ಮಂಡ್ಯದಲ್ಲಿ ರಸ್ತೆ ಅಪಘಾತ: ಕೊಡಗು ಮೂಲದ ತಾಯಿ, ಮಗ ಮೃತ್ಯು

Update: 2023-03-24 15:52 GMT

ಮಡಿಕೇರಿ ಮಾ.24 : ಮಂಡ್ಯದ ಗೆಜ್ಜೆಲಗೆರೆ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೊಡಗು ಜಿಲ್ಲೆಯ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವುದು ಶುಕ್ರವಾರ ವರದಿಯಾಗಿದೆ. 

ಕಾರಿನಲ್ಲಿದ್ದ ಬಲಮುರಿ ಗ್ರಾಮದ ಚೆಯ್ಯಂಡ ಕವಿತಾ(45) ಹಾಗೂ ಅವರ ಪುತ್ರ ಹತ್ತನೇ ತರಗತಿಯ ವಿದ್ಯಾರ್ಥಿ ಆರ್ಯನ್ (15) ಮೃತ ದುರ್ದೈವಿಗಳು. ಪತಿ ಚೆಯ್ಯಂಡ ಕಟ್ಟಿ ಮುತ್ತಪ್ಪ ಅವರಿಗೆ ಗಾಯಗಳಾಗಿದ್ದು, ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರು ಮತ್ತು ಟಾಟಾ ಏಸ್ ವಾಹನದ ನಡುವೆ ಢಿಕ್ಕಿ ಸಂಭವಿಸಿದ್ದು, ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಕಟ್ಟಿ ಮುತ್ತಪ್ಪ, ಕವಿತಾ ಹಾಗೂ ಆರ್ಯನ್ ಮಾ.23 ರಂದು ನಾಪೋಕ್ಲುವಿನಲ್ಲಿ ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವದಲ್ಲಿ ಪಾಲ್ಗೊಂಡು ಇಂದು ಕಾರಿನಲ್ಲಿ ಬೆಂಗಳೂರಿಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಇವರಿಗೆ ಪುತ್ರಿಯೂ ಇದ್ದು, ಬೆಂಗಳೂರಿನಲ್ಲೇ ಉಳಿದುಕೊಂಡ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಕಟ್ಟಿ ಮುತ್ತಪ್ಪ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಬಲಮುರಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
 

Similar News