ನೀರೆಂಬ ಅಮೃತ ಮತ್ತು ನಮ್ಮ ಹೊಣೆಗಾರಿಕೆ

ಇಂದು ವಿಶ್ವ ಜಲ ದಿನ

Update: 2023-03-22 07:36 GMT

ಇಂದು ಮೂವರಲ್ಲಿ ಒಬ್ಬರಿಗೆ ಶುದ್ಧ ಕುಡಿಯುವ ನೀರಿನ ಅಲಭ್ಯತೆ ಇದೆ. 2050ರ ಹೊತ್ತಿಗೆ, ವರ್ಷಕ್ಕೆ ಕನಿಷ್ಠ ಒಂದು ತಿಂಗಳಾದರೂ 570 ಕೋಟಿ ಜನರು ಕುಡಿಯುವ ನೀರಿನ ತೊಂದರೆ ಎದುರಿಸಬೇಕಾಗಿ ಬರಬಹುದು.

ನೀರೆಂಬುದು ಅಮೃತ. ಪ್ರತಿಯೊಂದು ಜೀವಿಗೂ ಬದುಕಲು ನೀರು ಬೇಕು. ಹಾಗಾಗಿಯೇ ನೀರಿನ ಒಂದೊಂದು ಹನಿಯೂ ಮಹತ್ವದ್ದು. ಭೂಮಿಯ ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿದ್ದರೂ, ಜೀವನಾಧಾರವಾದ ಕುಡಿಯುವ ನೀರಿನ ಪ್ರಮಾಣ ಅತ್ಯಲ್ಪ. ಈ ಕಾರಣಕ್ಕಾಗಿಯೇ ನೀರಿನ ಸಂರಕ್ಷಣೆ ಬಹಳ ಅಗತ್ಯ ಮತ್ತು ಅದು ನಮ್ಮೆಲ್ಲರ ಜವಾಬ್ದಾರಿ.

ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಶುದ್ಧ ನೀರಿನ ಮೂಲಗಳ ಅತಿಬಳಕೆಯ ಪರಿಣಾಮವಾಗಿ ಜಗತ್ತಿನಾದ್ಯಂತ ಅನೇಕ ದೇಶಗಳು ನೀರಿನ ಕೊರತೆ ಎದುರಿಸುತ್ತಿವೆ. ಇದಕ್ಕಾಗಿಯೇ ನೀರಿನ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತೀ ವರ್ಷ ಮಾರ್ಚ್ 22ನ್ನು ವಿಶ್ವ ಜಲದಿನವೆಂದು ಆಚರಿಸಲಾಗುತ್ತದೆ. ಎಲ್ಲರಿಗೂ ನೀರು ಮತ್ತು ನೈರ್ಮಲ್ಯ ಉದ್ದೇಶದಡಿ ವಿಶ್ವಸಂಸ್ಥೆ ಹಮ್ಮಿಕೊಂಡಿರುವ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಬಲ ತುಂಬಲು ಈ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ.

ಹಾಗೆ ನೋಡಿದರೆ, ಇದು ಒಂದು ದಿನದ ಹೊಣೆಗಾರಿಕೆಯಲ್ಲ. ಪ್ರತಿದಿನವೂ ಪ್ರತಿ ಕ್ಷಣವೂ ನಿರ್ವಹಿಸಬೇಕಾದ ಹೊಣೆಗಾರಿಕೆ. ಕುಡಿಯುವ ನೀರಿನ ಬಹುಮುಖ್ಯ ಮೂಲವಾದ ಅಂತರ್ಜಲ ರಕ್ಷಣೆ ಕೂಡ ನಮ್ಮ ಹೊಣೆಗಾರಿಕೆಯ ಭಾಗವಾಗಿದೆ. ಯುನೆಸ್ಕೊ ಪ್ರಕಾರ, ಅಂತರ್ಜಲ ಸಾರ್ವಜನಿಕ ಅಥವಾ ಖಾಸಗಿ ಪೂರೈಕೆ ಮಾರ್ಗಗಳ ಮೂಲಕ ಸಿಹಿನೀರನ್ನು ಪಡೆಯದ ಜನಸಂಖ್ಯೆಗೆ ಕುಡಿಯುವ ನೀರನ್ನು ಒಳಗೊಂಡಂತೆ ಜಾಗತಿಕವಾಗಿ ದೇಶೀಯ ಬಳಕೆಗಾಗಿ ಪಡೆಯುವ ನೀರಿನ ಒಟ್ಟು ಪರಿಮಾಣದ ಅರ್ಧದಷ್ಟು ಒದಗಿಸುತ್ತದೆ.

