ಅಥಣಿ ಬಿಟ್ಟುಕೊಡಲ್ಲ, ಮಹೇಶ್ ಕುಮಟಳ್ಳಿಗೆ ರಮೇಶ್ ಗೋಕಾಕ್ ಬಿಟ್ಟು ಕೊಡಲಿ: ಲಕ್ಷ್ಮಣ್ ಸವದಿ ಪುತ್ರ ತಿರುಗೇಟು

Update: 2023-03-12 10:04 GMT

ಬೆಳಗಾವಿ: ಜಿಲ್ಲೆಯ ಅಥಣಿ ವಿಧಾನಸಭೆ ಕ್ಷೇತ್ರದಿಂದಮಹೇಶ ಕುಮಟಳ್ಳಿಗೆ ಟಿಕೆಟ್ ಸಿಗದಿದ್ದರೆ ತಾವು ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ’ ಎಂಬ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೇಳಿಕೆಗೆ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪುತ್ರ ತಿರುಗೇಟು ನೀಡಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಚಿದಾನಂದ ಸವದಿ, 'ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಂದೆ ಲಕ್ಷ್ಮಣ ಸವದಿ ಅವರು ಅಥಣಿಯಿಂದಲೇ ಸ್ಪರ್ಧಿಸುವುದು ಖಚಿತ' ಎಂದು ಸ್ಪಷ್ಟಪಡಿಸಿದರು. 

''2019ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕ್ಷೇತ್ರವನ್ನು ಬೇರೆಯವರಿಗೆ ಬಿಟ್ಟುಕೊಡುವ ಪ್ರಸಂಗ ಬಂತು. ಕ್ಷೇತ್ರದ ಸಾವಿರಾರು ಕಾರ್ಯಕರ್ತರು, ಮುಖಂಡರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅವರೇ ಸ್ಪರ್ಧಿಸಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಕೆಲ ರಾಜಕೀಯ ನಾಯಕರ ವೈಯಕ್ತಿಕ ಹೇಳಿಕೆಗಳಿಂದ ಗೊಂದಲ ಆಗುತ್ತಿದೆ. ಆದರೆ ಬೇರೆಯವರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ'' ಎಂದು ಹೇಳಿದರು. 

''ರಮೇಶ್ ಜಾರಕಿಹೊಳಿ ಅವರಿಗೆ ತಮ್ಮ ಸ್ನೇಹಿತ ಮಹೇಶ್ ಕುಮಟಳ್ಳಿ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ, ತಾವು ಪ್ರತಿನಿಧಿಸುತ್ತಿರುವ ಗೋಕಾಕ್ ಕ್ಷೇತ್ರವನ್ನೇ ಬಿಟ್ಟುಕೊಡಲಿ. ನಾವು ಅಥಣಿ ಕ್ಷೇತ್ರ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ'' ಎಂದು ತಿರುಗೇಟು ನೀಡಿದರು. 

Similar News