕಾರಿ ರೂಪಾ ಡಿ ಮೌದ್ಗಿಲ್‌, ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಖಾಸಗಿ ಚಿತ್ರಗಳನ್ನು ಹಿರಿಯ ಐಎಎಸ್‌ ಅಧಿಕಾರಿಗಳಿಗೆ ರೋಹಿನಿ ಕಳಿಸಿದ್ದರು ಎಂದು ಆರೋಪಿಸಿದ್ದಾರೆ. 

ರೂಪಾ ಅವರ ಆರೋಪದ ಕಾವು ತೀವ್ರಗೊಳ್ಳುತ್ತಿದ್ದಂತೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ದಿವಂಗತ ಐಎಎಸ್‌ ಅಧಿಕಾರಿ ಡಿಕೆ ರವಿಯವರ ಪತ್ನಿ ಕುಸುಮಾ ಹನುಮಂತರಾಯಪ್ಪ, “ತಕ್ಷಣ ಅಥವಾ ತಡವಾಗಿ, ಏನೇ ಆದರೂ ಕರ್ಮ ಹಿಂಬಾಲಿಸುತ್ತದೆ.” ಎಂದು ಟ್ವೀಟ್‌ ಮಾಡಿದ್ದಾರೆ. 

ಕುಸುಮಾ ತಮ್ಮ ಟ್ವೀಟ್‌ನಲ್ಲಿ ರೋಹಿಣಿ ಸಿಂಧೂರಿ ಹೆಸರನ್ನು ಉಲ್ಲೇಖಿಸದಿದ್ದರೂ, ರೂಪಾ ಅವರು ಕುಸುಮಾ ಅವರ ಟ್ವೀಟ್‌ ಅನ್ನು ಮರು ಟ್ವೀಟ್‌ ಮಾಡಿದ್ದು, “'ಕುಸುಮಾ, ಒಬ್ಬ ಮಹಿಳೆಯಾಗಿ ನಾನು ನಿಮ್ಮ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ. ಈ ನೋವು ಹಲವು ಮಹಿಳೆಯರದ್ದೂ ಆಗಿದೆ (ಅದರಲ್ಲಿ ಕೆಲವರು ಐಎಎಸ್‌ನಲ್ಲೂ ಇದ್ದಾರೆ) ಆದರೂ ಅಸಹಾಯಕರಾಗಿದ್ದಾರೆ. ಒಂದಲ್ಲ ಒಂದು ದಿನ ಅಪರಾಧಿಯ ವಿರುದ್ಧ (ಅದು ಮಹಿಳೆಯಾಗಿದ್ದರೂ) ಈ ವಿಚಾರದಲ್ಲಿ ನಿಮ್ಮ ಜೊತೆ ಯಾರಾದರೂ ನಿಲ್ಲುತ್ತಾರೆ. 'ಆಕೆ' ಇಂತಹ ಕೆಲಸವನ್ನು ಪುನಃ ಮಾಡದಂತೆ ದೇವರು ಸಹಾನುಭೂತಿ ಮತ್ತು ಸದ್ಬುದ್ದಿ ನೀಡಲಿ” ಎಂದು ಬರೆದುಕೊಂಡಿದ್ದಾರೆ. 

ಡಿಕೆ ರವಿ ಆತ್ಮಹತ್ಯೆಯಲ್ಲಿ ಸಿಂಧೂರಿ ವಿರುದ್ಧ ಗಂಭೀರ ಆರೋಪಗಳಿದ್ದ ಹಿನ್ನೆಲೆಯಲ್ಲಿ ಕುಸುಮಾ ಅವರು ರೋಹಿಣಿ ವಿರುದ್ಧವೇ ಈ ಟ್ವೀಟ್‌ ಮಾಡಿದ್ದಾರೆ ಎಂಬ ಅನುಮಾನಗಳು ಎದ್ದಿದ್ದವು. ರೂಪಾರವರು ಈ ಟ್ವೀಟನ್ನು ಮರು ಟ್ವೀಟ್‌ ಮಾಡುವುದರೊಂದಿಗೆ ಆ ಅನುಮಾನಕ್ಕೆ ಇನ್ನಷ್ಟು ಪುಷ್ಠಿ ನೀಡಿದ್ದಾರೆ. 

Full View

Similar News