ಸದಾ ರಮ್ಯ, ತಾರುಣ್ಯದ ‘ಸದಾರಮೆ’

Update: 2023-03-31 07:10 GMT

ಕಳೆದ ಶುಕ್ರವಾರ ಹಾಗೂ ಶನಿವಾರ ಬೆಂಗಳೂರಿನ ರಂಗ ಶಂಕರದಲ್ಲಿ ಪ್ರದರ್ಶನಗೊಂಡ ‘ಸದಾರಮೆ’ ನಾಟಕದ ಎರಡೂ ಪ್ರಯೋಗಗಳೂ ಹೌಸ್‌ಫುಲ್ ಆಗಿದ್ದವು. ಹಿರಿಯರೊಂದಿಗೆ ಹೊಸ ತಲೆಮಾರಿನ ಪ್ರೇಕ್ಷಕರೂ ಮುಗಿಬಿದ್ದು ನಾಟಕ ನೋಡಿದರು. ಅದರಲ್ಲೂ ಐಟಿ/ಬಿಟಿಯಲ್ಲಿದ್ದವರ ನಾಟಕಾಸಕ್ತಿ ಗಮನಾರ್ಹ.

ಬೆಳ್ಳಾವೆ ನರಹರಿ ಶಾಸ್ತ್ರಿಗಳ ‘ಸದಾರಮೆ’ ನಾಟಕವನ್ನು, ಹಿರಿಯ ರಂಗ ಕಲಾವಿದರಾದ ಬಿ.ಜಯಶ್ರೀ ಅವರು ನಿರ್ದೇಶಿಸಿ, ತಮ್ಮ ‘ಸ್ಪಂದನ’ ತಂಡದೊಂದಿಗೆ ಪ್ರಸ್ತುತಪಡಿಸಿದರು. ಈ ನಾಟಕದ ಜನಪ್ರಿಯತೆಗೆ ಕಾರಣಗಳು ಅನೇಕ. ಮೊದಲನೆಯದು; ಎವರ್‌ಗ್ರೀನ್ ನಾಟಕವಿದು. ಬೆಳ್ಳಾವೆ ನರಹರಿ ಶಾಸ್ತ್ರಿಗಳು ಈ ನಾಟಕದ ಮೊದಲನೇ ಅಂಕದ ಕಡೆಯಲ್ಲಿ ‘ದೇವಂಮಾಳ್ಕೆ ಕೃಪಾಕಟಾಕ್ಷದೆ ಸದಾರಮಂ ಸದಾನಂದಮಂ’ ಎಂದು ಪ್ರಾರ್ಥಿಸಿಕೊಂಡಿದ್ದಾರೆ. ಅವರ ಪ್ರಾರ್ಥನೆ ಫಲಿಸಿದ ಪರಿಣಾಮ ಈಗಲೂ ಈ ನಾಟಕದ ಜನಪ್ರಿಯತೆ ಕುಗ್ಗಿಲ್ಲ.

ಗುಬ್ಬಿ ಕಂಪೆನಿಯ ಕಾಲದಿಂದಲೂ ಪ್ರಸಿದ್ಧವಾದ ನಾಟಕವಿದು. ಆಗ ಬೆಳಗಿನವರೆಗೂ ನಾಟಕ ಆಡಲಾಗುತ್ತಿತ್ತು. ಎಂಟು ಗಂಟೆಯ ಅವಧಿಯ ಈ ನಾಟಕದಲ್ಲಿ ಕಂದ, ಪದ್ಯ, ವೃತ್ತ ಸೇರಿ ೧೦೪ ಹಾಡುಗಳಿದ್ದವು. ಈಗ ಎರಡೂ ಕಾಲು ಗಂಟೆಗೆ ಸೀಮಿತಗೊಳಿಸಲಾಗಿದೆ.

ಈ ನಾಟಕದ ಮೂಲ ಹೆಸರು ‘ಸದಾರಮಾಂ’. ಬೆಳ್ಳಾವೆ ನರಹರಿ ಶಾಸ್ತ್ರಿಗಳು ಸಂಸ್ಕೃತದಿಂದ ಕನ್ನಡಕ್ಕೆ ‘ಸದಾರಮೆ’ ಎಂದು ತಂದರು. ಯಾವಾಗಲೂ ಸಂತೋಷವಾಗಿರುವ, ಸುಂದರವಾಗಿರುವ, ತರುಣಿಯಾಗಿರುವ ಸದಾರಮೆ. ಸದಾ ತರುಣಿಯಂತಿರುವ ಈ ನಾಟಕ ಪ್ರೇಕ್ಷಕರ ಮನದಲ್ಲಿ ಸದಾ ರಮೆಯಾಗಿಯೇ ಉಳಿದಿದೆ.

