ಬಿಕೆಯು ರೈತ ಚಳವಳಿಯನ್ನು ಪಠ್ಯದಿಂದ ಕೈಬಿಟ್ಟ ಎನ್‌ಸಿಇಆರ್‌ಟಿ

Update: 2023-04-26 15:51 GMT

ಹೊಸದಿಲ್ಲಿ,ಎ.25: ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರಾದ್ಯಂತ ಗಮನಸೆಳೆದಿದ್ದ ಕೆಲವು ವಿಷಯಗಳನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮಂಡಳಿ (ಎನ್‌ಸಿಇಆರ್‌ಟಿ) ತನ್ನ ಪಠ್ಯಪುಸ್ತಕಗಳಿಂದ ಕೈಬಿಟ್ಟಿದ್ದು, ಅವುಗಳಲ್ಲಿ ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ನಡೆದ ರೈತ ಚಳವಳಿಯೂ ಒಂದಾಗಿದೆ ಎಂದು ‘ ದಿ ಟ್ರಿಬ್ಯೂನ್’ ವರದಿ ಮಾಡಿದೆ.

‌ಭಾರತೀಯ ಕಿಸಾನ್ ಯೂನಿಯನ್ನ ರೈತ ಚಳವಳಿಯು, 12ನೇ ತರಗತಿಯ ರಾಜಕೀಯಶಾಸ್ತ್ರದ ಪಠ್ಯಪುಸ್ತಕದಲ್ಲಿ ‘ಜನಪ್ರಿಯ ಚಳವಳಿಗಳ ಉದಯ’ (ರೈಸ್ ಆಫ್ ಪೊಪ್ಯುಲರ್ ಮೂವ್ಮೆಂಟ್ಸ್) ಪಠ್ಯದಲ್ಲಿ ಉಲ್ಲೇಖಿಸಲ್ಪಟ್ಟಿತ್ತು. ಆದರೆ ಈಗ ಅದನ್ನು ಪಠ್ಯಭಾಗದಿಂದ ತೆಗೆದುಹಾಕಲಾಗಿದೆಯೆಂದು ವರದಿ ಹೇಳಿದೆ.

‘‘80ರ ದಶಕದುದ್ದಕ್ಕೂ, ಭಾರತೀಯ ಕಿಸಾನ್ ಯೂನಿಯನ್ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ರಾಷ್ಟ್ರ ರಾಜಧಾನಿಯಲ್ಲಿ ರೈತ ಚಳವಳಿಗಳನ್ನು ಆಯೋಜಿಸಿತ್ತು’’ ಎಂಬುದಾಗಿ ಪಠ್ಯದಲ್ಲಿ ಉಲ್ಲೇಖಿಸಲಾಗಿತ್ತು.

ಬಿಕೆಯು ನೇತೃತ್ವದ ರೈತಚಳವಳಿಯ ಕುರಿತ ವಿಷಯವನ್ನು ಎನ್‌ಸಿಇಆರ್‌ಟಿ ಪಠ್ಯದಿಂದ ಕೈಬಿಟ್ಟಿರುವ ವಿಚಾರವಾಗಿ ಕೇಂದ್ರ ಸರಕಾರದ ಪ್ರತಿನಿಧಿಗಳ ಜೊತೆ ತಾನು ಮಾತುಕತೆ ನಡೆಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಭಾರತೀಯ ಕಿಸಾನ್ಯೂನಿಯನ್ ಅನ್ನು ಮಹೇಂದ್ರ ಸಿಂಗ್ ಟಿಕಾಯತ್, ಚೌಧರಿ ಚರಣ್ ಸಿಂಗ್, ಎಂ.ಡಿ.ನಂಜುಂಡ ಸ್ವಾಮಿ, ನಾರಾಯಣಸ್ವಾಮಿ ನಾಯ್ಡು ಹಾಗೂ ಭೂಪಿಂದರ್ ಸಿಂಗ್ ಮಾನ್ ಸೇರಿದಂತೆ ಭಾರತದ ಪ್ರಮುಖ ರೈತ ನಾಯಕರು 1980 ದಶಕದ ಉತ್ತರಾರ್ಧದಲ್ಲಿ ಸ್ಥಾಪಿಸಿದ್ದರು.

ಪ್ರಸಕ್ತ ಮಹೇಂದ್ರ ಟಿಕಾಯತ್ ಅವರ ಪುತ್ರ ರಾಕೇಶ್ ಟಿಕಾಯತ್ ಅವರು ಭಾರತೀಯ ಕಿಸಾನ್ ಯೂನಿಯನ್ನ ನೇತೃತ್ವ ವಹಿಸಿದ್ದಾರೆ. 2021ರಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರಾಜಧಾನಿ ಹೊಸದಿಲ್ಲಿ ಸೇರಿದಂತೆ ದೇಶದ ವಿವಿಧೆಡೆ ರೈತ ಪ್ರತಿಭಟನೆಯನ್ನು ಬಿಕೆಯು ಆಯೋಜಿಸಿತ್ತು.

ಮೊಗಲ್ ಸಾಮ್ರಾಜ್ಯದ ಕುರಿತ ವಿವರಗಳು, ಆರೆಸ್ಸೆಸ್ ನ ಮೇಲೆ ನಿಷೇಧ ಹೇರಿಕೆ ಹಾಗೂ ಹಿಂದೂ-ಮುಸ್ಲಿಂ ಏಕತೆಯನ್ನು ಪ್ರತಿಪಾದಿಸಿದ್ದಕ್ಕಾಗಿ ಮಹಾತ್ಮಾಗಾಂಧಿಯವರ ಹತ್ಯೆ ನಡೆಸಲಾಯಿತು ಎಂಬ ವಿಷಯಗಳು ಎನ್‌ಸಿಇಆರ್‌ಟಿ ತನ್ನ ಪಠ್ಯಪುಸ್ತಕದಲ್ಲಿ ಕೈಬಿಟ್ಟಿರು ಇತರ ಪಠ್ಯ ಭಾಗಗಳಾಗಿವೆ.

Similar News