ಕೊಳ್ಳೇಗಾಲದ ಕವಿ ಬಿ.ಎಂ. ಮಂಜುನಾಥ್ ಜೋಗುಳ ಹಾಡಿಗೆ ಮನ್ ಕಿ ಬಾತ್‌ನಲ್ಲಿ ಮೋದಿ ಶ್ಲಾಘನೆ
ಚಾಮರಾಜನಗರ: ರವಿವಾರ ಪ್ರಸಾರವಾದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಯ ಕೊಳ್ಳೇಗಾಲದ ಕವಿ ಬಿ.ಎಂ. ಮಂಜುನಾಥ್ ಹೆಸರನ್ನು ಪ್ರಸ್ತಾಪಿಸಿ, ಅವರು ಬರೆದಿರುವ ಜೋಗುಳ ಹಾಡನ್ನು ಶ್ಲಾಘಿಸಿದ್ದಾರೆ.
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾದ ಏಕಾತಾ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಜೋಗುಳ ಹಾಡು ಬರೆಯುವ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿ.ಎಂ.ಮಂಜುನಾಥ್ ಪಡೆದಿದ್ದಾರೆ. ಅವರು ಕನ್ನಡದಲ್ಲಿ ಬರೆದಿರುವ ‘ಮಲಗು ಕಂದ’ ಜೋಗುಳ ಪದ ಮೊದಲ ಪುರಸ್ಕಾರಕ್ಕೆ ಆಯ್ಕೆಯಾಗಿದೆ ಎಂದು ಮೋದಿ ಹೇಳಿದರು.
ಏಕತಾ ದಿವಸದ ಅಂಗವಾಗಿ ಭಕ್ತಿಗೀತೆ, ಜೋಗುಳಪದ (ಲಾಲಿ ಹಾಡು) ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ದೇಶದಾದ್ಯಂತ ಐದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ಮೋದಿ ಅವರು ಮನ್ ಕಿ ಬಾತ್‌ನಲ್ಲಿ ಹೇಳಿದರು.
ಮಾತಿನ ನಡುವೆ ಮಂಜುನಾಥ್ ಅವರು ರಚಿಸಿರುವ ಹಾಡಿನ ಎರಡು ಸಾಲುಗಳನ್ನೂ ಪ್ರಸಾರ ಮಾಡಲಾಗಿದೆ.
ಸಂತಸ: ವೃತ್ತಿಯಲ್ಲಿ ವಿಮಾ ಸಲಹೆಗಾರರಾಗಿರುವ ಎಂ.ಬಿ.ಮಂಜುನಾಥ್(59) ಅವರು ಕೊಳ್ಳೆಗಾಲ ತಾಲೂಕಿನ ಬಾಳಗುಣಸೆಯವರು. ಕವಿ, ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಎಲೆಮರೆಯಂತಿರುವ ಸಾಹಿತಿಗಳನ್ನು ಗುರುತಿಸುವುದಕ್ಕಾಗಿ ಕೊಳ್ಳೇಗಾಲದಲ್ಲಿ ಸಮಾನಮನಸ್ಕರು ಸೇರಿ ಸಾಹಿತ್ಯ ಮಿತ್ರಕೂಟ ಎಂಬ ಸಂಖ್ಯೆಯನ್ನು ಕಟ್ಟಿಕೊಂಡಿದ್ದು, ಅದರಲ್ಲಿ ಮಂಜುನಾಥ್ ಖಜಾಂಚಿಯಾಗಿದ್ದಾರೆ.
ತಾವು ರಚಿಸಿರುವ ಗೀತೆಗೆ ರಾಷ್ಟ್ರಮಟ್ಟದಲ್ಲಿ ಮೊದಲ ಬಹುಮಾನ ಬಂದಿರುವುದಕ್ಕೆ ಮತ್ತು ಪ್ರಧಾನಿ ಮೋದಿ ಅವರು ಅದನ್ನು ಘೋಷಣೆ ಮಾಡಿರುವುದಕ್ಕೆ ಅವರುಸಂತಸ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಸ್ಪರ್ಧೆ ಆಯೋಜಿಸಿತ್ತು. ನಾನು ಬರೆದಿದ್ದ ‘ಮಲಗು ಕಂದ’ ಹಾಡನ್ನು ನಾಲ್ಕು ತಿಂಗಳ ಹಿಂದೆ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಿದ್ದೆ. ಅದಕ್ಕೆ ಬಹುಮಾನ ಬಂದಿರುವುದು ತುಂಬಾ ಖುಷಿ ನೀಡಿದೆ ಎಂದು ಅವರು ಹೇಳಿದರು.
ವಿಮಾ ಸಲಹೆಯ ವೃತ್ತಿಯ ನಡುವೆಯೂ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿರುವ ಮಂಜುನಾಥ್, ಚಿತ್ತ ಚಿತ್ತಾರದ ಹೂವು ಎಂಬ ಕವನ ಸಂಕಲನ ಹೊರತಂದಿದ್ದಾರೆ. ಶಾಪ ಎಂಬ ನಾಟಕವನ್ನೂ ಬರೆದಿದ್ದಾರೆ. ಇನ್ನೂ ಕೆಲವು ಕೃತಿಗಳು ಪ್ರಕಟನೆಗೆೆ ಬಾಕಿ ಇವೆ.
ಇದೇ ಹಾಡಿಗೆ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ, ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಸಿಕ್ಕಿತ್ತು. ಅಲ್ಲಿಂದ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿತ್ತು. ಬಹುಮಾನದ ಮೊತ್ತ 6 ಲಕ್ಷ ರೂ. ಎಂದು ಮಾಹಿತಿ ನೀಡಿದರು.