‘ಸ್ಪಂದನ’ ತಂಡ ಪ್ರದರ್ಶಿಸುತ್ತಿರುವ ಈ ನಾಟಕದ ಮೊದಲ ೨೦ ನಿಮಿಷ ಗಂಭೀರವಾಗಿದೆ. ಆಮೇಲೆ ಹಾಸ್ಯವೇ ಪ್ರಧಾನ. ಬಂಗಾರಶೆಟ್ಟಿ ಹಾಗೂ ಅವರ ಮಗ ಆದಿ ಮೂರ್ತಿಯ ಹಾಸ್ಯ ಗಮನ ಸೆಳೆಯುತ್ತದೆ. ಮುಖ್ಯವಾಗಿ ರಾಜನ ಕಥೆ ಹಾಗೂ ಸಾಮಾಜಿಕ ಕಥೆಯನ್ನು ಸೇರಿಸಿದ ಪರಿಣಾಮ ಜನಪ್ರಿಯವಾಯಿತು. ರಾಜಾ ಜಯವೀರ   ಸಾಮಾನ್ಯನಾದ ಬಂಗಾರಶೆಟ್ಟಿಯ ಮಗಳಾದ ಸದಾರಮೆಯನ್ನು ಮದುವೆಯಾಗುತ್ತಾನೆ. ಅದಕ್ಕೂ ಮೊದಲು ನಡೆಯುವ ದೃಶ್ಯಗಳಲ್ಲಿ ಬಂಗಾರಶೆಟ್ಟಿಯ ಪಾತ್ರದಲ್ಲಿ ಶ್ರೀನಿವಾಸ ಮೇಷ್ಟ್ರು ಹಾಗೂ ಆದಿಮೂರ್ತಿಯಾಗಿ ಲೋಕೇಶ್ ಆಚಾರ್ ಮಿಂಚುತ್ತಾರೆ. ಹಾಸ್ಯ ಸನ್ನಿವೇಶಗಳ ಮೂಲಕ ನಾಟಕದ ಮಧ್ಯಂತರವರೆಗೆ ಕೊಂಡೊಯ್ಯುತ್ತಾರೆ. ಜಯವೀರನಾಗಿ  ಅನಿಲ್, ಸದಾರಮೆಯಾಗಿ ಪೂಜಾ ರಾವ್ ಗಮನ ಸೆಳೆಯುತ್ತಾರೆ.

   ಮಧ್ಯಂತರದ ನಾಟಕ ಕಳ್ಳನ ಪಾತ್ರಧಾರಿಯಾಗಿ ಬಿ.ಜಯಶ್ರೀ ಅವರ ಪ್ರವೇಶ. ಅವರು ಹಾಡುವ ಹಾಡಿದು;

ಒಳ್ಳೆ ಸಮಯವು ಒಳ್ಳೆ ಸಮಯವು

ಕಳ್ಳತನವ ಮಾಡಲೆನಗಿದು ಒಳ್ಳೆ ಸಮಯವು

ಹೂತಿಟ್ಟ ದುಡ್ಡಿಗೆ ಅನ್ಯಾಯದ ಆ ದುಡ್ಡಿಗೆ

ನಾವೇ ಬಾಧ್ಯರು, ದಿಕ್ಕುಗೆಟ್ಟ ಮನೆಗೆ ನಾವೇ ಜವಾಬ್ದಾರರು

ಕಳ್ಳತನವ ಕಲಿತ ಜನರೇ ಪುಣ್ಯವಂತರು

ಡೊಳ್ಳು ಹೊಟ್ಟೆಯ ಪೊಲೀಸಿನವರ ಕಣ್ಣಿಗೆ ಬೀಳುವರೊ?

ಎಂದು ಹಾಡುತ್ತ ಗಮನ ಸೆಳೆಯುತ್ತಾರೆ.