ಬದಲಾಗುತ್ತಿರುವ ಹವಾಮಾನ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಜಗತ್ತು ಹೊಂದಿಕೊಳ್ಳುವುದರಿಂದ, ಆಹಾರ ಮತ್ತು ಕುಡಿಯುವ ನೀರಿನ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವಲ್ಲಿ ಅಂತರ್ಜಲ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜಗತ್ತಿನಲ್ಲಿ ಕುಡಿಯುವ ನೀರಿನ ಅರ್ಧದಷ್ಟು ಪ್ರಮಾಣದ ಮೂಲ ಅಂತರ್ಜಲ. ಆದರೂ ಅಸಮರ್ಪಕ ನಿರ್ವಹಣೆ ಮತ್ತು ಕೆಲವೊಮ್ಮೆ ಬದಲಾಯಿಸಲಾಗದ ಮಾಲಿನ್ಯದಂಥ ಕಾರಣದಿಂದಾಗಿ ಈ ಅಮೂಲ್ಯ ಸಂಪನ್ಮೂಲ ಗಂಭೀರ ಅಪಾಯಗಳನ್ನು ಎದುರಿಸುತ್ತಿದೆ ಎನ್ನುತ್ತವೆ ಮೂಲಗಳು.

ಅಂತರ್ಜಲದ ಸಂರಕ್ಷಣೆ, ಸುಸ್ಥಿರ ಬಳಕೆ ಹಾಗೂ ಅಂತರ್ಜಲ ಪ್ರಮಾಣ ಹೆಚ್ಚಿಸಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯ. ಹಾಗಾಗಿ ನೀರಿನ ಅಭಾವ, ಕಲುಷಿತಗೊಳಿಸುವಿಕೆ, ಹವಾಮಾನದ ಮೇಲಿನ ಪರಿಣಾಮ ಹೀಗೆ ಒಟ್ಟಾರೆಯಾಗಿ ನೀರಿನ ಕುರಿತು ಜನರಲ್ಲಿ ತಿಳುವಳಿಕೆ ನೀಡುವುದು ಹಾಗೂ 2030ರ ವೇಳೆಗೆ ಜಗತ್ತಿನಾದ್ಯಂತ ಪ್ರತಿಯೊಬ್ಬರಿಗೂ ಸ್ವಚ್ಛ ಕುಡಿಯುವ ನೀರೊದಗಿಸುವುದು, ನೈರ್ಮಲ್ಯ ಕಾಪಾಡುವುದು ಜಲ ದಿನಾಚರಣೆಯ ಮುಖ್ಯ ಗುರಿ.

ಇಂದು ವಿಶ್ವದೆದುರು ಎಂಥ ಗಂಭೀರ ಸ್ಥಿತಿ ಇದೆಯೆನ್ನುವುದನ್ನು ತಿಳಿಯಲು ಈ ಸಂಗತಿಗಳನ್ನು ಗಮನಿಸಬೇಕು:

ಇಂದು ಮೂವರಲ್ಲಿ ಒಬ್ಬರಿಗೆ ಶುದ್ಧ ಕುಡಿಯುವ ನೀರಿನ ಅಲಭ್ಯತೆ ಇದೆ. 2050ರಷ್ಟೊತ್ತಿಗೆ, ವರ್ಷಕ್ಕೆ ಕನಿಷ್ಠ ಒಂದು ತಿಂಗಳಾದರೂ 570 ಕೋಟಿ ಜನರು ಕುಡಿಯುವ ನೀರಿನ ತೊಂದರೆ ಎದುರಿಸಬೇಕಾಗಿ ಬರಬಹುದು. ಸ್ವಚ್ಛತೆ, ಶುದ್ಧ ನೀರು, ಶುದ್ಧ ಹವಾಮಾನವಿದ್ದರೆ ಪ್ರತೀ ವರ್ಷ 3,60,000 ಶಿಶುಗಳನ್ನು ಉಳಿಸಿಕೊಳ್ಳಬಹುದು. 2040ರ ಹೊತ್ತಿಗೆ ಜಾಗತಿಕ ಇಂಧನ ಬೇಡಿಕೆ ಶೇ.25ಕ್ಕಿಂತ ಹೆಚ್ಚಾಗಲಿದೆ ಮತ್ತು ನೀರಿನ ಬೇಡಿಕೆ ಶೇ.50ಕ್ಕಿಂತ ಹೆಚ್ಚಾಗುತ್ತದೆ. ವಿಶ್ವದಲ್ಲಿ ಶೇ.50ರಷ್ಟು ಶಾಲೆಗಳಲ್ಲಿ ಕೈತೊಳೆಯಲು ಸೋಪು ಹಾಗೂ ನೀರಿನ ಸೌಲಭ್ಯಗಳಿಲ್ಲ. ಸ್ವಚ್ಛತೆ ಇರದಿರುವುದು ಹಾಗೂ ಅಸುರಕ್ಷಿತ ಕುಡಿಯುವ ನೀರಿನಿಂದಾಗಿ ಮಕ್ಕಳು ಅತಿಸಾರ ಸೇರಿದಂತೆ ಇತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

