ಲೇಖಕಿ ಬಿ.ಎಂ.ರೋಹಿಣಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ

Update: 2023-03-08 13:09 GMT

ಉಡುಪಿ, ಮಾ.8: ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸಮುಳಿಯ ತಿಮ್ಮಪ್ಪಯ್ಯರ ನೆನಪಿನಲ್ಲಿ ನೀಡಲಾ ಗುವ ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ’ಗೆ  ಹಿರಿಯ ಲೇಖಕಿ  ಬಿ.ಎಂ. ರೋಹಿಣಿ ಅವರು ಆಯ್ಕೆಯಾಗಿದ್ದಾರೆ.

ಖ್ಯಾತ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಅಧ್ಯಕ್ಷರಾಗಿರುವ ಆಯ್ಕೆ ಸಮಿತಿ ಈ ಆಯ್ಕೆ ಮಾಡಿದೆ.ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಈ ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್  25ರಂದು ನಡೆಯಲಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬಂಗ್ರಮಂಜೇಶ್ವರದಲ್ಲಿ ಜನಿಸಿದ ಬಿ.ಎಂ ರೋಹಿಣಿ,ಪ್ರಸ್ತುತ ಮಂಗಳೂರು ಕುಡುಪುನಲ್ಲಿ ನೆಲೆಸಿದ್ದಾರೆ. ಇವರು ಟಿಸಿಎಚ್, ಹಿಂದಿ ಪ್ರವೀಣ್  ಹಾಗೂ ಕನ್ನಡ ಸ್ನಾತಕೋತ್ತರ ಪದವೀಧರೆಯಾಗಿದ್ದು, ಸುಮಾರು 30 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ, ಸಂಶೋಧನೆ ಹಾಗೂ ಬರಹ ಇವರ ಆಸಕ್ತಿಯ ಕ್ಷೇತ್ರಗಳು. 

ಇವರ ಹಲವಾರು  ಕಥಾಸಂಕಲನಗಳು, ಕವನ ಸಂಕಲನಗಳು ಹಾಗೂ ವ್ಯಕ್ತಿಚಿತ್ರಣಗಳ ಕೃತಿಗಳು ಪ್ರಕಟ ಗೊಂಡಿವೆ. ಸಂಶೋಧನೆಯ ಕ್ಷೇತ್ರದ ಇವರ ಮುಖ್ಯ ಕೃತಿಗಳು ‘ತುಳುನಾಡಿನ ಮಾಸ್ತಿಕಲ್ಲುಗಳು-ವೀರಗಲ್ಲು ಗಳು’, ‘ವೇಶ್ಯಾವಾಟಿಕೆಯ ಕಥೆ-ವ್ಯಥೆ’, ‘ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಹೋರಾಟದ ದಾಖಲೀಕರಣ’ ಇತ್ಯಾದಿ. ಅವರ ‘ಅಧ್ಯಾಪಿಕೆಯ ಅಧ್ವಾನಗಳು’ ಅನುಭವ ಕಥನ, ‘ನಾಗಂದಿಗೆಯೊಳಗಿಂದ’ ಆತ್ಮಕಥನ ಕೃತಿಗಳು ಕನ್ನಡಕ್ಕೆ ಶಿಷ್ಟ ಕೊಡುಗೆಗಳಾಗಿವೆ. ಇವರ ‘ನಾಗಂದಿಗೆಯೊಳಗಿಂದ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರಕಿದೆ.

Similar News