ಬಾರೇ ಬಾರೇ ನನ್ನ ಹಿಂದೆ ಹಿಂದೆ

ನನ್ನ ನೆಚ್ಚಿ ಬಂದ ಪುರುಷರೆಲ್ಲ ಒಂದೇ ಒಂದೇ

ಎನ್ನುವುದರೊಂದಿಗೆ

ಓ ಡಿಯರ್

ಕಮ್ ಇಯರ್

ಪ್ಲೀಸ್ ಹಿಯರ್

ಟಾಕ್ ಆ್ಯಂಡ್ ಟಾಕ್ ಮಿ

ಲವಡಿ ಲೇಡಿ

ಎಂದು ಹಾಡಿದಾಗ ಪ್ರೇಕ್ಷಕರಿಂದ ಜೋರಾದ ಚಪ್ಪಾಳೆ. ಜಯದೇವನನ್ನು ಮದುವೆಯಾದ ಸದಾರಮೆ ಪಡಬಾರದ ಕಷ್ಟಪಡುತ್ತಾಳೆ. ಕೊನೆಗೆ ಜಯದೇವನ ಭೇಟಿಯೊಂದಿಗೆ ನಾಟಕ ಕೊನೆಗೊಳ್ಳುತ್ತದೆ. ಗುಬ್ಬಿ ವೀರಣ್ಣನವರ ಕಾಲದ ಹಾಡುಗಳನ್ನು, ಕಂಪೆನಿ ನಾಟಕದ ಸೀನರಿಗಳನ್ನು ಬಳಸಿಕೊಂಡ ಪರಿಣಾಮ ಪ್ರೇಕ್ಷಕರ ಮನ ಗೆದ್ದಿತು. ಗುಬ್ಬಿ ವೀರಣ್ಣ ಅವರು ನಿರ್ವಹಿಸುತ್ತಿದ್ದ ಕಳ್ಳನ ಪಾತ್ರವನ್ನು ಅನೇಕ ವರ್ಷಗಳಿಂದ ಬಿ.ಜಯಶ್ರೀ ಅವರು ನಿರ್ವಹಿಸುತ್ತಿದ್ದಾರೆ.

ಈ ನಾಟಕವನ್ನು ಕೆ.ಹಿರಣ್ಣಯ್ಯ ಅವರು ತಮ್ಮ ಹಿರಣ್ಣಯ್ಯ ಮಿತ್ರ ಮಂಡಳಿ ಮೂಲಕ ಆಡುತ್ತಿದ್ದರು. ಕಳ್ಳನ ಪಾತ್ರವನ್ನು ಅವರೇ ನಿರ್ವಹಿಸುತ್ತಿದ್ದರು. ಅವರ ಪುತ್ರ, ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರು ತಮ್ಮ ೮೦ನೇ ವರ್ಷಾಚರಣೆಗೆ ಮೈಸೂರು ರಂಗಾಯಣ ಕಲಾವಿದರು ಅಭಿನಯಿಸುತ್ತಿದ್ದ ‘ಸದಾರಮೆ’ ನಾಟಕವನ್ನು ಬೆಂಗಳೂರಿಗೆ ಆಹ್ವಾನಿಸಿ ಆಡಿಸಿದ್ದರು. ಇದಕ್ಕೂ ಮೊದಲು ಮೈಸೂರಿನ ರಂಗಾಯಣ ಕಲಾವಿದರು ೨೦೧೦ರಲ್ಲಿ ‘ಸದಾರಮೆ’ ನಾಟಕವನ್ನು ಆಡಿದ್ದರು. ಗುಬ್ಬಿ ಕಂಪೆನಿಯಲ್ಲಿ ಹಾರ್ಮೋನಿಯಂ ಮೇಷ್ಟ್ರಾಗಿದ್ದ ವೈ.ಎಂ.ಪುಟ್ಟಣ್ಣಯ್ಯ ಅವರು ಈ ನಾಟಕವನ್ನು ನಿರ್ದೇಶಿಸಿದ್ದರು. ಕಳ್ಳನ ಪಾತ್ರವನ್ನು ಹುಲಗಪ್ಪ ಕಟ್ಟಿಮನಿ ಹಾಗೂ ಮೈಮ್ ರಮೇಶ್ ನಿರ್ವಹಿಸಿದರೆ, ಸದಾರಮೆ ಪಾತ್ರವನ್ನು ಸರೋಜಾ ಹೆಗಡೆ ಹಾಗೂ ಪ್ರಮೀಳಾ ಬೆಂಗ್ರೆ ಸಮರ್ಥವಾಗಿ ನಿರ್ವಹಿಸಿದ್ದರು. ಬಂಗಾರಶೆಟ್ಟಿ ಪಾತ್ರವನ್ನು ಜಗದೀಶ್ ಮನೆವಾರ್ತೆ, ಆದಿಮೂರ್ತಿ ಪಾತ್ರಧಾರಿಯಾಗಿ ರಾಮು ಗಮನ ಸೆಳೆಯುತ್ತಿದ್ದರು.