2-3 ದಶಕಗಳ ಬಳಿಕ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆ ಊಹಿಸುವುದೂ ಕಷ್ಟ. ಮುಂದಿನ ದಶಕಗಳಲ್ಲಿ ಪ್ರಪಂಚದ ಶೇ.50ರಷ್ಟು ಜನತೆಗೆ ಶುದ್ಧ ಕುಡಿಯುವ ನೀರನ್ನು ನಿತ್ಯ ಒದಗಿಸುವುದು ಸಾಧ್ಯವೇ ಇಲ್ಲ ಎಂದು ಕೆಲ ಅಧ್ಯಯನಗಳು ಅಂದಾಜಿಸಿವೆ. ಇಂತಹ ಸವಾಲಿನ ಹೊತ್ತಿನಲ್ಲಿ ಎಲ್ಲರಿಗೂ ನೀರು ಎಂಬ ಗುರಿಯೊಂದಿಗೆ ವಿಶ್ವಸಂಸ್ಥೆ ಹೆಜ್ಜೆ ಇಡುತ್ತಿದೆ. ಕಡಿಮೆಯಾಗುತ್ತಿರುವ ಸಿಹಿ ನೀರಿನ ಪ್ರಮಾಣ, ಮಿತಿ ಮೀರಿದ ನೀರಿನ ಬಳಕೆ ಹಾಗೂ ಮುಂದಿನ ಪೀಳಿಗೆಗೆ ಶುದ್ಧ ಕುಡಿಯುವ ನೀರನ್ನು ಉಳಿಸುವ ಬಗ್ಗೆ ಪ್ರಪಂಚದಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

300 ವರ್ಷಗಳ ಈಚಿನ ಅಂಕಿ ಅಂಶ ಗಮನಿಸಿದರೆ ನೀರಿನ ಬಳಕೆಯ ಪ್ರಮಾಣ ಶೇ.35ರಷ್ಟು ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕವಾಗಿ ಸುಮಾರು 650 ಕ್ಯುಬಿಕ್ ಕಿ.ಮೀಟರ್ ನೀರಿನ ಅವಶ್ಯಕತೆಯಿದ್ದು, ಶೇ. 60ರಷ್ಟು ಕೃಷಿಗೆ, ಶೇ. 30ರಷ್ಟು ಕೈಗಾರಿಕೆ ಬಳಕೆಗೆ, ಶೇ.10ರಷ್ಟು ಇತರ ಬಳಕೆಗೆ ಉಪಯೋಗವಾಗುತ್ತಿದೆ. ಜನ ಹಾಗೂ ಜೀವಿಗಳು ಕುಡಿಯಲು ಬಳಸುತ್ತಿರುವುದು ಶೇ.1ರಷ್ಟು ನೀರನ್ನು ಮಾತ್ರ. ಭೂಮಿಯ ಮೇಲೆ ಲಭ್ಯ ಇರುವ ಒಟ್ಟು ನೀರಿನಲ್ಲಿ ಶೇ.99ರಷ್ಟು ನೀರು ಮಾನವ ಬಳಕೆಗೆ ಯೋಗ್ಯವಾಗಿಲ್ಲ ಎಂಬುದು ವಾಸ್ತವ.

ವಿಶ್ವ ಜಲದಿನದ ಪರಿಕಲ್ಪನೆ ಮೂಡಿದ್ದು 1992ರಲ್ಲಿ ಬ್ರೆಝಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿಯ ಸಮ್ಮೇಳನದಲ್ಲಿ. ಈ ದಿನವನ್ನು ಆಚರಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ 22 ಡಿಸೆಂಬರ್ 1992ರಂದು ಅಂಗೀಕರಿಸಿತು. ಪ್ರತೀ ವರ್ಷ, ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಿಹಿನೀರಿನ ಸಂಪನ್ಮೂಲಗಳನ್ನು ಸಂರಕ್ಷಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಫಲಕಗಳು, ವಿಚಾರಗೋಷ್ಠಿಗಳು ಮತ್ತು ಚರ್ಚೆಗಳಂತಹ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ವಿಶ್ವ ಜಲದಿನ ಆಚರಿಸಲಾಗುತ್ತದೆ.

Similar News

ಜಗದಗಲ
ಜಗ ದಗಲ