ಚಿಕ್ಕ ಹುಡುಗರಾಗಿದ್ದಾಗ ನೋಡಿದ್ದ ಈ ನಾಟಕವನ್ನು ಯಥಾವತ್ತಾಗಿ ವೈ.ಎಂ. ಪುಟ್ಟಣ್ಣಯ್ಯ ಮೈಸೂರಿನ ರಂಗಾಯಣಕ್ಕೆ ನಿರ್ದೇಶಿಸಿದ್ದರು. ಈ ನಾಟಕಕ್ಕೆ ಮಧುಗಿರಿಯ ಎಸ್.ಕೆ.ಪದ್ಮಾದೇವಿ ಅವರು ಮೂರು ದಿನಗಳವರೆಗೆ ಸಂಪನ್ಮೂಲ ವ್ಯಕ್ತಿಯಾಗಿ ಬಂದು ಕಲಾವಿದರಿಗೆ ನೆರವಾಗಿದ್ದರು. ನರಹರಿ ಶಾಸ್ತ್ರಿಗಳೊಂದಿಗೆ ಪಾತ್ರ ಮಾಡಿದ್ದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು. ಈ ನಾಟಕಕ್ಕಾಗಿ ಅಪರೂಪವಾಗುತ್ತಿದ್ದ ಲೆಗ್ ಹಾರ್ಮೋನಿಯಂ ಬಳಸಿಕೊಂಡ ಪುಟ್ಟಣ್ಣಯ್ಯ ಅವರು, ಕ್ಲಾರಿಯೊನೆಟ್ ಕೂಡಾ ಉಪಯೋಗಿಸಿಕೊಂಡಿದ್ದರು. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲೂ ಈ ನಾಟಕ ಪ್ರದರ್ಶನ ಕಂಡಿತ್ತು.

ಇದಕ್ಕೂ ಮೊದಲು ಅಂದರೆ ೧೯೮೭ರಲ್ಲಿ ಹೆಗ್ಗೋಡಿನ ನೀನಾಸಂ ಈ ನಾಟಕವನ್ನು ತಿರುಗಾಟಕ್ಕೆ ಆಯ್ದುಕೊಂಡಿತ್ತು. ಸದಾರಮೆ ಆಧರಿಸಿ ‘ಮಿಸ್ ಸದಾರಮೆ’ ನಾಟಕವನ್ನು ಕೆ.ವಿ.ಸುಬ್ಬಣ್ಣ ರಚಿಸಿದ್ದರು. ಈ ನಾಟಕಕ್ಕೆ ಸಂಗೀತ ನೀಡಿ, ವಿನ್ಯಾಸಗೊಳಿಸಿ ನಿರ್ದೇಶಿಸಿದವರು ಬಿ.ವಿ. ಕಾರಂತರು. ಆಗ ಕಳ್ಳನ ಪಾತ್ರವನ್ನು ಏಣಗಿ ನಟರಾಜ ನಿರ್ವಹಿಸಿದ್ದರು. ಸದಾರಮೆ ಪಾತ್ರವನ್ನು ಸರೋಜಾ ಹೆಗಡೆ, ಲೀಲಾವತಿ ಹಾಗೂ ಮಂತ್ರಿ ಪಾತ್ರವನ್ನು ಪ್ರಮೀಳಾ ಬೆಂಗ್ರೆ, ಸದಾಶಿವ ಶಾಸ್ತ್ರಿ ಪಾತ್ರವನ್ನು ಜಗದೀಶ್ ಮನೆವಾರ್ತೆ ನಿರ್ವಹಿಸಿದ್ದರು.

ಹೀಗೆ ನಾಟಕವೊಂದು ಪರಂಪರೆಯಾಗಿ ಬೆಳೆದ ಬಗೆ ಅನನ್ಯ.

Similar News

ಜಗದಗಲ
ಜಗ ದಗಲ